ಮಂಗಳವಾರ, ಜುಲೈ 5, 2022
24 °C
ಸ್ಪ್ರಿಂಟ್‌ ಓಟದಲ್ಲಿ ಮತ್ತೆ ಪ್ರಥಮ ಜಮೈಕಾದ ವೇಗದ ರಾಣಿ

ಶೆಲ್ಲಿ ಸಾಧನೆಗೆ ಎಣೆಯೆಲ್ಲಿ?

ಬಸವರಾಜ ಡಿ.ದಳವಾಯಿ Updated:

ಅಕ್ಷರ ಗಾತ್ರ : | |

ಮೈಕಾದ ‘ವೇಗದ ರಾಣಿ’ ಎಂದು ಕರೆಯಲಾಗುವ ಶೆಲ್ಲಿ ಆ್ಯನ್‌ ಫ್ರೇಸರ್‌ ಪ್ರೈಸ್‌, 21 ವರ್ಷದವರಿದ್ದಾಗಲೇ ವಿಶ್ವ ಪ್ರಸಿದ್ಧಿಗೆ ಬಂದವರು. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 100 ಮೀ. ಓಟದಲ್ಲಿ ಚಿನ್ನ ಗೆಲ್ಲುವ ಮೂಲಕ ಈ ವಿಭಾಗದಲ್ಲಿ ಸ್ವರ್ಣ ಸಾಧನೆ ಮಾಡಿದ ಕೆರಿಬಿಯನ್ ದ್ವೀಪ ಸಮೂಹದ ಮೊದಲ ಮಹಿಳೆ ಎನಿಸಿಕೊಂಡರು.

ನಾಲ್ಕು ವರ್ಷಗಳ ನಂತರ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲೂ ಚಿನ್ನದ ಪದಕ ಉಳಿಸಿಕೊಂಡರು. ಒಲಿಂಪಿಕ್ಸ್‌ನಲ್ಲಿ ಸತತ ಎರಡು ಬಾರಿ 100 ಮೀಟರ್ಸ್‌ ಓಟದಲ್ಲಿ ಚಿನ್ನ ಗಳಿಸಿದ ವಿಶ್ವದ ಮೂರನೇ ಮಹಿಳಾ ಅಥ್ಲೀಟ್ ಎಂಬ ಹೆಗ್ಗಳಿಕೆ ಅವರದಾಯಿತು. 2017ರಲ್ಲಿ ಮೊದಲ ಮಗು ಜನಿಸಿದ ಕಾರಣ ಶೆಲ್ಲಿ ಆ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿರಲಿಲ್ಲ. ಅವರು ಟ್ರ್ಯಾಕ್‌ಗೆ ಮರಳಿದ್ದು ಕಳೆದ ವರ್ಷ! 2019ರ ದೋಹಾ ವಿಶ್ವ ಚಾಂಪಿಯನ್‍ಷಿಪ್‌ನ 100 ಮೀ. ಓಟದಲ್ಲಿ ಮತ್ತೆ ಚಿನ್ನದ ಪದಕ ಕೊರಳಿಗೇರಿಸಿಕೊಂಡ ಅವರು ಈ ಸಾಧನೆ ಮಾಡಿದ ‘ಎರಡನೇ ತಾಯಿ’ ಎನಿಸಿಕೊಂಡಿದ್ದಾರೆ. ಸೆಪ್ಟೆಂಬರ್ 29ರಂದು ಖಲೀಫಾ ಕ್ರೀಡಾಂಗಣದಲ್ಲಿ ನಡೆದ 100 ಮೀ. ಓಟದ ಫೈನಲ್‌ನಲ್ಲಿ ಅವರು ಆರಂಭದಲ್ಲೇ ಉತ್ತಮ ವೇಗ ಸಾಧಿಸಿದರು.

ಮೊದಲ 20 ಮೀಟರ್‌ ನಂತರ ಸ್ಪಷ್ಟ ಮುನ್ನಡೆ ಸಾಧಿಸಿದರು. ಚಿನ್ನ ಯಾರಿಗೆ ಎಂಬುದು ಅಷ್ಟರಲ್ಲೇ ಬಹುತೇಕ ನಿರ್ಧಾರವಾಗಿತ್ತು. 32 ವರ್ಷದ ಶೆಲ್ಲಿ ಈಗ ಸರ್ವಶ್ರೇಷ್ಠ ಅಥ್ಲೀಟುಗಳ ಸಾಲಿಗೆ ಸೇರಿದ್ದಾಗೆ.

ನಾಲ್ಕು ಚಾಂಪಿಯನ್‌ಷಿಪ್‌ಗಳಲ್ಲಿ ಸ್ಪ್ರಿಂಟ್‌ ಚಿನ್ನ ಗೆದ್ದವರು ಅವರೊಬ್ಬರೇ. ಅವರದೇ ದೇಶದ ಉಸೇನ್‌ ಬೋಲ್ಟ್‌, ಅಮೆರಿಕದ ದಂತಕತೆ ಕಾರ್ಲ್‌ ಲೂಯಿಸ್‌, ಮೌರಿಸ್‌ ಗ್ರೀನ್‌ ಅವರಿಗಿಂತ ಒಂದು ಪದಕ ಹೆಚ್ಚು ಪಡೆದ ಸಾಧನೆ ಈ ‘ಅಮ್ಮ’ನದು.

ದಾಖಲೆಗಳ ಮೇಲೆ ದಾಖಲೆ

100 ಮೀ. ಓಟದಲ್ಲಿ ನಾಲ್ಕು ಬಾರಿ (2009, 2013, 2015 ಹಾಗೂ 2019) ವಿಶ್ವ ಚಾಂಪಿಯನ್ ಕಿರೀಟ ಧರಿಸಿದ ವಿಶ್ವದ ಮೊದಲ ವೇಗದ ಓಟಗಾರ್ತಿ ಎಂಬ ಹಿರಿಮೆಯೂ ಅವರದು. ಸ್ಪರ್ಧಿಸಿದ ಒಟ್ಟು ಎಂಟು ಕೂಟಗಳ ಪೈಕಿ (ವಿಶ್ವ ಚಾಂಪಿಯನ್‍ಷಿಪ್ ಹಾಗೂ ಒಲಿಂಪಿಕ್ಸ್ ಸೇರಿ) ಆರರಲ್ಲಿ ಅವರು ಅಗ್ರಸ್ಥಾನ ಪಡೆದಿದ್ದಾರೆ.

‘ಪಾಕೆಟ್ ರಾಕೆಟ್’ ಖ್ಯಾತಿಯ ಶೆಲ್ಲಿ ದಶಕಗಳಿಗೂ ಹೆಚ್ಚು ಕಾಲ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಪಾರಮ್ಯ ಮೆರೆದಿ ದ್ದಾರೆ. 100 ಮೀ. ಓಟದಲ್ಲಿ ಅವರು ಗೆದ್ದಷ್ಟು ಪದಕಗಳನ್ನು ಯಾರೂ ಗೆದ್ದಿಲ್ಲ. 100 ಮೀಟರ್ಸ್ ಓಟದಲ್ಲಿ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 10.70 ಸೆಕೆಂಡುಗಳು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಫ್ರೇಸರ್‌ ಪ್ರೈಸ್‌ ಕಂಚಿನ ಪದಕ (10.86 ಸೆ.) ಗೆದ್ದುಕೊಂಡಿದ್ಧರು. 1986 ಡಿಸೆಂಬರ್ 27ರಂದು ಬಡ ಕುಟುಂಬದಲ್ಲಿ ಜನಿಸಿದ ಶೆಲ್ಲಿ ತಾಯಿ ಕೂಡ ಅಥ್ಲೀಟ್ ಆಗಿದ್ದವರೇ. ಬೀದಿ ಬದಿ ವ್ಯಾಪಾರ ಮಾಡಿ ಕುಟುಂಬವನ್ನು ಪೊರೆದ ತಾಯಿ, ಮಗಳ ಅಥ್ಲೆಟಿಕ್ಸ್‌ ಆಸೆಗೆ ನೀರೆರೆದು ಪೋಷಿಸಿದರು. ‘ನೂರು ಮೀಟರ್‌ ಗೆದ್ದ ಮತ್ತೆ ಇಲ್ಲಿ ನಿಂತಿರುವುದು, ಮಗುವನ್ನು ಕಂಕುಳಲ್ಲಿಟ್ಟುಕೊಂಡು.... ಕನಸು ನನಸಾದಂತೆ ಆಗಿದೆ. ನನಗೆ ನಿನ್ನೆ ನಿದ್ದೆಯೇ ಆಗಿರಲಿಲ್ಲ’ ಎಂದು ಹೇಳಿದ್ದು ಅವರ ಕೆಚ್ಚನ್ನು ತೋರಿಸುವಂತಿತ್ತು. ಹೀಟ್ಸ್‌ ವೇಳೆ ತಲೆಗೂದಲಿಗೆ ಹಳದಿ ಬಣ್ಣ ಹಚ್ಚಿದ್ದ ಅವರು ಫೈನಲ್‌ ವೇಳೆ ಕಾಣಿಸಿಕೊಂಡಿದ್ದು ಕಾಮನಬಿಲ್ಲಿನ ಬಣ್ಣದೊಂದಿಗೆ! 

ಶೆಲ್ಲಿ ವೈಯಕ್ತಿಕ ಶ್ರೇಷ್ಠ ದಾಖಲೆಗಳು

60  ಮೀ.  ಓಟ 6.98 ಸೆಕೆಂಡು
100 ಮೀ. ಓಟ 10.70ಸೆಕೆಂಡು
200 ಮೀ. ಓಟ 22.09 ಸೆಕೆಂಡು

ಇದನ್ನೂ ಓದಿ: ಇದು ಭಾರತದ ವೇಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು