ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧುಗೆ ಸುಗಮ ಹಾದಿ; ಸೈನಾಗೆ ಆರಂಭದಲ್ಲೇ ಕಠಿಣ ಸವಾಲು

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಪುರುಷರ ವಿಭಾಗದಲ್ಲಿ ಭಾರತದ 7 ಮಂದಿ ಭಾಗಿ
Last Updated 30 ಡಿಸೆಂಬರ್ 2020, 15:10 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ತಂದೊಡ್ಡಿರುವ ಸಂಕಟದಿಂದಾಗಿ 10 ತಿಂಗಳಿಂದ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಕಣಕ್ಕೆ ಇಳಿಯದೇ ಇರುವ ಭಾರತದ ಪಿ.ವಿ. ಸಿಂಧು ಮತ್ತು ಸೈನಾ ನೆಹ್ವಾಲ್ ಜನವರಿಯಲ್ಲಿ ನಡೆಯಲಿರುವ ಥಾಯ್ಲೆಂಡ್ ಓಪನ್‌ ಟೂರ್ನಿಗಳಲ್ಲಿ ಆಡಲು ಸಜ್ಜಾಗುತ್ತಿದ್ದಾರೆ. ಆದರೆ ಸಿಂಧುಗೆ ಎರಡೂ ಟೂರ್ನಿಗಳ ಮೊದಲ ಸುತ್ತಿನಲ್ಲಿ ಸುಲಭ ಸವಾಲು ಇದ್ದರೆ ಸೈನಾ ಹಾದಿ ಕಠಿಣವಾಗುವ ಸಾಧ್ಯತೆ ಇದೆ.

ಜನವರಿ 12ರಿಂದ 17ರ ವರೆಗೆ ಮೊದಲನೇ ಥಾಯ್ಲೆಂಡ್ ಓಪನ್ ಮತ್ತು 19ರಿಂದ 24ರ ವರೆಗೆ ಎರಡನೇ ಥಾಯ್ಲೆಂಡ್ ಓಪನ್ ಟೂರ್ನಿ ಆಯೋಜನೆಯಾಗಿದೆ. ಟೂರ್ನಿಗಳ ಡ್ರಾವನ್ನು ಮಂಗಳವಾರ ತಡರಾತ್ರಿವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್‌) ಬಿಡುಗಡೆ ಮಾಡಿದ್ದು, ಮೊದಲ ಟೂರ್ನಿಯ ಆರಂಭದ ಸುತ್ತಿನ ಹಣಾಹಣಿಯಲ್ಲಿ ಸಿಂಧು ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಟ್ ಅವರ ಸವಾಲನ್ನು ಎದುರಿಸುವರು. ಜಪಾನ್‌ನ ನೊಜೊಮಿ ಒಕುಹರಾ ಅವರನ್ನು ಸೈನಾ ಎದುರಿಸಲಿದ್ದಾರೆ.

ನಂತರದ ಟೂರ್ನಿಯ ಮೊದಲ ಸುತ್ತಿನಲ್ಲಿ ಸಿಂಧುಗೆ ಥಾಯ್ಲೆಂಡ್‌ನ ಬುಸಾನ ಒಂಗ್ಬಮುರ್ಪಮ್ ಎದುರಾಳಿಯಾಗಲಿದ್ದು ಸೈನಾ ಥಾಯ್ಲೆಂಡ್‌ನ ಆಟಗಾರ್ತಿ, ನಾಲ್ಕನೇ ಶ್ರೇಯಾಂಕದ ರಚನಾಕ್ ಇಂತನಾನ್ ಅವರನ್ನು ಎದುರಿಸಬೇಕಾಗಿದೆ. ಸಿಂಧುಗೆ ಎರಡೂ ಟೂರ್ನಿಗಳಲ್ಲಿ ಆರನೇ ಶ್ರೇಯಾಂಕ ನೀಡಲಾಗಿದೆ.

ಕೋವಿಡ್‌–19ರಿಂದಾಗಿ ವಿಶ್ವದಾದ್ಯಂತ ಕ್ರೀಡಾ ಚಟುವಟಿಕೆ ಸ್ಥಗಿತಗೊಂಡಿತ್ತು. ಬಿಡಬ್ಲ್ಯುಎಫ್‌ ಇತ್ತೀಚೆಗೆ ಡೆನ್ಮಾರ್ಕ್ ಓಪನ್ ಸೂಪರ್ 750 ಟೂರ್ನಿ ಮತ್ತು ಸಾರ್ಲೋಲಕ್ಸ್ ಸೂಪರ್ 100 ಟೂರ್ನಿಗಳನ್ನು ಆಯೋಜಿಸಿತ್ತು. ಅದರಲ್ಲಿ ಸಿಂಧು ಮತ್ತು ಸೈನಾ ಪಾಲ್ಗೊಂಡಿರಲಿಲ್ಲ. ಭಾರತದ ಕಿದಂಬಿ ಶ್ರೀಕಾಂತ್ ಮಾತ್ರ ಅಲ್ಲಿ ಸೆಣಸಿದ್ದರು. ಸೈನಾ ಅವರನ್ನು ಕೋವಿಡ್‌–19 ಕಾಡಿತ್ತು ಕೂಡ.

