ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿನ ಝಳಕ್ಕೆ ಬಸವಳಿದ ಜನತೆ

40 ಡಿಗ್ರಿ ಸೆಲ್ಸಿಯಸ್‌ ಗಡಿ ದಾಟಿದ ಬಿಸಿಲಿನ ತಾಪಮಾನ
Last Updated 25 ಏಪ್ರಿಲ್ 2018, 11:11 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಕಳೆದೊಂದು ವಾರದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಬಿಸಿಲಿನ ಝಳ ಹೆಚ್ಚಾಗಿದ್ದು, ಜನತೆ ಬಸವಳಿದಿದ್ದಾರೆ.

ಮಂಗಳವಾರ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ಇತ್ತು. ಅಲ್ಲದೇ ಸೂರ್ಯೋದಯ ಹಾಗೂ ಸೂರ್ಯಾಸ್ತದ ವೇಳೆ ಮೋಡ ಕವಿದ ವಾತಾವರಣ ಇತ್ತು. ಬೆಳಿಗ್ಗೆ 10 ಗಂಟೆಯ ಬಳಿಕ ಹೊರಬರಲೂ ಅಸಾಧ್ಯವಾದ ವಾತಾವರಣ ಇದೆ.

ವಿಪರೀತ ಸೆಕೆಯ ಪರಿಣಾಮ ಮನೆಯಲ್ಲಿ ಕುಳಿತುಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಅಲ್ಲದೇ, ಫ್ಯಾನ್ ಹಚ್ಚಿಕೊಂಡರೂ ಬಿಸಿ ಗಾಳಿ ಬೀಸುತ್ತಿವೆ. ಹೀಗಾಗಿ, ಮಧ್ಯಾಹ್ನ ವೇಳೆಯಲ್ಲಿ ಮನೆಯ ಒಳಗೆ ಅಥವಾ ಹೊರಹೋಗುವುದೇ ಅಸಾಧ್ಯ ಎಂದು ಸ್ಥಳೀಯ ನಿವಾಸಿ ಸೈಯದ್‌ ಅನ್ವರ್‌ಭಾಷಾ ಕೊಟ್ಟಿಗೇರಿ ಹೇಳಿದರು.

ಕೆಲ ದಿನಗಳ ಹಿಂದೆ ಅಲ್ಲಲ್ಲಿ ಉತ್ತಮ ಮಳೆಯಾದರೂ ವಾತಾವರಣದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ದಿನವಿಡೀ ಬಿಸಿಲ ಝಳ ಇರುತ್ತದೆ. ಮರಗಳ ನೆರಳಿಗೆ ಅಲ್ಲಲ್ಲಿ ಆಸರೆ ಪಡೆದುಕೊಂಡು ಮನೆ ತಲುಪಬೇಕಾಗಿದೆ ಎಂದು ಅವರು ತಿಳಿಸಿದರು.

ಒಂದೆಡೆ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದ್ದರೆ, ಇತ್ತ ಬಿಸಿಲಿನ ಝಳವೂ ಹೆಚ್ಚಾಗುತ್ತಿದೆ. ಹೀಗಾಗಿ, ಚುನಾವಣೆಗೆ ನಿಯೋಜಿತ ಸಿಬ್ಬಂದಿ, ವಿವಿಧ ಪಕ್ಷಗಳ ಅಭ್ಯರ್ಥಿಗಳು, ಕಾರ್ಯಕರ್ತರು ಸೆಖೆಗೆ ಹೈರಾಣಾಗುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಕುಶಾಲ್ ನರಗುಂದ ತಿಳಿಸಿದರು.

ವಿದ್ಯಾರ್ಥಿನಿಯರು, ಮಹಿಳೆಯರು ಸೇರಿದಂತೆ ಬಹುತೇಕರು ಕೊಡೆ ಹಿಡಿದು ಸಾಗುವ ದೃಶ್ಯಗಳು ನಗರದಲ್ಲಿ ಸಾಮಾನ್ಯವಾಗಿದೆ. ಬೀದಿ ಬದಿಯ ವ್ಯಾಪಾರಿಗಳು ಮರದ ನೆರಳಿನ ಆಶ್ರಯ ಪಡೆಯುತ್ತಿದ್ದಾರೆ ಎಂದು ಉಮೇಶ ಬಡಿಗೇರ ತಿಳಿಸಿದರು.

ಹೆಚ್ಚಾದ ಪಾನೀಯಗಳಿಗೆ ಬೇಡಿಕೆ:

ಬಿಸಿಲಿನ ಝಳ ಹೆಚ್ಚಾದಂತೆ ತಂಪು ಪಾನೀಯಗಳ ಬೇಡಿಕೆಯೂ ಹೆಚ್ಚಾಗಿದೆ. ಕಲ್ಲಂಗಡಿ, ಕರಬೂಜ, ಎಳನೀರು, ಹಣ್ಣಿನ ಜ್ಯೂಸ್‌, ಲಿಂಬು ಸೋಡ ಹಾಗೂ ಕಬ್ಬಿನ ಜ್ಯೂಸ್ ಅಂಗಡಿಗಳು ತಲೆ ಎತ್ತಿವೆ. ಐಸ್‌ ಕ್ರೀಮ್‌ ವ್ಯಾಪಾರವೂ ಕೂಡಾ ಭರ್ಜರಿಯಾಗಿ ಸಾಗಿದೆ ಎಂದು ಕಬ್ಬಿನ ರಸದ ವ್ಯಾಪಾರಿ ಇಮಾಮ್‌ಸಾಬ್‌ ಕಾಳಂಗಿ ತಿಳಿಸಿದರು.

ನಗರದ ಪಿ.ಬಿ.ರಸ್ತೆ, ಎಂ.ಜಿ.ರಸ್ತೆ, ಗುತ್ತಲ ರಸ್ತೆ, ಜಿ.ಎಚ್‌.ಕಾಲೇಜು ಎದರು, ರೈತ ಸಂಪರ್ಕ ಕೇಂದ್ರದ ಎದುರು, ಆಂಜನೇಯ ದೇವಸ್ಥಾನದ ಪಕ್ಕ, ಮುನ್ಸಿಪಲ್ ರಸ್ತೆ, ಮಹಾತ್ಮಾಗಾಂಧಿ ವೃತ್ತ, ಸುಭಾಷ್‌ ವೃತ್ತ, ಕಾಗಿನೆಲೆ ರಸ್ತೆಯಲ್ಲಿ ಎಳೆನೀರು, ಹಣ್ಣಿನ ಅಂಗಡಿಗಳು ಹೆಚ್ಚಾಗಿವೆ.

**
ಬಿಸಿಲಿನ ಝಳದ ಪರಿಣಾಮ ಜನತೆ ಏರ್‌ ಕೂಲರ್‌ ಹಾಗೂ ಎ.ಸಿ. (ಹವಾ ನಿಯಂತ್ರಿತ)ಗಳಿಗೆ ಮೊರೆ ಹೋಗುತ್ತಿದ್ದಾರೆ 
ಕುಶಾಲ್ ನರಗುಂದ, ಸ್ಥಳೀಯ ನಿವಾಸಿ

ಪ್ರವೀಣ ಸಿ. ಪೂಜಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT