ಶುಕ್ರವಾರ, ಡಿಸೆಂಬರ್ 6, 2019
21 °C

ಸಂಜೀವ್‌ ಕೈತಪ್ಪಿದ ಫೈನಲ್‌ ಅರ್ಹತೆ

Published:
Updated:
Prajavani

ಪುಟಿಯನ್‌ (ಚೀನಾ): ಭಾರತದ ಶೂಟರ್‌ ಸಂಜೀವ್‌ ರಜಪೂತ್‌ ಅವರು ಪ್ರತಿಷ್ಠಿತ ವಿಶ್ವಕಪ್‌ ಫೈನಲ್ಸ್‌ನಲ್ಲಿ ಕೇವಲ ಒಂದು ಸ್ಕೋರ್‌ನಿಂದ ಫೈನಲ್‌ ಪ್ರವೇಶಿಸುವ ಅವಕಾಶ ಕಳೆದುಕೊಂಡರು.

ಮಂಗಳವಾರ ನಡೆದ ಪುರುಷರ 50 ಮೀಟರ್ಸ್‌ ರೈಫಲ್‌–3 ‍ಪೊಸಿಷನ್‌ ವಿಭಾಗದ ಅರ್ಹತಾ ಸುತ್ತಿನಲ್ಲಿ ಸಂಜೀವ್‌ ಒಟ್ಟು 1,153 ಸ್ಕೋರ್‌ ಗಳಿಸಿ ಒಂಬತ್ತನೇ ಸ್ಥಾನ ಪಡೆದರು.

1,154 ಸ್ಕೋರ್‌ ಸಂಗ್ರಹಿಸಿದ ಪೋಲೆಂಡ್‌ನ ಥಾಮಸ್‌ ಬಾರ್ಟನಿಕ್‌ ಅವರು ಎಂಟನೇ ಸ್ಥಾನದೊಂದಿಗೆ ಫೈನಲ್‌  ಪ್ರವೇಶಿಸಿದರು. ಜೆಕ್‌ ಗಣರಾಜ್ಯದ ಫಿಲಿಪ್‌ ನೆಪೆಜ್‌ಚಲ್‌ ಅವರು ಜೂನಿಯನ್‌ ವಿಭಾಗದ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕಕ್ಕೆ (462.9 ಸ್ಕೋರ್‌) ಕೊರಳೊಡ್ಡಿದರು.

ಮಿಲೆಂಕೊ ಸೆಬಿಕ್‌ (461.5) ಬೆಳ್ಳಿ ಗೆದ್ದರೆ, ಸರ್ಜಿ ಕಮನ್‌ಸ್ಕಿಯ್‌ (449.8) ಕಂಚಿನ ಪದಕ ಪಡೆದರು.

ಇದೇ ವಿಭಾಗದಲ್ಲಿ ಕಣದಲ್ಲಿದ್ದ ಅಖಿಲ್‌ ಶೆರಾನ್‌ ಅವರು ಅರ್ಹತಾ ಹಂತದಲ್ಲಿ 13ನೇ ಸ್ಥಾನ ಪಡೆದರು. ಅವರು ಒಟ್ಟು 1,147 ಸ್ಕೋರ್‌ ಗಳಿಸಿದರು.

50 ಮೀಟರ್ಸ್‌ ರೈಫಲ್‌–3 ಪೊಸಿಷನ್‌ ಸ್ಪರ್ಧೆಯ ಮಹಿಳಾ ವಿಭಾಗದ ಚಿನ್ನದ ಪದಕ ಬ್ರಿಟನ್‌ನ ಸಿಯೊನೆಡ್‌ ಮಿಕಿಂತೋಷ್‌ ಅವರ ‍ಪಾಲಾಯಿತು.

ಚೀನಾದ ಪೀ ರುಯಿಜಿಯಾವೊ ಮತ್ತು ನೀನಾ ಕ್ರಿಸ್ಟಿನ್‌ ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು. ಭಾರತದ ಅಂಜುಮ್‌ ಮೌದ್ಗಿಲ್‌, ಅರ್ಹತಾ ಹಂತದಲ್ಲಿ 13ನೇಯವರಾಗಿ ಸ್ಪರ್ಧೆ ಮುಗಿಸಿದರು. ಅವರು 1,147 ಸ್ಕೋರ್‌ ಕಲೆಹಾಕಿದರು.

ಪ್ರತಿಕ್ರಿಯಿಸಿ (+)