ಪುರುಷರ ವಿಭಾಗದಲ್ಲಿ ಭಾರತದ ಏಳು ಮಂದಿ

ಮಾಜಿ ವಿಶ್ವ ಚಾಂಪಿಯನ್ ಕಿದಂಬಿ ಶ್ರೀಕಾಂತ್, ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಬಿ.ಸಾಯಿ ಪ್ರಣೀತ್ ಮತ್ತು ಯುವ ಆಟಗಾರ ಲಕ್ಷ್ಯ ಸೇನ್ ಒಳಗೊಂಡಂತೆ ಪುರುಷರ ವಿಭಾಗದಲ್ಲಿ ಭಾರತದ ಏಳು ಮಂದಿ ಎರಡೂ ಟೂರ್ನಿಗಳಲ್ಲಿ ಆಡಲಿದ್ದಾರೆ. ಅಕ್ಟೋಬರ್‌ನಲ್ಲಿ ನಡೆದಿದ್ದ ಡೆನ್ಮಾರ್ಕ್ ಓಪನ್‌ನಲ್ಲಿ ಶ್ರೀಕಾಂತ್ ಕ್ವಾರ್ಟರ್ ಫೈನಲ್‌ನಲ್ಲಿ ಹೊರಬಿದ್ದಿದ್ದರು. ಮೊದಲ ಥಾಯ್ಲೆಂಡ್ ಓಪನ್‌ನ ಮೊದಲ ಸುತ್ತಿನಲ್ಲಿ ಅವರು ಮತ್ತು ಭಾರತದ ಸೌರಭ್ ವರ್ಮಾ ಎದುರು ಸೆಣಸಲಿದ್ದಾರೆ. ಲಕ್ಷ್ಯಸೇನ್‌ ಡೆನ್ಮಾರ್ಕ್‌ನ ರಸ್ಮಸ್ ಗೆಮ್ಕೆ ಅವರನ್ನು ಎದುರಿಸಲಿದ್ದಾರೆ. ಸ್ಥಳೀಯ ಆಟಗಾರ ಕಂಟ‍ಫೊನ್ ವಂಗ್ಚರೆನ್ ವಿರುದ್ಧ ಸಾಯಿ ಪ್ರಣಿತ್ ಸೆಣಸುವರು. ಎಚ್‌.ಎಸ್.ಪ್ರಣಯ್‌ಗೆ ಮಲೇಷ್ಯಾದ ಲೀ ಜಿ ಜಿಯಾ ಮೊದಲ ಎದುರಾಳಿಯಾಗಿದ್ದು ಪರುಪಳ್ಳಿ ಕಶ್ಯಪ್ ಜಪಾನ್‌ನ ಕೆಂಟಾ ನಿಶಿಮೊಟೊ ಅವರನ್ನು, ಸಮೀರ್ ವರ್ಮಾ ಇಂಡೊನೇಷ್ಯಾದ ಶೆಸರ್ ಹಿರೇನ್ ಅವರನ್ನು ಎದುರಿಸುವರು.

ಎರಡನೇ ಟೂರ್ನಿಯಲ್ಲಿ ಶ್ರೀಕಾಂತ್ ಸ್ಥಳೀಯ ಆಟಗಾರ ಸಿಥಿಕೊಮ್ ತಮಾಸಿನ್ ಅವರನ್ನು, ಪ್ರಣೀತ್‌ ಮಲೇಷ್ಯಾದ ಡ್ಯಾರೆನ್ ಲ್ಯೂ ಅವರನ್ನು, ಲಕ್ಷ್ಯಸೇನ್ ಚೀನಾ ಥೈಪೆಯ ಚೌ ಟೀನ್ ಅವರನ್ನು ಅವರನ್ನು ಎದುರಿಸುವರು. ಕಶ್ಯಪ್ ಮತ್ತು ಗೆಮ್ಕೆ, ಪ್ರಣಯ್ ಮತ್ತು ಜೊನಾಥನ್ ಕ್ರಿಸ್ಟಿ, ಸಮೀರ್ ವರ್ಮಾ ಮತ್ತು ಜೀ ಜಿಯಾ, ಸೌರಭ್ ವರ್ಮಾ ಮತ್ತು ಆ್ಯಂಟನಿ ಸಿನಿಸುಕಾ ಸೆಣಸುವರು.

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮೊದಲ ಟೂರ್ನಿಯ ಮೊದಲ ಸುತ್ತಿನಲ್ಲಿ ಕೊರಿಯಾದ ಕಿಮ್ ಜಿ ಜಂಗ್‌–ಲೀ ಯಾಂಗ್ ಡೀ ಜೋಡಿಯನ್ನು ಎದುರಿಸಲಿದ್ದಾರೆ. ಎರಡನೇ ಟೂರ್ನಿಯ ಮೊದಲ ಸುತ್ತಿನಲ್ಲಿ ಸಾತ್ವಿಕ್–ಚಿರಾಗ್ ಜೋಡಿಗೆ ಭಾರತದ ಮನು ಅತ್ರಿ–ಸುಮೀತ್ ರೆಡ್ಡಿ ಎದುರಾಳಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT