ಗುರುವಾರ , ನವೆಂಬರ್ 21, 2019
20 °C

10 ಮೀಟರ್ಸ್‌ ಏರ್‌ ರೈಫಲ್‌: ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ದೀಪಕ್‌

Published:
Updated:
Prajavani

ದೋಹಾ: ಭಾರತದ ಶೂಟರ್‌ ದೀಪಕ್‌ ಕುಮಾರ್‌, ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.

ಮಂಗಳವಾರ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನ ಪುರುಷರ 10 ಮೀಟರ್ಸ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಈ ಸಾಧನೆ ಮಾಡಿದ್ದಾರೆ.

ಟೋಕಿಯೊ ಕೂಟಕ್ಕೆ ಅರ್ಹತೆ ಗಳಿಸಿದ ಭಾರತದ 10ನೇ ಶೂಟರ್‌ ಎಂಬ ಹಿರಿಮೆಗೂ ಅವರು ಭಾಜನರಾಗಿದ್ದಾರೆ.

ಫೈನಲ್‌ನಲ್ಲಿ ದೀಪಕ್‌ ಒಟ್ಟು 227.8 ಸ್ಕೋರ್‌ ಕಲೆಹಾಕಿದರು.

ಹೋದ ವರ್ಷ ನಡೆದಿದ್ದ ಐಎಸ್‌ಎಸ್‌ಎಫ್‌ ವಿಶ್ವಕಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ದೀಪಕ್‌, ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನ (626.8 ಸ್ಕೋರ್‌) ಪಡೆದು ಫೈನಲ್‌ಗೆ ಅರ್ಹತೆ ಗಳಿಸಿದ್ದರು.

ಮನುಗೆ ಚಿನ್ನ: ಮಹಿಳೆಯರ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ಮನು ಭಾಕರ್‌, ಚಿನ್ನದ ಪದಕಕ್ಕೆ ಕೊರಳೊಡ್ಡಿದರು.ಫೈನಲ್‌ನಲ್ಲಿ 17 ವರ್ಷ ವಯಸ್ಸಿನ ಮನು 244.3 ಸ್ಕೋರ್‌ ಕಲೆಹಾಕಿದರು.

ಚೀನಾದ ಕ್ವಿಯಾನ್‌ ವಾಂಗ್‌ ಮತ್ತು ರ‍್ಯಾನ್‌ಕ್ಸಿನ್‌ ಜಿಯಾಂಗ್‌ ಅವರು ಕ್ರಮವಾಗಿ ಈ ವಿಭಾಗದ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದರು.ಜೂನಿಯರ್‌ ಟ್ರ್ಯಾಪ್‌ ಮಿಶ್ರ ತಂಡ ವಿಭಾಗದಲ್ಲಿ ಭಾರತದ ವಿವಾನ್‌ ಕಪೂರ್‌ ಮತ್ತು ಮನೀಷಾ ಕೀರ್‌ ಅವರು ಚಿನ್ನದ ಸಾಧನೆ ಮಾಡಿದರು.ಮಹಿಳೆಯರ 10 ಮೀಟರ್ಸ್‌ ಏರ್‌ ರೈಫಲ್‌ನಲ್ಲಿ ಇಳವೆನಿಲಾ ವಳರಿವಾಲನ್‌, ಅಂಜುಮ್‌ ಮೌಡ್ಗಿಲ್‌ ಮತ್ತು ಅಪೂರ್ವಿ ಚಾಂಡೇಲಾ ಅವರಿದ್ದ ಭಾರತ ತಂಡ ಬೆಳ್ಳಿಯ ಪದಕ (1,883.2 ಸ್ಕೋರ್‌) ಜಯಿಸಿತು.

ಪ್ರತಿಕ್ರಿಯಿಸಿ (+)