ಬ್ಯಾಂಕಾಕ್: ಭರ್ಜರಿ ಆರಂಭದೊಂದಿಗೆ ಚಿನ್ನದ ಕನಸಿನ ಭರವಸೆ ಮೂಡಿಸಿದ್ದ ಭಾರತ ಮಹಿಳೆಯರ ತಂಡ ಉಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದೆ. ಥಾಯ್ಲೆಂಡ್ ವಿರುದ್ಧ ಗುರುವಾರ ನಡೆದ ಹಣಾಹಣಿಯಲ್ಲಿ 0–3ರಲ್ಲಿ ಸೋತ ಕಾರಣ ಭಾರತದ ಅಭಿಯಾನ ಮುಕ್ತಾಯಗೊಂಡಿತು.
ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದಿರುವ ಪಿ.ವಿ.ಸಿಂಧು ಮೊದಲ ಪಂದ್ಯದಲ್ಲಿ ರಚನಾಕ್ ಇಂಟನನ್ ಅವರಿಗೆ ಪ್ರಬಲ ಸ್ಪರ್ಧೆಯೊಡ್ಡಿದರು. ಮೊದಲ ಗೇಮ್‌ನಲ್ಲಿ ಜಯ ಗಳಿಸಿ ಭರವಸೆ ಮೂಡಿಸಿದರು. ಆದರೆ ನಂತರ ಎದುರಾಳಿ ಪ್ರಾಬಲ್ಯ ಮೆರೆದರು. ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿರುವ ಸಿಂಧು ಎಂಟನೇ ಸ್ಥಾನದ ರಚನಾಕ್‌ಗೆ 21-18, 17-21, 12-21ರಲ್ಲಿ ಮಣಿದರು.
ಡಬಲ್ಸ್ ವಿಭಾಗದಲ್ಲೂ ಸೋಲುವ ಮೂಲಕ ಭಾರತ 0–2ರ ಹಿನ್ನಡೆಯೊಂದಿಗೆ ತೀವ್ರ ಒತ್ತಡಕ್ಕೆ ಒಳಗಾಯಿತು. ಶ್ರುತಿ ಮಿಶ್ರಾ ಮತ್ತು ಸಿಮ್ರಾನ್ 16-21, 13-21ರಲ್ಲಿ ಜೊಂಗ್‌ಕೊಲ್ಫನ್ ಕಿತಿತರ್ಕುಲ್ ಮತ್ತು ರವಿಂದ ಪ್ರಜೊಂಗಯ್ ಎದುರು ಸೋತರು.
42 ನಿಮಿಷ ನಡೆದ ಎರಡನೇ ಸಿಂಗಲ್ಸ್ ಪಂದ್ಯದಲ್ಲೂ ಭಾರತ ಸೋತಿತು. ಆಕರ್ಷಿ ಕಶ್ಯಪ್ ಅವರನ್ನು 21–16, 21–11ರಲ್ಲಿ ಪೊರ್ನಪೊವಿ ಚೊಚುವಾಂಗ್ ಸೋಲಿಸಿದರು. ಥಾಯ್ಲೆಂಡ್ 3–0ಯಿಂದ ಗೆದ್ದ ಕಾರಣ ಉಳಿದೆರಡು ಪಂದ್ಯಗಳಿಗೆ ಮಹತ್ವ ಇರಲಿಲ್ಲ. ಆದ್ದರಿಂದ ಆ ಪಂದ್ಯಗಳನ್ನು ಕೈಬಿಡಲಾಯಿತು.
ಬುಧವಾರ ನಡೆದ ಗುಂಪು ಹಂತದ ಕೊನೆಯ ಪಂದ್ಯದಲ್ಗಲಿ ಭಾರತ 0–5ರಲ್ಲಿ ಕೊರಿಯಾಗೆ ಮಣಿದಿತ್ತು. ಈ ಹಣಾಹಣಿಯ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು ಆ್ಯನ್ ಸಿಯಾಂಗ್ ವಿರುದ್ಧ ಸೋತಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.