ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಸ್ಪರ್ಧೆಗೆ ಗ್ರಾಮೀಣ ಪ್ರತಿಭೆ

ನೇಪಾಳದಲ್ಲಿ ಫೆ.8ರಿಂದ ನಡೆಯುವ ಟೂರ್ನಿಗೆ ಆಯ್ಕೆ
Last Updated 28 ಜನವರಿ 2020, 19:45 IST
ಅಕ್ಷರ ಗಾತ್ರ

ಬೆಳಗಾವಿ: ಅಥಣಿ ತಾಲ್ಲೂಕಿನ ಸಪ್ತಸಾಗರ ಗ್ರಾಮದ ಸಂದೀಪ ರಾಮು ಕುಂಬಾರ ಅವರು, ನೇಪಾಳದಲ್ಲಿ ನಡೆಯುವ 17 ವರ್ಷದೊಳಗಿನವರ ಅಂತರರಾಷ್ಟ್ರೀಯ ಲಾಂಗ್‌ ಜಂಪ್‌ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಿದೇಶಿ ನೆಲದಲ್ಲಿ ಗೆಲುವಿನ ಪತಾಕೆ ಹಾರಿಸುವ ವಿಶ್ವಾಸದಲ್ಲಿ ಇದ್ದಾರೆ.

ಜಿಂಕೆಯಂತೆ ಜಿಗಿಯುವ ಈ ಗ್ರಾಮೀಣ ಪ್ರತಿಭೆ, 8ನೇ ತರಗತಿಯಿಂದಲೇ ಲಾಂಗ್‌ ಜಂಪ್‌ ಅಭ್ಯಾಸ ಮಾಡುತ್ತಿದ್ದಾರೆ; ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಅಥಣಿ ತಾಲ್ಲೂಕಿನ ನದಿಇಂಗಳಗಾಂವದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಪ್ರೌಢಶಾಲೆಯಲ್ಲಿ ಸರಿಯಾದ ಮಾರ್ಗದರ್ಶನ, ಪ್ರೋತ್ಸಾಹದ ಕೊರತೆ ಇತ್ತು. ಕಾಲೇಜಿಗೆ ಸೇರಿದ ಬಳಿಕ ದೈಹಿಕ ಶಿಕ್ಷಣ ಶಿಕ್ಷಕ ಜ್ಞಾನೇಶ್ವರ ಮುತ್ತಪ್ಪ ಚೌಗಲಾ, ಶಿವಾನಂದ ಅವರಾಜ ಮಾರ್ಗದರ್ಶನ ಪಡೆಯುತ್ತಿದ್ದಾರೆ. ವಿವಿಧೆಡೆ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನೀಡಲು ಸಿದ್ಧವಾಗಿದ್ದಾರೆ.

ಚಿನ್ನದ ಪದಕ: ದಸರಾ, ವಾರ್ಷಿಕ ಕ್ರೀಡಾಕೂಟ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಲಾಂಗ್ ಜಂಪ್‌ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಇತ್ತೀಚೆಗೆ ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ನಡೆದ ರಾಷ್ಟ್ರಮಟ್ಟದಲಾಂಗ್ ಜಂಪ್ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿದ್ದಾರೆ. ಇದರೊಂದಿಗೆ ಅಂತರರಾಷ್ಟ್ರೀಯ ಮಟ್ಟಕ್ಕೆ ಜಿಗಿದಿದ್ದಾರೆ.

ಫೆ. 8ರಿಂದ 10ರವರೆಗೆ ನೇಪಾಳದಲ್ಲಿ ನಡೆಯುವ6ನೇ ಇಂಡೋ ನೇಪಾಳ ಗೋಲ್ಡನ್‌ ಕಪ್‌‌– ಸ್ಪರ್ಧೆಯಲ್ಲಿ ಚಿನ್ನಕ್ಕೆ ಮುತ್ತಿಕ್ಕುವ ಗುರಿ ಅವರದು. ಆಯ್ಕೆಯಾದ ಬಳಿಕ ನಿರಂತರ ತಯಾರಿ ನಡೆಸಿದ್ದಾರೆ. ನಿತ್ಯ ಬೆಳಿಗ್ಗೆ, ಸಂಜೆ ಎರಡು ಗಂಟೆಗಳಿಗೂ ಹೆಚ್ಚು ಸಮಯ ತರಬೇತಿ ಪಡೆಯುತ್ತಿದ್ದಾರೆ. ತಮ್ಮ ಅಭ್ಯಾಸಕ್ಕೆ ಭಂಗ ಬಾರದಿರಲೆಂದು ಅವರು ಮೊಬೈಲ್‌ ಫೋನ್‌ ಬಳಸುತ್ತಿಲ್ಲ.

‘ಲಾಂಗ್‌ ಜಂಪ್‌, ಟ್ರಿಪಲ್‌ ಜಂಪ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೆದ್ದು, ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕೆಂಬ ಕನಸಿದೆ. ಅದಕ್ಕಾಗಿ ತರಬೇತಿ ನಡೆಸುತ್ತಿದ್ದೇನೆ. ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತರಬೇಕು ಎನ್ನುವ ಗುರಿ ಇದೆ’ ಎಂದು ಸಂದೀಪ ತಿಳಿಸಿದರು.

‘ಗ್ರಾಮೀಣ ಯುವಕರಲ್ಲಿ ಪ್ರತಿಭೆಗಳಿವೆ. ಆದರೆ, ಅವರಿಗೆ ಸರಿಯಾದ ಮಾರ್ಗದರ್ಶನವಿಲ್ಲ. ದೈಹಿಕ ಶಿಕ್ಷಣ ಶಿಕ್ಷಕನಾಗಿ ಸಂದೀಪ್‌ ಅವರಲ್ಲಿರುವ ಪ್ರತಿಭೆ ಗುರುತಿಸಿ ತರಬೇತಿ ನೀಡುತ್ತಿದ್ದೇನೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಪಡೆದರೆ ಒಲಿಂಪಿಕ್ಸ್‌ನಲ್ಲಿ ಆಡಲು ಅವರಿಗೆ ಅವಕಾಶ ಸಿಗುತ್ತದೆ. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಲಿದೆ’ ಎಂದು ದೈಹಿಕ ಶಿಕ್ಷಣ ಶಿಕ್ಷಕ ಜ್ಞಾನೇಶ್ವರ ಮುತ್ತಪ್ಪ ಚೌಗಲಾ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT