ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಹಣ ತೆಲಂಗಾಣದ ಕೋವಿಡ್‌ ಪರಿಹಾರ ನಿಧಿಗೆ ನೀಡಿದ ಸಾನಿಯಾ ಮಿರ್ಜಾ

Last Updated 11 ಮೇ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ತಾಯಿಯಾದ ನಂತರ ಯಶಸ್ವಿಯಾಗಿ ಅಂಗಣಕ್ಕೆ ಇಳಿಯುವ ಮೂಲಕ ಗಮನ ಸೆಳೆದ ಟೆನಿಸ್ ಪಟು ಸಾನಿಯಾ ಮಿರ್ಜಾ ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್‌) ನೀಡುವ ‘ಫೆಡ್ ಕಪ್‌ ಹರ್ಟ್‌ ಅವಾರ್ಡ್‌’ ಗೆದ್ದ ಭಾರತದ ಮೊದಲ ವ್ಯಕ್ತಿ ಎನಿಸಿಕೊಂಡರು. ಪ್ರಶಸ್ತಿ ಮೊತ್ತ ₹ ಒಂದೂವರೆ ಲಕ್ಷವನ್ನು ಕೋವಿಡ್ ವಿರುದ್ಧದ ಹೋರಾಟಕ್ಕಾಗಿ ಬಳಸಿಕೊಳ್ಳಲು ತೆಲಂಗಾಣದಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿ ಅವರು ಜನರ ಹೃದಯ ಗೆದ್ದಿದ್ದಾರೆ.

ಏಷ್ಯಾ ಒಷಿನಿಯಾ ವಲಯದಿಂದ ಸಾನಿಯಾ ಮಿರ್ಜಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಒಟ್ಟು 16,985 ಮತಗಳ ಪೈಕಿ ಸಾನಿಯಾಗೆ 10,000 ಮತಗಳು ಲಭಿಸಿವೆ. ಮೇ ಒಂದರಿಂದ ಆನ್‌ಲೈನ್ ಮೂಲಕ ಮತದಾನ ನಡೆದಿತ್ತು.

‘ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ವ್ಯಕ್ತಿ ಎನಿಸಿಕೊಳ್ಳಲು ಹೆಮ್ಮೆ ಇದೆ. ಇದನ್ನು ಇಡೀ ದೇಶಕ್ಕೆ ಮತ್ತು ನನ್ನ ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ರಾಷ್ಟ್ರಕ್ಕೆ ಇನ್ನಷ್ಟು ಗರಿಮೆ ತಂದುಕೊಡಲು ಮುಂದೆಯೂ ಪ್ರಯತ್ನಿಸುತ್ತೇನೆ’ ಎಂದು ಸಾನಿಯಾ ಹೇಳಿರುವುದಾಗಿ ಅಖಿಲ ಭಾರತ ಟೆನಿಸ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

2018ರ ಅಕ್ಟೋಬರ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಸಾನಿಯಾ ಈ ವರ್ಷದ ಜನವರಿಯಲ್ಲಿ ಅಂಗಣಕ್ಕೆ ಮರಳಿದ್ದರು. ಹೋಬರ್ಟ್ ಅಂತರರಾಷ್ಟ್ರೀಯ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಉಕ್ರೇನ್‌ನ ನಾದಿಯಾ ಕಿಚೆನೊಕ್ ಜೊತೆಗೂಡಿ ಪ್ರಶಸ್ತಿ ಗೆದ್ದಿದ್ದರು. ಈ ಹಿಂದೆ ಮಹಿಳೆಯರ ಡಬಲ್ಸ್‌ನ ವಿಶ್ವ ಕ್ರಮಾಂಕದಲ್ಲಿ ಮೊದಲ ಸ್ಥಾನ ಗಳಿಸಿದ್ದ ಸಾನಿಯಾ ಆರು ಬಾರಿ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಗಳಿಸಿದ್ದಾರೆ.

ಅನೆಟ್ ಕೊಂಟವೇಟ್‌ಗೂ ಗೌರವ: ಯುರೋಪ್ ಮತ್ತು ಆಫ್ರಿಕಾ ವಲಯದಿಂದ ಎಸ್ತೋನಿಯಾದ ಅನೆಟ್ ಕೊಂಟವೇಟ್‌, ಅಮೆರಿಕ ವಲಯದಿಂದ ಮೆಕ್ಸಿಕೊದ ಫರ್ನಾಂಡಾ ಗೊಮೆಜ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಿಶಿಷ್ಟ ಸಾಧನೆಯ ಮೂಲಕ ಫೆಡರೇಷನ್ ಕಪ್‌ ಟೂರ್ನಿಯಲ್ಲಿ ಗಮನ ಸೆಳೆದವರಿಗಾಗಿ 2009ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT