ಬುಧವಾರ, ಮೇ 12, 2021
26 °C
ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ಕಂಚಿನ ಪದಕ ಗಳಿಸಿದ ಸೀಮಾ ಬಿಸ್ಲಾ, ಪೂಜಾ

ಸರಿತಾ ಮೊರ್‌ಗೆ ಚಾಂಪಿಯನ್ ಪಟ್ಟ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಅಲ್ಮಾಟಿ: ಸೋಲಿನ ಸುಳಿಯಿಂದ ಮೇಲೆದ್ದು ಸತತ ಒಂಬತ್ತು ಪಾಯಿಂಟ್‌ಗಳನ್ನು ಕಲೆ ಹಾಕಿದ ಸರಿತಾ ಮೊರ್ ಅವರು ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ 59 ಕೆಜಿ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಗುರುವಾರ ಇಲ್ಲಿ ನಡೆದ ಚಾಂಪಿಯನ್‌ಷಿಪ್‌ನ 50 ಕೆಜಿ ವಿಭಾಗದಲ್ಲಿ ಸೀಮಾ ಬಿಸ್ಲಾ ಮತ್ತು 76 ಕೆಜಿ ವಿಭಾಗದಲ್ಲಿ ಪೂಜಾ ಕಂಚಿನ ಪದಕ ಗಳಿಸಿದರು.

ಕಳೆದ ವರ್ಷ ನವದೆಹಲಿಯಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದ ಸರಿತಾ ಮಂಗೋಲಿಯಾದ ಶೂವಡೊರ್ ಬಾಟರ್ಜವ್ ಎದುರಿನ ಫೈನಲ್ ಹಣಾಹಣಿಯಲ್ಲಿ 1–7ರ ಹಿನ್ನಡೆ ಅನುಭವಿಸಿದ್ದರು. ನಂತರ ಚೇತರಿಸಿಕೊಂಡು ಪ್ರಶಸ್ತಿ ಗೆದ್ದರು. 1–3ರ ಹಿನ್ನಡೆಯಲ್ಲಿದ್ದಾಗ ನಿಯಂತ್ರಣ ಕಳೆದುಕೊಂಡ ಸರಿತಾ ಎದುರಾಳಿಗೆ ಒಂದು ಪಾಯಿಂಟ್ ಬಿಟ್ಟುಕೊಟ್ಟರು. ಆದರೆ ಮಂಗೋಲಿಯಾದ ಕೋಚ್‌ ತೀರ್ಪು ಮರುಪರಿಶೀಲನೆಗೆ ಮನವಿ ಸಲ್ಲಿಸಿದರು. ಇದರಿಂದ ಶೂವಡೊರ್‌ಗೆ ನಾಲ್ಕು ಪಾಯಿಂಟ್‌ಗಳು ಲಭಿಸಿದವು.

ನಂತರ ಸರಿತಾ ಅವರನ್ನು ನಿಯಂತ್ರಿಸಲು ಶೂವಡೊರ್‌ಗೆ ಸಾಧ್ಯವಾಗಲಿಲ್ಲ. 7–7ರ ಸಮಬಲ ಸಾಧಿಸಿದ್ದ ಸಂದರ್ಭದಲ್ಲಿ ತೀರ್ಪು ಮರುಪರಿಶೀಲನೆ ಮಾಡಿದ ಮಂಗೋಲಿಯಾ ಒಂದು ಅವಕಾಶವನ್ನು ಕಳೆದುಕೊಂಡಿದ್ದು ಮಾತ್ರವಲ್ಲ, ಸರಿತಾಗೆ ಹೆಚ್ಚುವರಿ ಪಾಯಿಂಟ್ ಕೂಡ ಕಾಣಿಕೆಯಾಗಿ ನೀಡಿತು. ಹೀಗಾಗಿ ಭಾರತದ ಮುನ್ನಡೆ 10–7ಕ್ಕೆ ಏರಿತು.

ಮೊದಲ ಬೌಟ್‌ನಲ್ಲಿ ಮಂಗೋಲಿಯಾದ ಎದುರಾಳಿಗೆ 4–5ರಲ್ಲಿ ಮಣಿದಿದ್ದ ಸರಿತಾ ನಂತರ ಕಜಕಸ್ತಾನದ ಡಯಾನಾ ಕಯುಮೊವಾ ಎದುರು ಗೆಲುವು ಸಾಧಿಸಿದ್ದರು.

ಸೀಮಾ ಮೊದಲ ಸುತ್ತಿನಲ್ಲಿ ಕಜಕಸ್ತಾನದ ವ್ಯಾಲೆಂಟೀನಾ ಇವನೊವಾನಗೆ ಮಣಿದರು. ಆದರೆ ಮುಂದಿನ ಸುತ್ತಿನಲ್ಲಿ ಮಂಗೋಲಿಯಾದ ಅನುದಾರಿ ನಂದಿನ್ಸೆತ್ಸೆಗ್‌ ವಿರುದ್ಧ ಜಯ ಸಾಧಿಸಿದರು. ಸೆಮಿಫೈನಲ್‌ನಲ್ಲಿ ಉಜ್ಬೆಕಿಸ್ತಾನದ ಜಾಸ್ಮಿನಾ ಇಮಾವೆವಾಗೆ 2–3ರಲ್ಲಿ ಮಣಿದರು.

ಪೂಜಾ ಮೊದಲ ಬೌಟ್‌ನಲ್ಲಿ ಕೊರಿಯಾದ ಸಿಯೊಯೆನ್ ಜೊಂಗ್‌ಗೆ 2–0 ಅಂತರದಲ್ಲಿ ಸೋಲುಣಿಸಿದರು. ಸೆಮಿಫೈನಲ್‌ನಲ್ಲಿ ಕಜಕಸ್ತಾನದ ಎಲ್ಮಿರಾ ಸಿಡಿಕೊವಾ ಎದುರು ಸೋತರು. 68 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ನಿಶಾ ಆರಂಭದ ಎರಡು ಸುತ್ತಿನಲ್ಲೂ ಸೋತು ಹೊರಬಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.