ಏಷ್ಯನ್ ಕ್ರೀಡಾಕೂಟ ಕುಸ್ತಿ: ಸುಶೀಲ್‌ಕುಮಾರ್‌ಗೆ ಅರ್ಹತಾ ಸುತ್ತಿನಲ್ಲಿಯೇ ಸೋಲು

7

ಏಷ್ಯನ್ ಕ್ರೀಡಾಕೂಟ ಕುಸ್ತಿ: ಸುಶೀಲ್‌ಕುಮಾರ್‌ಗೆ ಅರ್ಹತಾ ಸುತ್ತಿನಲ್ಲಿಯೇ ಸೋಲು

Published:
Updated:
Deccan Herald

ಜಕಾರ್ತ: ಏಷ್ಯನ್ ಕ್ರೀಡಾಕೂಟದ ಕುಸ್ತಿ ಕಣದಲ್ಲಿ ಪದಕ ಜಯಿಸುವ ನಿರೀಕ್ಷೆ ಮೂಡಿಸಿದ್ದ ಅನುಭವಿ ಪೈಲ್ವಾನ ಸುಶೀಲ್ ಕುಮಾರ್ ಅರ್ಹತಾ ಸುತ್ತಿನಲ್ಲಿಯೇ ಆಘಾತ ಅನುಭವಿಸಿ ಹೊರಬಿದ್ದರು.

ಪುರುಷರ ಫ್ರೀಸ್ಟೈಲ್‌ ಕುಸ್ತಿಯ 74 ಕೆ.ಜಿ. ವಿಭಾಗದಲ್ಲಿ ಸುಶೀಲ್. ಬಹರೇನ್‌ನ ಆ್ಯಡಂ ಬ್ಯಾಟಿರೊವ್ ಎದುರು 3–5 ಪಾಯಿಂಟ್‌ಗಳಿಂದ ಸೋತರು.   ಆ್ಯಡಂ ಅವರು ಫೈನಲ್‌ ಪ್ರವೇಶಿಸಿದ್ದರೆ ಸುಶೀಲ್‌ಗೆ ರಿಪೇಚ್‌ನಲ್ಲಿ ಆಡುವ ಅವಕಾಶ ಸಿಗುತ್ತಿತ್ತು. ಆಗ ಕಂಚಿನ ಪದಕದ ನಿರೀಕ್ಷೆ ಮಾಡಬಹುದಿತ್ತು. ಆದರೆ, ಆ್ಯಡಂ ಎಂಟರ ಘಟ್ಟದಲ್ಲಿಯೇ ಸೋತರು. ಇದರೊಂದಿಗೆ ಸುಶೀಲ್ ಆಸೆ ಕಮರಿತು.

ಬೌಟ್‌ನ ಮೊದಲ ಹಂತದಲ್ಲಿ ಸುಶೀಲ್ 2–1 ರಿಂದ ಮುನ್ನಡೆ ಸಾಧಿಸಿದ್ದರು. ಇದರಿಂದಾಗಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂತಸದ ಬುಗ್ಗೆ ಉಕ್ಕಿತ್ತು. ತ್ರಿವರ್ಣ ಧ್ವಜ ಹಿಡಿದ ಅಭಿಮಾನಿಗಳು ಸಂಭ್ರಮಿಸಿದರು.

ಆದರೆ, ನಂತರದ ಹಂತದಲ್ಲಿ ತಿರುಗೇಟು ನೀಡಿದ ಆ್ಯಡಂ ಸುಶೀಲ್‌ಗೆ ಚಳ್ಳೆಹಣ್ಣು ತಿನ್ನಿಸಿದರು.  ಈ ಹಂತದಲ್ಲಿ  ಆ್ಯಡಂ ಎರಡು ಅಂಕಗಳನ್ನು ಕೊಳ್ಳೆ ಹೊಡೆದರು. ಆದರೆ, ಸುಶೀಲ್‌ಗೆ ಒಂದು ಅಂಕ ಪಡೆಯಲು ಮಾತ್ರ ಸಾಧ್ಯವಾಯಿತು.

35 ವರ್ಷದ ಸುಶೀಲ್ 2008 ಮತ್ತು 2012ರ ಒಲಿಂಪಿಕ್ಸ್‌ ಕೂಟಗಳಲ್ಲಿ ಕ್ರಮವಾಗಿ ಕಂಚು ಮತ್ತು ಬೆಳ್ಳಿ ಪದಕ ಗೆದ್ದಿದ್ದರು. 2006ರಲ್ಲಿ ದೋಹಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನ ಕುಸ್ತಿಯ 66 ಕೆ.ಜಿ. ವಿಭಾಗದಲ್ಲಿ ಸುಶೀಲ್ ಕಂಚಿನ ಪದಕ ಜಯಿಸಿದ್ದರು.

ಅವರ ಸೋಲಿಗೆ ಟ್ವಿಟರ್‌ನಲ್ಲಿ ಬಹಳಷ್ಟು ಟೀಕೆಗಳು ವ್ಯಕ್ತವಾಗಿವೆ. ಸುಶೀಲ್ ಅವರು ಕುಸ್ತಿಯಿಂದ ನಿವೃತ್ತಿ ಪಡೆಯಬೇಕು ಎಂದು ಹಲವರು ಸಲಹೆ ನೀಡಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 2

  Sad
 • 1

  Frustrated
 • 1

  Angry

Comments:

0 comments

Write the first review for this !