ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌: ಕಶ್ಯಪ್‌, ಪ್ರಣೀತ್‌ ಪರಾಭವ

Last Updated 7 ಜುಲೈ 2022, 11:24 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಭಾರತದ ಪಿ.ವಿ.ಸಿಂಧು ಮತ್ತು ಎಚ್‌.ಎಸ್‌.ಪ್ರಣಯ್‌ ಅವರು ಮಲೇಷ್ಯಾ ಮಾಸ್ಟರ್ಸ್‌ ಸೂಪರ್‌–500 ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು.

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸಿಂಧು 21–12, 21–10 ರಲ್ಲಿ ಚೀನಾದ ಜಾಂಗ್ ಯಿ ಮಾನ್‌ ವಿರುದ್ಧ ಗೆದ್ದರು.

ಏಳನೇ ಶ್ರೇಯಾಂಕದ ಸಿಂಧು ಎರಡೂ ಗೇಮ್‌ಗಳಲ್ಲಿ ಶಿಸ್ತಿನ ಆಟವಾಡಿ 28 ನಿಮಿಷಗಳಲ್ಲಿ ಜಯಿಸಿದರು. ಭಾರತದ ಆಟಗಾರ್ತಿಗೆ ಮುಂದಿನ ಸುತ್ತಿನಲ್ಲಿ ಕಠಿಣ ಸವಾಲು ಕಾದಿದ್ದು, ವಿಶ್ವದ ಎರಡನೇ ರ‍್ಯಾಂಕ್‌ನ ಆಟಗಾರ್ತಿ ಚೀನಾ ತೈಪೆಯ ತಾಯ್ ಜು ಯಿಂಗ್‌ ವಿರುದ್ಧ ಸೆಣಸುವರು.

ಇವರಿಬ್ಬರು ಇದುವರೆಗೆ 21 ಸಲ ಪೈಪೋಟಿ ನಡೆಸಿದ್ದು, ಸಿಂಧು ಐದು ಪಂದ್ಯಗಳಲ್ಲಿ ಮಾತ್ರ ಗೆದ್ದಿದ್ದಾರೆ. ಇನ್ನುಳಿದ 16 ಪಂದ್ಯಗಳಲ್ಲಿ ತಾಯ್‌ ಜು ಪ್ರಭುತ್ವ ಸಾಧಿಸಿದ್ದಾರೆ. ಕಳೆದ ವಾರ ನಡೆದ ಮಲೇಷ್ಯಾ ಓಪನ್ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಸಿಂಧು, ಇದೇ ಎದುರಾಳಿಗೆ ಮಣಿದಿದ್ದರು.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆ ಎನಿಸಿರುವ ಪ್ರಣಯ್‌, 21–19, 21–16 ರಲ್ಲಿ ಚೀನಾ ತೈಪೆಯ ವಾಂಗ್‌ ಜು ವೀ ಅವರನ್ನು ಮಣಿಸಿದರು. ಪ್ರಣಯ್‌ ಅವರು ಬಿರುಸಿನ ಸ್ಮ್ಯಾಷ್‌ ಮತ್ತು ಡ್ರಾಪ್‌ ಶಾಟ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ಕಶ್ಯಪ್‌ಗೆ ನಿರಾಸೆ: ಪಿ.ಕಶ್ಯಪ್‌ ಅವರು ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ 16ರ ಘಟ್ಟದ ತಡೆ ದಾಟುವಲ್ಲಿ ವಿಫಲರಾದರು. ಅವರು 10–21, 15–21 ರಲ್ಲಿ ಆರನೇ ಶ್ರೇಯಾಂಕದ ಆಟಗಾರ ಇಂಡೊನೇಷ್ಯಾದ ಆಂಥೋನಿ ಸಿನಿಸುಕ ಗಿಂತಿಂಗ್‌ಗೆ ಮಣಿದರು.

34 ನಿಮಿಷ ನಡೆದ ಹೋರಾಟದಲ್ಲಿ ಕಶ್ಯಪ್‌, ಎದುರಾಳಿಗೆ ತಕ್ಕ ಪೈಪೋಟಿ ನೀಡುವಲ್ಲಿ ಎಡವಿದರು. ಸಾಕಷ್ಟು ಸ್ವಯಂಕೃತ ತಪ್ಪುಗಳನ್ನು ಮಾಡಿ ಸೋಲಿನ ಹಾದಿ ಹಿಡಿದರು.

ಕಣದಲ್ಲಿದ್ದ ಭಾರತದ ಇನ್ನೊಬ್ಬ ಆಟಗಾರ ಬಿ.ಸಾಯಿ ಪ್ರಣೀತ್‌ 14–21, 17–21 ರಲ್ಲಿ ಚೀನಾದ ಲಿ ಶಿಫೆಂಗ್‌ ಎದುರು ಸೋತರು. ಈ ಹೋರಾಟ 42 ನಿಮಿಷ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT