ಶುಕ್ರವಾರ, ಡಿಸೆಂಬರ್ 2, 2022
20 °C
ಕುಸ್ತಿ, ಆರ್ಚರಿ ಕೈಬಿಟ್ಟ ಸಿಡಬ್ಲ್ಯುಜಿ ಫೆಡರೇಷನ್‌

2026ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಶೂಟಿಂಗ್‌ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ನಡೆಯಲಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಕುಸ್ತಿ ಮತ್ತು ಆರ್ಚರಿ ಕ್ರೀಡೆಗಳನ್ನು ಕೈಬಿಡಲಾಗಿದ್ದು, ಶೂಟಿಂಗ್‌ ಅನ್ನು ಮರುಸೇರ್ಪಡೆ ಮಾಡಿಸಲಾಗಿದೆ.

ವಿಕ್ಟೋರಿಯಾ ಕೂಟಕ್ಕೆ ಪ್ಯಾರಾ ಸೇರಿದಂತೆ 20 ಕ್ರೀಡೆಗಳ ಪಟ್ಟಿಯನ್ನು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್‌ (ಸಿಜಿಎಫ್‌) ಬುಧವಾರ ಬಿಡುಗಡೆ ಮಾಡಿದೆ.

ಈ ವರ್ಷದ ಆರಂಭದಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕೂಟದಲ್ಲಿ ಶೂಟಿಂಗ್‌ ಕೈಬಿಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು. ಈಗ ಮರು ಸೇರ್ಪಡೆ ಮಾಡಿದ್ದು ಭಾರತಕ್ಕೆ ಸಂತಸದ ಸಂಗತಿಯಾಗಿದೆ.

ಕ್ರೀಡಾಕೂಟದ ಶೂಟಿಂಗ್‌ನಲ್ಲಿ ಭಾರತ ಇದುವರೆಗೆ ಉತ್ತಮ ಸಾಧನೆ ಮಾಡಿದೆ. ಒಟ್ಟು 135 ಪದಕಗಳನ್ನು (63 ಚಿನ್ನ, 44 ಬೆಳ್ಳಿ ಮತ್ತು 28 ಕಂಚು) ತನ್ನದಾಗಿಸಿಕೊಂಡಿದೆ. ಕುಸ್ತಿಯಲ್ಲಿ 114 ಪದಕಗಳು (49 ಚಿನ್ನ, 39 ಬೆಳ್ಳಿ ಮತ್ತ 26 ಕಂಚು) ಭಾರತಕ್ಕೆ ಬಂದಿವೆ. 2018ರ ಗೋಲ್ಡ್‌ಕೋಸ್ಟ್ ಕೂಟದಲ್ಲಿ ದೇಶ ಗೆದ್ದ ಒಟ್ಟು 66 ಪದಕಗಳಲ್ಲಿ ಶೇಕಡಾ 25 ರಷ್ಟು (16) ಶೂಟಿಂಗ್‌ನಲ್ಲಿ ಬಂದಿದ್ದವು.

2026ರ ಆವೃತ್ತಿಗೆ ಪ್ಯಾರಾ ಶೂಟಿಂಗ್ ಕೂಡ ಸೇರ್ಪಡೆ ಮಾಡಿರುವುದರಿಂದ ಹೆಚ್ಚಿನ ‍ಪದಕಗಳು ಭಾರತದ ಮಡಿಲು ಸೇರಲಿವೆ. ಆದರೆ ಕುಸ್ತಿ ಕೈಬಿಟ್ಟಿದ್ದು ದೊಡ್ಡ ನಷ್ಟ ಎನಿಸಿದೆ. ಬರ್ಮಿಂಗ್‌ಹ್ಯಾಮ್ ಕ್ರೀಡಾಕೂಟದಲ್ಲಿ ಈ ಕ್ರೀಡೆಯಲ್ಲಿ ಭಾರತದ ಕುಸ್ತಿಪಟುಗಳು 12 (ಆರು ಚಿನ್ನ, 1 ಬೆಳ್ಳಿ ಮತ್ತು ಐದು ಕಂಚು) ಗೆದ್ದುಕೊಂಡಿದ್ದರು.  2010ರಿಂದ ಸತತ ನಾಲ್ಕು ಆವೃತ್ತಿಗಳಲ್ಲಿ ಕುಸ್ತಿ ಸ್ಪರ್ಧೆಗಳನ್ನು ನಡೆಸಲಾಗಿತ್ತು. ಈಗ ಕೈಬಿಡಲಾಗಿದೆ.

1982 ಮತ್ತು 2010ರ ಆವೃತ್ತಿಗಳಲ್ಲಿ ಮಾತ್ರ ಆರ್ಚರಿ ಸ್ಪರ್ಧೆಗಳು ನಡೆದಿದ್ದವು. ಈ ಕ್ರೀಡೆಯ ಒಟ್ಟಾರೆ ಪದಕ ಗಳಿಕೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ.

ವಿಕ್ಟೋರಿಯಾ ಆವೃತ್ತಿಯಲ್ಲಿ ಕುಸ್ತಿ ಬಿಡುವುದು ನಿರೀಕ್ಷಿತವೇ ಆಗಿತ್ತು. ಏಕೆಂದರೆ ಆಸ್ಟ್ರೇಲಿಯಾದಲ್ಲಿ ಈ ಕ್ರೀಡೆ ಹೆಚ್ಚು ಜನಪ್ರಿಯವಲ್ಲ. ಆತಿಥೇಯ ರಾಷ್ಟ್ರವು ತಾನು ಹೆಚ್ಚು ಪದಕ ಗೆಲ್ಲಬಹುದಾದ ಕ್ರೀಡೆಗಳನ್ನು ಆಯ್ಕೆ ಮಾಡುವುದು ಸಾಮಾನ್ಯ. ಆಸ್ಟ್ರೇಲಿಯಾ ಶೂಟಿಂಗ್‌ನಲ್ಲಿ ಬಲಿಷ್ಠವಾಗಿದೆ. 2018ರ ಆವೃತ್ತಿಯಲ್ಲಿ ಈ ಕ್ರೀಡೆಯಲ್ಲಿ ಅದು ಒಂಬತ್ತು ಪದಕ ತನ್ನದಾಗಿಸಿಕೊಂಡಿತ್ತು.

ಭಾರತ ಒಲಿಂಪಿಕ್‌ ಸಂಸ್ಥೆಯು 2026ರ ಆವೃತ್ತಿಯಲ್ಲಿ ಕುಸ್ತಿ, ಶೂಟಿಂಗ್ ಮತ್ತು ಆರ್ಚರಿ ಸೇರ್ಪಡೆ ಮಾಡುವಂತೆ ಸಿಜಿಎಫ್‌ಗೆ ಪತ್ರ ಬರೆದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು