ಬಡತನದಲ್ಲಿ ಅರಳಿ ಸಾಧನೆಯ ‘ಹೆಜ್ಜೆಗುರುತು’ ಮೂಡಿಸುತ್ತಿರುವ ಶೀತಲ್

7
ಹಲವು ಪದಕ ಗೆದ್ದ ಓಟಗಾರ್ತಿ

ಬಡತನದಲ್ಲಿ ಅರಳಿ ಸಾಧನೆಯ ‘ಹೆಜ್ಜೆಗುರುತು’ ಮೂಡಿಸುತ್ತಿರುವ ಶೀತಲ್

Published:
Updated:
Deccan Herald

ಬೆಳಗಾವಿ: ಟ್ರ್ಯಾಕ್‌ಗಿಳಿದರೆ ಜಿಂಕೆಯೂ ನಾಚುವಂತೆ ಓಡುವ ಅಥ್ಲೀಟ್ ಶೀತಲ ಕೊಲ್ಲಾಪುರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಕ್ರೀಡಾ ಲೋಕದಲ್ಲಿ ತಮ್ಮದೇ ‘ಹೆಜ್ಜೆಗುರುತು’ಗಳನ್ನು ಮೂಡಿಸುತ್ತಿದ್ದಾರೆ.

ಇಲ್ಲಿನ ಟಿಳಕವಾಡಿಯ ಅವರು ಇತ್ತೀಚೆಗೆ ಮಲೇಷಿಯಾದಲ್ಲಿ ನಡೆದ ‘ಏಷ್ಯಾ ಪೆಸಿಫಿಕ್ ಮಾಸ್ಟ್‌ರ್ಸ್‌ ಕ್ರೀಡಾಕೂಟ’ದಲ್ಲಿ 4 ಚಿನ್ನದ ಪದಕ ಹಾಗೂ 1 ಬೆಳ್ಳಿ ಪದಕಕ್ಕೆ ಕೊರಳೊಡ್ಡುವ ಮೂಲಕ ದೇಶದ ಗಮನಸೆಳೆದಿದ್ದಾರೆ.

ಮಹಾದೇವ ಪಾಟೀಲ–ನಂದಾ ದಂಪತಿಗೆ 1985ರ ಮೇ 16ರಂದು ಜನಿಸಿದ ಅವರು, ಬಡತನದಲ್ಲಿ ಬೆಳೆದವರು. ಮೂವರು ಕಿರಿಯ ಸಹೋದರಿಯರಿದ್ದಾರೆ. ಬಾಲಿಕಾ ಅದರ್ಶ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿದ್ದಾಗ ಅವರ ಕ್ರೀಡಾಸಕ್ತಿ ಗಮನಿಸಿದ ದೈಹಿಕ ಶಿಕ್ಷಕ ರಾಜು ಪಾಟೀಲ ಪ್ರೋತ್ಸಾಹ ನೀಡಿದರು. ಈಕೆ ಬೆಳೆಯುವ ಸಿರಿ ಎನ್ನುವುದನ್ನು ಗುರುತಿಸಿ, ಮಾರ್ಗದರ್ಶನ ನೀಡಿದರು.

ಪ್ರೌಢಶಾಲೆಯಲ್ಲಿದ್ದಾಗ ತಮಿಳುನಾಡಿನ ಸೇಲಂನಲ್ಲಿ ನಡೆದ 2000 ಮೀ. ಓಟದ ಸ್ಪರ್ಧೆಯಲ್ಲಿ ದ್ವಿತೀಯ, ಕೇರಳದಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಗೋವಾ ಮ್ಯಾರಾಥಾನ್‌ನಲ್ಲಿ ದ್ವಿತೀಯ ಬಹುಮಾನ ಪಡೆದವರು.

ಮದುವೆಯಿಂದ ಓಟಕ್ಕೆ ಬ್ರೇಕ್:

ಪಿಯುಸಿ ನಂತರ ಮುಂದೆ ಓದಲಿಲ್ಲ. ಬಡತನದ ಕಾರಣದಿಂದ 18ನೇ ವಯಸ್ಸಿನಲ್ಲಿ ಅವರ ಮದುವೆ ಮಾಡಲಾಯಿತು. ಹೀಗಾಗಿ, ಕ್ರೀಡಾಲೋಕದಿಂದ ದೂರ ಉಳಿದರು. ಪತಿ ದಿನೇಶ ಕೊಲ್ಲಾಪುರೆ. ಈ ದಂಪತಿಗೆ 11 ವರ್ಷದ ಮಗ  ಹಾಗೂ 10 ವರ್ಷದ ಮಗಳು ಇದ್ದಾರೆ.

ಸಾಧಿಸುವ ತುಡಿತದಿಂದ ಮತ್ತೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದಾಗ, ಪತಿ ಹಾಗೂ ಮನೆಯವರು ಪ್ರೋತ್ಸಾಹ ನೀಡಿದರು. ಹೀಗಾಗಿ, 7 ವರ್ಷಗಳ ಬಳಿಕ ಸ್ಪರ್ಧೆಗಿಳಿಯುತ್ತಿದ್ದಾರೆ. 2011ರಲ್ಲಿ ಬೆಂಗಳೂರಿನಲ್ಲಿ ನಡೆದ ಮ್ಯಾರಾಥಾನನಲ್ಲಿ ತೃತೀಯ ಸ್ಥಾನ ಗಳಿಸಿದರು. ಈ ಸಾಧನೆ ಅವರ ಕ್ರೀಡಾ ಬದುಕಿಗೆ ಮರುಜನ್ಮ ನೀಡಿತು. ಈಗ, 33ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಅಮೋಘ ಸಾಧನೆ ತೋರುತ್ತಿದ್ದಾರೆ.

ಪದಕಗಳ ಹಾರ:

2016ರಲ್ಲಿ ಲಕ್ನೋದಲ್ಲಿ ನಡೆದ ‘ಅಥ್ಲೆಟಿಕ್ ಚಾಂಪಿಯನ್‌ಷಿಪ್’ನ 200 ಮೀ. ಮತ್ತು 400 ಮೀ. ಓಟದಲ್ಲಿ ಚಿನ್ನದ ಪದಕ, ಅದೇ ವರ್ಷ ಶ್ರೀಲಂಕಾದಲ್ಲಿ ನಡೆದ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ 200 ಮೀ., 400 ಮೀ., 800 ಮೀ. ಓಟದಲ್ಲಿ ಚಿನ್ನದ ಪದಕದೊಂದಿಗೆ ಶ್ರೇಷ್ಠ ಮಹಿಳಾ ಕ್ರೀಡಾಪಟು ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

2017ರಲ್ಲಿ ನ್ಯೂಜಿಲೆಂಡ್‌ನ ಅಕ್ಲೆಂಡ್‌ನಲ್ಲಿ ನಡೆದ ‘ವರ್ಲ್ ಮಾಸ್ಟ್‌ರ್ಸ್ ಗೇಮ್ಸ್‌’ನಲ್ಲಿ 800 ಮೀ. ಮತ್ತು 1500 ಮೀ. ಓಟದಲ್ಲಿ ಚಿನ್ನ ಹಾಗೂ 400 ಮೀ. ಓಟದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಅದೇ ವರ್ಷ ನಾಸಿಕ್‌ನಲ್ಲಿ ನಡೆದ ಇಂಡಿಯಾ ಮಾಸ್ಟ್‌ರ್ಸ್ ಅಥ್ಲೆಟಿಕ್ಸ್‌ನ 400 ಮೀ., 800 ಮೀ., 1500 ಮೀ. ಓಟದಲ್ಲಿ ಚಿನ್ನದ ಪದಕಗಳಿಗೆ ಮುತ್ತಿಕ್ಕಿದ ಸಾಧನೆ ಅವರದು.

ಮಕ್ಕಳಿಗೆ ಉಚಿತ ತರಬೇತಿ:

ಇದೇ ಸೆಪ್ಟೆಂಬರ್‌ನಲ್ಲಿ ಮಲೇಷಿಯಾದ ಪೆನಾಂಗ್‌ನಲ್ಲಿ ನಡೆದ ‘ಏಷ್ಯಾ ಪೆಸಿಫಿಕ್ ಮಾಸ್ಟ್‌ರ್ಸ್ ಕ್ರೀಡಾಕೂಟ’ದಲ್ಲಿ 4x400 ಮೀಟರ್‌ ರಿಲೇ, 800 ಮೀ., 400 ಮೀ., 1500 ಮೀ. ಓಟದಲ್ಲಿ ಚಿನ್ನದ ಪದಕ, 200 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದು ತಂದಿದ್ದಾರೆ. ಹಲವು ಸನ್ಮಾನ, ಪುರಸ್ಕಾರಗಳಿಗೆ ಭಾಜನವಾಗಿದ್ದಾರೆ.

ಗಜಾನನರಾವ್ ಭಾತ್‌ಕಾಂಡೆ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿದ್ದಾರೆ. ಬೆಳಿಗ್ಗೆ ತಮ್ಮ ಬಡಾವಣೆಯ ಮಕ್ಕಳಿಗೆ ಮನೆ ಸಮೀಪದ ಕ್ರೀಡಾಂಗಣದಲ್ಲಿ ಉಚಿತ ತರಬೇತಿ ನೀಡುತ್ತಿದ್ದಾರೆ. ಸಂಪರ್ಕಕ್ಕೆ 80955 18552.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !