ಸೋಮವಾರ, ಮೇ 16, 2022
30 °C
ಇಂದಿನಿಂದ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿ

ನಿರಾಸೆ ಮರೆಯುವ ತವಕದಲ್ಲಿ ಸಿಂಧು, ಶ್ರೀಕಾಂತ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಕಾಕ್‌: ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಕಿದಂಬಿ ಶ್ರೀಕಾಂತ್ ಹಾಗೂ ಪಿ.ವಿ.ಸಿಂಧು ಅವರು ಕಳೆದ ಎರಡು ವಾರಗಳಲ್ಲಿ ಅನುಭವಿಸಿದ ನಿರಾಸೆಗಳನ್ನು ಮರೆಯುವ ತವಕದಲ್ಲಿದ್ದಾರೆ. ಬುಧವಾರ ಇಲ್ಲಿ ಆರಂಭವಾಗಲಿರುವ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್ ಟೂರ್ನಿಯಲ್ಲಿ ನವ ಉತ್ಸಾಹದೊಂದಿಗೆ ಕಣಕ್ಕಿಳಿಯಬೇಕಿದೆ.

ವಿಶ್ವ ಚಾಂಪಿಯನ್‌ ಹಾಗೂ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು 2018ರಲ್ಲಿ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್ ಟೂರ್ನಿಯನ್ನು ಗೆದ್ದುಕೊಂಡಿದ್ದರು. ಈ ಬಾರಿ ಅವರು ಅಗ್ರಶ್ರೇಯಾಂಕದ ಆಟಗಾರ್ತಿ ಚೀನಾ ತೈಪೆಯ ತೈ ಜು ಯಿಂಗ್‌, ಸ್ಥಳೀಯ ಆಟಗಾರ್ತಿಯರಾದ ರಚನೊಕ್ ಇಂತನಾನ್‌ ಹಾಗೂ ಪಾರ್ನ್‌ಪವೀ ಚೊಚುವಾಂಗ್ ಅವರಿರುವ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ.

ಥಾಯ್ಲೆಂಡ್‌ ಓಪನ್‌ ಮೊದಲ ಟೂರ್ನಿಯಲ್ಲಿ ಆರಂಭಿಕ ಸುತ್ತಿನಲ್ಲಿ ಸೋಲು ಕಂಡಿದ್ದ ಸಿಂಧು, ಎರಡನೇ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ವರೆಗೂ ತಲುಪಿ ರಚನೊಕ್ ಎದುರು ಮುಗ್ಗರಿಸಿದ್ದರು.

ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಸಿಂಧು ಅವರಿಗೆ ತೈ ಜು ಯಿಂಗ್ ಸವಾಲು ಎದುರಾಗಿದೆ.

ವಿಶ್ವ ಕ್ರಮಾಂಕದಲ್ಲಿ ಈ ಹಿಂದೆ ಮೊದಲ ಸ್ಥಾನದಲ್ಲಿದ್ದ ಶ್ರೀಕಾಂತ್ ಅವರು ಟೂರ್ನಿಯ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಡೆನ್ಮಾರ್ಕ್‌ನ ಆ್ಯಂಡರ್ಸ್‌ ಆ್ಯಂಟೊನ್ಸೆನ್‌, ಚೀನಾ ತೈಪೆಯ ವಾಂಗ್‌ ಜು ವೇ ಹಾಗೂ ಹಾಂಗ್‌ಕಾಂಗ್‌ನ ಎನ್‌ಜಿ ಕಾ ಲಾಂಗ್ ಆ್ಯಗ್ನಸ್‌ ಕೂಡ ಇದೇ ಗುಂಪಿನಲ್ಲಿದ್ದಾರೆ.

2014ರ ಬಿಡಬ್ಲ್ಯುಎಫ್ ಸೂಪರ್ ಸಿರೀಸ್‌ ಮಾಸ್ಟರ್ಸ್ ಫೈನಲ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ಶ್ರೀಕಾಂತ್ ಅವರಿಗೆ  ಕೆಲವು ಕಾರಣಗಳಿಂದಾಗಿ ಅಂಗಣದಲ್ಲಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಿಲ್ಲ

ಥಾಯ್ಲೆಂಡ್ ಓಪನ್ ಮೊದಲ ಟೂರ್ನಿಯಲ್ಲಿ ಮೀನಖಂಡದ ನೋವಿನಿಂದಾಗಿ ಎರಡನೇ ಸುತ್ತಿನಲ್ಲಿ ಅವರು ಎದುರಾಳಿಗೆ ವಾಕ್ಓವರ್‌ ನೀಡಿದ್ದರು. ಸಹ ಆಟಗಾರ ಬಿ.ಸಾಯಿ ಪ್ರಣೀತ್ ಅವರಲ್ಲಿ ಕೋವಿಡ್‌–19 ದೃಢಪಟ್ಟ ಕಾರಣ ಅವರ ಜೊತೆ ರೂಮ್ ಹಂಚಿಕೊಂಡಿದ್ದ ಶ್ರೀಕಾಂತ್‌, ಥಾಯ್ಲೆಂಡ್‌ ಓಪನ್ ಎರಡನೇ ಟೂರ್ನಿಯಿಂದ ಹಿಂದೆ ಸರಿಯಬೇಕಾಗಿ ಬಂದಿತ್ತು.

ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಶ್ರೀಕಾಂತ್ ಅವರು ಆ್ಯಂಟೊನ್ಸೆನ್‌ ಅವರಿಗೆ ಮುಖಾಮುಖಿಯಾಗಲಿದ್ದಾರೆ. ಡೆನ್ಮಾರ್ಕ್ ಆಟಗಾರನನ್ನು 2017ರಲ್ಲಿ ಶ್ರೀಕಾಂತ್ ಮಣಿಸಿದ್ದರು. ಆದರೆ ಸದ್ಯ ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಆ್ಯಂಟೊನ್ಸೆನ್‌ ಉತ್ತಮ ಲಯದಲ್ಲಿದ್ದಾರೆ.

ಸುಮಾರು ₹ 11 ಕೋಟಿ ಒಟ್ಟು ಬಹುಮಾನ ಮೊತ್ತದ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಮತ್ತು ಮಹಿಳಾ ಸಿಂಗಲ್ಸ್‌ ವಿಭಾಗಗಳ ವಿಶ್ವ ಕ್ರಮಾಂಕಗಳಲ್ಲಿ ಅಗ್ರ ಎಂಟು ಸ್ಥಾನಗಳಲ್ಲಿರುವರು ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಮೂರು ಡಬಲ್ಸ್ ವಿಭಾಗಗಳ ಅರ್ಹತೆಗೂ ಇದೇ ಮಾನದಂಡವಿದೆ.

ಡಬಲ್ಸ್ ವಿಭಾಗಗಳಿಗೆ ಭಾರತದ ಯಾವ ಆಟಗಾರರು ಅರ್ಹತೆ ಗಿಟ್ಟಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು