ಬುಧವಾರ, ನವೆಂಬರ್ 20, 2019
25 °C
ಮಹಿಳಾ ಡಬಲ್ಸ್‌ನಲ್ಲಿ ಭಾರತದ ಸ್ಪರ್ಧಿಗಳಿಗೆ ನಿರಾಸೆ

ಏಷ್ಯನ್‌ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್: ಕ್ವಾರ್ಟರ್‌ ಫೈನಲ್‌ಗೆ ಶರತ್‌–ಸತ್ಯನ್‌

Published:
Updated:
Prajavani

ನವದೆಹಲಿ: ಭಾರತದ ಅಚಂತ ಶರತ್‌ ಕಮಲ್‌ ಮತ್ತು ಜಿ.ಸತ್ಯನ್‌ ಅವರು ಇಂಡೊನೇಷ್ಯಾದಲ್ಲಿ ನಡೆಯುತ್ತಿರುವ ಐಟಿಟಿಎಫ್‌ ಏಷ್ಯನ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಶರತ್‌ ಮತ್ತು ಸತ್ಯನ್‌ 11–8, 11–6, 11–3 ನೇರ ಗೇಮ್‌ಗಳಿಂದ ಬಹರೇನ್‌ನ ಮಹಫೂದ್‌ ಸೈಯದ್‌ ಮುರ್ತಧಾ ಮತ್ತು ರಶೀದ್‌ ಅವರನ್ನು ಮಣಿಸಿದರು.

ಮುಂದಿನ ಸುತ್ತಿನಲ್ಲಿ ಭಾರತದ ಜೋಡಿಗೆ ಚೀನಾದ ಲಿಯಾಂಗ್‌ ಜಿಂಗ್‌ಕುನ್‌ ಮತ್ತು ಲಿನ್‌ ಗಾವೊಯುನ್‌ ಸವಾಲು ಎದುರಾಗಲಿದೆ.

ಮೊದಲ ಸುತ್ತಿನಲ್ಲಿ ‘ಬೈ’ ಪಡೆದಿದ್ದ ಶರತ್ ಮತ್ತು ಸತ್ಯನ್‌ ಅವರು ಎರಡನೇ ಸುತ್ತಿನಲ್ಲಿ 11–4, 11–7, 11–7ರಲ್ಲಿ ಜೋರ್ಡನ್‌ನ ಅಬೊ ಯಾಮನ್‌ ಜೈದ್‌ ಮತ್ತು ಅಲ್ದಮೈಜಿ ಜೆಯಾದ್‌ ಅವರನ್ನು ಸೋಲಿಸಿದ್ದರು.

ಹರ್ಮೀತ್ ದೇಸಾಯಿ ಮತ್ತು ಅಂಥೋಣಿ ಅಮಲರಾಜ್‌ ಎರಡನೇ ಸುತ್ತಿನಲ್ಲಿ ಪರಾಭವಗೊಂಡರು.

ಮೊದಲ ಸುತ್ತಿನಲ್ಲಿ ‘ಬೈ’ ಪಡೆದಿದ್ದ ಹರ್ಮೀತ್‌ ಮತ್ತು ಅಂಥೋಣಿ, ನಂತರ 11–5, 7–11, 11–3, 8–11, 6–11ರಲ್ಲಿ ಚೀನಾ ತೈಪೆಯ ಲಿವು ಹಿಸಿಂಗ್‌ ಯಿನ್‌ ಮತ್ತು ಪೆಂಗ್‌ ವಾಂಗ್‌ ವೀ ವಿರುದ್ಧ ಸೋತರು.

ಮಹಿಳಾ ಡಬಲ್ಸ್‌ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಮಣಿಕಾ ಬಾತ್ರಾ ಮತ್ತು ಅರ್ಚನಾ ಕಾಮತ್‌ 6–11, 9–11, 7–11ರಲ್ಲಿ ಯಾಂಗ್‌ ಹಯೆವುನ್‌ ಮತ್ತು ಜೆವೊನ್‌ ಝೀ ಎದುರು ನಿರಾಸೆ ಕಂಡರು.

ಮೊದಲ ಸುತ್ತಿನಲ್ಲಿ ಅರ್ಚನಾ ಮತ್ತು ಮಣಿಕಾ 3–0ರಲ್ಲಿ ಕಜಕಸ್ತಾನದ ಲವನೊವಾ ಅನಸ್ತೇಸಿಯಾ ಮತ್ತು ಖುಸೈನೊವಾ ಗುಲ್‌ಚೆಕ್ರಾ ಎದುರು ಗೆದ್ದಿದ್ದರು.

ಮಧುರಿಕಾ ಪಾಟ್ಕರ್‌ ಮತ್ತು ಸುತೀರ್ಥ ಮುಖರ್ಜಿ 9–11, 5–11, 11–13ರಲ್ಲಿ ಹಾಂಕಾಂಗ್‌ನ ಡೂ ಹೊಯಿ ಕೆಮ್‌ ಮತ್ತು ಲೀ ಹೊ ಚಿಂಗ್‌ ಎದುರು ಪರಾಭವಗೊಂಡರು.

ಇದಕ್ಕೂ ಮೊದಲು ನಡೆದಿದ್ದ ಪಂದ್ಯದಲ್ಲಿ ಮಧುರಿಕಾ ಮತ್ತು ಸುತೀರ್ಥ 3–0ರಲ್ಲಿ ಮಕಾವ್‌ನ ತಾವೊ ಚೊಂಗ್‌ ಮತ್ತು ಲೀ ವೀ ಮೀ ಎದುರು ವಿಜಯಿಯಾಗಿದ್ದರು.

ಮಿಶ್ರ ಡಬಲ್ಸ್‌ ವಿಭಾಗದ 32ರ ಘಟ್ಟದ ಪಂದ್ಯಗಳಲ್ಲಿ ಶರತ್‌ ಕಮಲ್‌ ಮತ್ತು ಮಣಿಕಾ 9–11, 8–11, 7–11ರಲ್ಲಿ ಲೀ ಸಂಗ್ಸು ಮತ್ತು ಜಿಯೊ ಝೀ ಎದುರೂ, ಸತ್ಯನ್‌ ಮತ್ತು ಅರ್ಚನಾ 7–11, 9–11, 11–13ರಲ್ಲಿ ವಾಂಗ್‌ ಚುಕಿನ್‌ ಮತ್ತಯ ಸನ್‌ ಯಿಂಗ್ಶಾ ಮೇಲೂ ಸೋತರು.

ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಪಂದ್ಯಗಳಲ್ಲಿ ಶರತ್‌, ಸತ್ಯನ್‌, ಅಂಥೋಣಿ ಅಮಲರಾಜ್‌, ಹರ್ಮೀತ್‌ ದೇಸಾಯಿ ಮತ್ತು ಮಾನವ್‌ ಠಕ್ಕರ್‌ ಅವರು ಗೆದ್ದರು. ಎಲ್ಲರಿಗೂ ಮೊದಲ ಸುತ್ತಿನಲ್ಲಿ ‘ಬೈ’ ಸಿಕ್ಕಿತ್ತು.

ಪ್ರತಿಕ್ರಿಯಿಸಿ (+)