ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಿಂಧು ಜಯಭೇರಿ, ಸೈನಾಗೆ ನಿರಾಸೆ

ಜಯರಾಂ, ಕಿದಂಬಿ ಶ್ರೀಕಾಂತ್‌ಗೆ ಗೆಲುವು
Last Updated 4 ಮಾರ್ಚ್ 2021, 14:29 IST
ಅಕ್ಷರ ಗಾತ್ರ

ಬಾಸೆಲ್‌, ಸ್ವಿಟ್ಜರ್ಲೆಂಡ್‌: ಭಾರತದ ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್ ಮತ್ತು ಅಜಯ್ ಜಯರಾಮ್ ಇಲ್ಲಿ ನಡೆಯುತ್ತಿರುವ ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮಿಶ್ರ ಡಬಲ್ಸ್‌ನಲ್ಲಿ ಜಯ ಗಳಿಸಿದರೆ ಸೈನಾ ನೆಹ್ವಾಲ್ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಅಮೆರಿಕದ ಐರಿಸ್ ವ್ಯಾಂಗ್ ವಿರುದ್ಧ 21-13, 21-14ರಲ್ಲಿ ಜಯ ಗಳಿಸಿದರು. ಶ್ರೀಕಾಂತ್ ಫ್ರಾನ್ಸ್‌ನ ಥಾಮಸ್ ರಕ್ಸೆಲ್ ಸವಾಲನ್ನು21-10, 14-21, 21-14ರಲ್ಲಿ ಮೀರಿ ನಿಂತರು. ಮೂರನೇ ಶ್ರೇಯಾಂಕದ ಡೇನ್ ರಸ್ಮುಸ್ ಗೆಮ್ಕೆ ವಿರುದ್ಧ ಅಜಯ್ ಜಯರಾಂ21-18, 17-21, 21-13ರಲ್ಲಿ ಗೆಲುವು ಸಾಧಿಸಿದರು.

ಥಾಯ್ಲೆಂಡ್ ಓಪನ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿ ಸೆಮಿಫೈನಲ್‌ ವರೆಗೆ ತಲುಪಿದ್ದ ಸಾತ್ವಿಕ್ ಮತ್ತು ಅಶ್ವಿನಿ ಜೋಡಿ ಗುರುವಾರದ ಪಂದ್ಯದಲ್ಲಿ ಇಂಡೊನೇಷ್ಯಾದ ರಿನೊವ್ ರಿವಾಲ್ಡಿ ಮತ್ತು ಪೀತಾ ಮೆಂತಾರಿ ವಿರುದ್ಧ21-18, 21-16ರಲ್ಲಿ ಜಯ ಗಳಿಸಿದರು.

ಎರಡನೇ ಶ್ರೇಯಾಂಕದ ಸಿಂಧು ಎಂಟರ ಘಟ್ಟದ ಪಂದ್ಯದಲ್ಲಿ ಐದನೇ ಶ್ರೇಯಾಂಕಿತೆ ಥಾಯ್ಲೆಂಡ್‌ನ ಬುಸನಾನ್ ಒಂಗ್ಬಾಮ್‌ರುಂಫನ್ ವಿರುದ್ಧ ಸೆಣಸುವರು. ಶ್ರೀಕಾಂತ್‌ಗೆ ಎಂಟರ ಘಟ್ಟದಲ್ಲಿ ಆರನೇ ಶ್ರೇಯಾಂಕದ ಥಾಯ್ಲೆಂಡ್ ಆಟಗಾರ ಕಂಟಫನ್ ವಾಂಗ್ಚರೊನ್ ಎದುರಾಳಿ. ಜಯರಾಂ ಥಾಯ್ಲೆಂಡ್‌ನ ಕುನ್ಲಾವುತ್ ವಿದಿಸನ್ ವಿರುದ್ಧ ಕಣಕ್ಕೆ ಇಳಿಯುವರು.

ಸೈನಾ, ಸೌರಭ್‌ಗೆ ಸೋಲು

ಮಾಜಿ ಚಾಂಪಿಯನ್ ಸೈನಾ ನೆಹ್ವಾಲ್ ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಬಲ ಪೈಪೋಟಿಯ ನಂತರ ಸೋತು ಹೊರಬಿದ್ದರು. 58 ನಿಮಿಷಗಳ ಪಂದ್ಯದಲ್ಲಿ ಥಾಯ್ಲೆಂಡ್‌ನ ಫಿಟಯಪೊರ್ನ್‌ ಚೈವಾನ್‌ಗೆ 21–16, 17–21, 21–23ರಲ್ಲಿ ಸೈನಾ ಮಣಿದರು.

ಸೈನಾ ಅವರ ಪತಿ ಪರುಪಳ್ಳಿ ಕಶ್ಯಪ್ ಪುರುಷರ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ಪ್ಯಾಬ್ಲೊ ಅಬಿಯನ್ ವಿರುದ್ಧ 15-21, 10-21ರಲ್ಲಿ ಸೋತು ಹೊರಬಿದ್ದರು. ಪುರುಷರ ಸಿಂಗಲ್ಸ್‌ನಲ್ಲಿ ಸೌರಭ್ ವರ್ಮಾ ಕೂಡ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಥಾಯ್ಲೆಂಡ್‌ನ ಕುನ್ಲಾವುತ್ ವಿದಿಸರ್ನ್‌ ವಿರುದ್ಧ ಅವರು 17-21, 14-21ರಲ್ಲಿ ಸೋತರು. ಲಕ್ಷ್ಯಸೇನ್16-21, 12-21ರಲ್ಲಿ ವಿಕ್ಟರ್ ಸ್ವೆಂಡ್ಸೆನ್‌ಗೆ ಮಣಿದರು.

ಪುರುಷರ ಡಬಲ್ಸ್‌ ಜೋಡಿ ಧ್ರುವ ಕಪಿಲ ಮತ್ತು ಎಂ.ಆರ್.ಅರ್ಜುನ್ 16-21, 18-21ರಲ್ಲಿ ರಷ್ಯಾದ ವ್ಲಾದಿಮಿರ್ ಇವನೊವ್‌ ಮತ್ತು ಇವಾನ್ ಸೊಜೊನೊವ್ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT