ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್: ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದ ಐಶ್ವರ್ಯ ಪ್ರತಾಪ ಸಿಂಗ್ ತೋಮರ್

ವಿಶ್ವ ಜೂನಿಯರ್ ಶೂಟಿಂಗ್ ಚಾಂ‍ಪಿಯನ್‌ಷಿಪ್‌
Last Updated 5 ಅಕ್ಟೋಬರ್ 2021, 12:16 IST
ಅಕ್ಷರ ಗಾತ್ರ

ಲಿಮಾ, ಪೆರು: ಅದ್ಭುತ ಸಾಮರ್ಥ್ಯ ತೋರಿದ ಭಾರತದ ಯುವ ಶೂಟರ್‌ ಐಶ್ವರ್ಯ ಪ್ರತಾಪ ಸಿಂಗ್ ತೋಮರ್, ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವದಾಖಲೆ ಸ್ಕೋರ್‌ನೊಂದಿಗೆ ಚಿನ್ನದ ಪದಕ ಕೊರಳಿಗೇರಿಸಿಕೊಂಡರು. ಪುರುಷರ 50 ಮೀಟರ್ಸ್ ರೈಫಲ್ ತ್ರಿ ಪೋಸಿಷನ್ಸ್‌ನಲ್ಲಿ ಅವರಿಗೆ ಪದಕ ಒಲಿಯಿತು.

ಸೋಮವಾರ ಅರ್ಹತಾ ಸುತ್ತಿನಲ್ಲಿ ಅವರು 1185 ಸ್ಕೋರ್ ದಾಖಲಿಸಿ ವಿಶ್ವ ಜೂನಿಯರ್ ವಿಭಾಗದಲ್ಲಿನ ದಾಖಲೆಯನ್ನು ಸರಿಗಟ್ಟಿದರು. ಫೈನಲ್‌ನಲ್ಲಿ 463.4 ಸ್ಕೋರ್ ಗಳಿಸಿ 2019ರಲ್ಲಿ ಜೆಕ್‌ ಗಣರಾಜ್ಯದ ಫಿಲಿಪ್‌ ನೆಪೆಚಾಲ್‌ (462.9) ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು.

ಈ ವಿಭಾಗದಲ್ಲಿ ಫ್ರಾನ್ಸ್‌ನ ಲೂಕಾಸ್‌ ಕ್ರಿಜ್ಸ್ (456.5) ಬೆಳ್ಳಿ ಪದಕ ಗೆದ್ದುಕೊಂಡರೆ, ಕಂಚಿನ ಪದಕವು ಅಮೆರಿಕದ ಗವಿನ್‌ ಬಾರ್ನಿಕ್ (446.6) ಅವರ ಪಾಲಾಯಿತು.

ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಸಂಸ್ಕಾರ್‌ ಹವೇಲಿಯಾ 11ನೇ ಸ್ಥಾನ ಗಳಿಸಿದರು. ಪಂಕಜ್‌ ಮುಖೇಜಾ, ಸಾರ್ತಜ್‌ ತಿವಾನ ಮತ್ತು ಗುರ್ಮನ್ ಸಿಂಗ್ ಅವರು ಕ್ರಮವಾಗಿ 15, 16 ಮತ್ತು 22ನೇ ಸ್ಥಾನಕ್ಕೆ ಸಮಾಧಾನಪಡಬೇಕಾಯಿತು.

ಇದಕ್ಕೂ ಮೊದಲು ಯುವ ತಾರೆ ಮನು ಭಾಕರ್ ಅವರನ್ನು ಮೀರಿಸಿದ ಭಾರತದ 14 ವರ್ಷ ವಯಸ್ಸಿನ ಶೂಟರ್‌ ನಾಮ್ಯಾ ಕಪೂರ್‌ ಮಹಿಳೆಯರ 25 ಮೀಟರ್ಸ್‌ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ತಮ್ಮದಾಗಿಸಿಕೊಂಡಿದ್ದರು.

ಸೋಮವಾರ ನಡೆದ ಫೈನಲ್‌ನಲ್ಲಿ ನಾಮ್ಯಾ ಅವರು 36 ಸ್ಕೋರ್‌ ದಾಖಲಿಸಿದರು. ಫ್ರಾನ್ಸ್‌ನ ಕ್ಯಾಮಿಲೆ ಜೆಡ್ರೆಜಿವಿಸ್ಕಿ (33) ಹಾಗೂ ಭಾರತದ ಮನು (31) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.

ಸದ್ಯ ಭಾರತವು ಎಂಟು ಚಿನ್ನ, ಆರು ಬೆಳ್ಳಿ ಮತ್ತು ಮೂರು ಕಂಚು ಸೇರಿದಂತೆ ಒಟ್ಟು 17 ಪದಕಗಳೊಂದಿಗೆ ಚಾಂಪಿಯನ್‌ಷಿಪ್‌ನಲ್ಲಿ ಅಗ್ರಸ್ಥಾನದಲ್ಲಿದೆ.

ಟೋಕಿಯೊ ಒಲಿಂಪಿಕ್ಸ್ ಬಳಿಕ ಹಲವು ವಿಭಾಗಗಳಲ್ಲಿ ನಡೆಯುತ್ತಿರುವ ಮೊದಲ ಶೂಟಿಂಗ್ ಚಾಂಪಿಯನ್‌ಷಿಪ್ ಇದಾಗಿದ್ದು, 32 ದೇಶಗಳ ಸುಮಾರು 370 ಕ್ರೀಡಾಪಟುಗಳು ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT