ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಸೆಮಿಫೈನಲ್‌ಗೆ ಸಿಂಧು, ಪ್ರಣೀತ್‌

ಮಿಯಾಗೆ ಮಣಿದ ಸೈನಾ
Last Updated 23 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬಾಸೆಲ್‌: ಭಾರತದ ಪಿ.ವಿ.ಸಿಂಧು ಅವರು ಏಷ್ಯನ್‌ ಗೇಮ್ಸ್ ಚಿನ್ನ ವಿಜೇತ ತೈ ಜು ಯಿಂಗ್‌ಗೆ ಆಘಾತ ನೀಡಿದರು. ಮೊದಲ ಗೇಮ್‌ ಸೋಲಿನಿಂದ ಪುಟಿದೆದ್ದ ಅವರು, ಶುಕ್ರವಾರ ವಿಶ್ವಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.

ಚೀನಾ ತೈಪೆಯ ಯಿಂಗ್‌ ವಿರುದ್ಧ 12–21, 23–21, 21–19 ಗೇಮ್‌ಗಳಿಂದ ಸಿಂಧು ಗೆಲುವಿನ ನಗೆ ಬೀರಿದರು. ಕ್ವಾರ್ಟರ್‌ಫೈನಲ್‌ ಹಣಾಹಣಿ ನೋಡುಗರಲ್ಲಿ ರೋಮಾಂಚನ ಉಂಟು ಮಾಡಿತು.

ಈ ಗೆಲುವಿನೊಂದಿಗೆ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸಿಂಧು, ಐದನೇ ಬಾರಿ ಪದಕ ಖಚಿತಪಡಿಸಿದರು. ಪ್ರತಿಷ್ಠಿತ ಚಾಂಪಿಯನ್‌ಷಿಪ್‌ನ ಹೋದ ಎರಡು ಆವೃತ್ತಿಗಳಲ್ಲಿ ಭಾರತದ ಆಟಗಾರ್ತಿ ಬೆಳ್ಳಿ ಪದಕ ಗೆದ್ದಿದ್ದರು. ಎರಡು ಕಂಚಿನ ಪದಕಗಳೂ ಅವರಿಗೆ ಒಲಿದಿವೆ.

ಒಲಿಂಪಿಕ್‌ ಬೆಳ್ಳಿ ಪದಕ ವಿಜೇತ 24 ವರ್ಷದ ಸಿಂಧು, ಚೀನಾದ ಚೆನ್‌ ಯು ಫೆ ಹಾಗೂ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಟ್ ನಡುವಣ ಪಂದ್ಯದ ವಿಜೇತರನ್ನು ಶನಿವಾರ ಸೆಮಿಫೈನಲ್‌ನಲ್ಲಿ ಎದುರಿಸುವರು.

ಪ್ರಣೀತ್‌ ಪರಾಕ್ರಮ: ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ನೇರ ಗೇಮ್‌ಗಳಿಂದ ಗೆದ್ದ ಸಾಯಿ ಪ್ರಣೀತ್‌ ಕೂಡ ಸೆಮಿಫೈನಲ್‌ ಪ್ರವೇಶಿಸಿದರು. ಏಷ್ಯನ್‌ ಗೇಮ್ಸ್‌ ಚಿನ್ನ ವಿಜೇತ ಇಂಡೊನೇಷ್ಯಾದ ಜೋನಾಥನ್‌ ಕ್ರಿಸ್ಟಿ ವಿರುದ್ಧ 24–22, 21–14ರಿಂದ ಜಯಿಸಿದರು. ಕನಿಷ್ಠ ಕಂಚಿನ ಪದಕವನ್ನು ಪ್ರಣೀತ್‌ ಖಚಿತಪಡಿಸಿದ್ದಾರೆ.

ಬ್ಯಾಡ್ಮಿಂಟನ್‌ ದಂತಕತೆ ಪ್ರಕಾಶ್‌ ಪಡುಕೋಣೆ 1983ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.ಈ ಚಾಂಪಿಯನ್‌ಷಿಪ್‌ನಲ್ಲಿ ಪದಕವೊಂದನ್ನು ಗೆದ್ದಭಾರತದ ಮೊದಲ ಆಟಗಾರ ಎನಿಸಿದ್ದರು.

ಸೈನಾಗೆ ಸೋಲು: ವೀರೋಚಿತ ಹೋರಾಟದಲ್ಲಿಒಲಿಂಪಿಕ್‌ ಕಂಚು ವಿಜೇತ ಭಾರತದ ಸೈನಾ ನೆಹ್ವಾಲ್‌ ವಿಶ್ವಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಿಂದ ಹೊರಬಿದ್ದರು.

ಗುರುವಾರ ರಾತ್ರಿ ನಡೆದ ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಅವರು ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಟ್‌ ವಿರುದ್ಧ 21–15, 25–27, 12–21ರಿಂದ ಮಣಿದರು. ಎಂಟನೇ ಶ್ರೇಯಾಂಕದ ಸೈನಾ ಹಾಗೂ 12ನೇ ಶ್ರೇಯಾಂಕದ ಮಿಯಾ ನಡುವಣ ಹಣಾಹಣಿ ಒಂದು ತಾಸು 12 ನಿಮಿಷಗಳವರೆಗೆ ನಡೆಯಿತು. ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು.

2015ರಲ್ಲಿ ಜಕಾರ್ತದಲ್ಲಿ ಬೆಳ್ಳಿ ಹಾಗೂ 2017ರ ಗ್ಲಾಸ್ಗೊವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಸೈನಾಗೆ ಒಲಿದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT