ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಪುರುಷರ ಡಬಲ್ಸ್‌ನಲ್ಲಿ ಭಾರತಕ್ಕೆ ಪದಕ

Last Updated 27 ಆಗಸ್ಟ್ 2022, 13:50 IST
ಅಕ್ಷರ ಗಾತ್ರ

ಟೋಕಿಯೊ: ಭಾರತದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ಡಬಲ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗಳಿಸಿದ್ದಾರೆ.ಚಾಂಪಿಯನ್‌ಷಿಪ್‌ನ ಈ ವಿಭಾಗದಲ್ಲಿ ಪದಕ ಸಾಧನೆ ಮಾಡಿದ ಭಾರತದಮೊದಲ ಜೋಡಿ ಎಂಬ ಶ್ರೇಯ ಅವರದಾಯಿತು.

ಜಪಾನ್‌ನ ಟೋಕಿಯೊದಲ್ಲಿ ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ಆಟಗಾರರು22-20, 18-21, 16-21ರಿಂದ ಮಲೇಷ್ಯಾದ ಆ್ಯರನ್ ಚಿಯಾ ಮತ್ತು ಸೋಹ್ ವೂಯಿ ಯಿಕ್ ವಿರುದ್ಧ ಸೋತರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿರುವ ಭಾರತದ ಜೋಡಿ ಮೊದಲ ಗೇಮ್‌ ಜಯದ ಲಾಭ ಪಡೆಯುವಲ್ಲಿ ಎಡವಿತು. ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಆ್ಯರನ್‌ ಮತ್ತು ಸೋಹ್‌ 77 ನಿಮಿಷಗಳ ಹಣಾಹಣಿಯಲ್ಲಿ ಭಾರತದ ಆಟಗಾರರ ಸವಾಲು ಮೀರಿದರು.

ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್‌ಗಳಾದ ಸಾತ್ವಿಕ್– ಚಿರಾಗ್‌ ಜೋಡಿಗೆ ಮಲೇಷ್ಯಾ ಆಟಗಾರರ ಎದುರು ಇದು ಸತತ ಆರನೇ ಸೋಲಾಗಿದೆ.

ಚಾಂಪಿಯನ್‌ಷಿಪ್‌ನಲ್ಲಿ 2011ರಿಂದ ಭಾರತದ ಆಟಗಾರರು ಬರಿಗೈಯಿಂದ ಮರಳಿಲ್ಲ. ಆ ವರ್ಷ ಮಹಿಳಾ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ– ಜ್ವಾಲಾ ಗುಟ್ಟಾ ಕಂಚು ಜಯಿಸಿದ್ದರು.

ನಾಲ್ಕರ ಘಟ್ಟದ ಸೆಣಸಾಟದಲ್ಲಿ ಚಿರಾಗ್‌ ಅವರಿಗೆ ಸರ್ವ್‌ ಮತ್ತು ಡಿಫೆನ್ಸ್‌ಗಳಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಲಾಗಲಿಲ್ಲ. ಆದರೆ ಸಾತ್ವಿಕ್‌ ಸಾಧ್ಯವಾದಷ್ಟು ಶ್ರೇಷ್ಠ ಆಟವಾಡಿದರು.

ಮೊದಲ ಗೇಮ್‌ನ ಆರಂಭದಲ್ಲಿ ನಿಖರ ಸ್ಮ್ಯಾಷ್‌ಗಳ ಮೂಲಕ ಗಮನಸೆಳೆದ ಭಾರತದ ಆಟಗಾರರು ವಿರಾಮದ ವೇಳೆಗೆ 11–5ರಿಂದ ಮುನ್ನಡೆ ಗಳಿಸಿದರು. ಚೇತರಿಸಿಕೊಂಡಆ್ಯರನ್ ಮತ್ತು ಸೋಹ್ 16–16ರ ಸಮಬಲಕ್ಕೆ ತಂದರು. ಬಳಿಕ ನಡೆದ ತುರುಸಿನ ಪೈಪೋಟಿಯಲ್ಲಿ ಗೇಮ್‌ ತಮ್ಮದಾಗಿಸಿಕೊಳ್ಳುವಲ್ಲಿ ಚಿರಾಗ್‌–ಸಾತ್ವಿಕ್ ಯಶಸ್ವಿಯಾದರು.

ಜಿದ್ದಾಜಿದ್ದಿನಿಂದ ಕೂಡಿದ್ದ ಎರಡನೇ ಗೇಮ್‌ನ ವಿರಾಮದ ವೇಳೆಗೆ ಮಲೇಷ್ಯಾ ಆಟಗಾರರು ಒಂದು ಪಾಯಿಂಟ್‌ನಿಂದ ಮೇಲುಗೈ ಸಾಧಿಸಿದ್ದರು. ಅದೇ ಲಯದೊಂದಿಗೆ ಮುನ್ನುಗ್ಗಿ ಗೇಮ್ ತಮ್ಮದಾಗಿಸಿಕೊಂಡರು.

ನಿರ್ಣಾಯಕ ಮೂರನೇ ಗೇಮ್ ಮತ್ತಷ್ಟು ರಂಗೇರಿತು. ಒಂದು ಬಾರಿ ಭಾರತ ಮತ್ತೊಂದು ಸಲ ಮಲೇಷ್ಯಾ ಆಟಗಾರರು ಮುನ್ನಡೆ ಪಡೆಯುತ್ತ ಸಾಗಿದರು. ವಿರಾಮದ ವೇಳೆಗೆಆ್ಯರನ್ ಮತ್ತು ಸೋಹ್ ಒಂದು ಪಾಯಿಂಟ್‌ನಿಂದ ಮೇಲುಗೈ ಸಾಧಿಸಿದರು. ಬಳಿಕ ಚುರುಕಿನ ಸರ್ವ್‌ಗಳು ಅವರ ಗೆಲುವಿಗೆ ಸಹಕಾರಿಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT