ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಬರ ನೀಗುವ ನಿರೀಕ್ಷೆಯಲ್ಲಿ ಭಾರತದ ಪಿ.ವಿ.ಸಿಂಧು

ಸೈಯದ್‌ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ ಇಂದಿನಿಂದ
Last Updated 17 ಜನವರಿ 2022, 12:20 IST
ಅಕ್ಷರ ಗಾತ್ರ

ಲಖನೌ: ಇಂಡಿಯಾ ಓಪನ್ ಟೂರ್ನಿಯ ಅನಿರೀಕ್ಷಿತ ಸೆಮಿಫೈನಲ್‌ ಸೋಲು ಮರೆಯುವ ಸನ್ನಾಹದಲ್ಲಿರುವ ಎರಡು ಬಾರಿಯ ಒಲಿಂಪಿಕ್ಸ್ ಪ‍ದಕ ವಿಜೇತೆ ಭಾರತದ ಪಿ.ವಿ.ಸಿಂಧು ಅವರು ಮಂಗಳವಾರ ಆರಂಭವಾಗುವ ಸೈಯದ್‌ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಮೇಲೆ ಚಿತ್ತ ನೆಟ್ಟಿದ್ದಾರೆ.

ಇಲ್ಲಿನ ಬಾಬು ಬನಾರಸಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.

2019ರ ಮಹಿಳಾ ಸಿಂಗಲ್ಸ್ ವಿಶ್ವ ಚಾಂಪಿಯನ್‌ಷಿಪ್‌ ಗೆಲುವಿನ ನಂತರ ಪ್ರಶಸ್ತಿ ಬರ ಎದುರಿಸುತ್ತಿರುವ ಸಿಂಧು, ಇಂಡಿಯಾ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಉತ್ಸಾಹದಲ್ಲಿದ್ದರು. ಆದರೆ ನಾಲ್ಕರ ಘಟ್ಟದ ಪಂದ್ಯದಲ್ಲಿ ಥಾಯ್ಲೆಂಡ್ ಆಟಗಾರ್ತಿ ಸುಪನಿದಾ ಕೇಟ್‌ಥೊಂಗ್ ಎದುರು ಎಡವಿದ್ದರು.

ಕಳೆದ ವರ್ಷ ಸ್ವಿಸ್ ಓಪನ್ ಮತ್ತು ವಿಶ್ವ ಟೂರ್ ಫೈನಲ್ಸ್‌ನಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದ್ದ ಸಿಂಧು, ಸೈಯದ್‌ ಮೋದಿ ಟೂರ್ನಿಯಲ್ಲಿ ಭಾರತದವರೇ ಆದ ತಾನ್ಯಾ ಹೇಮಂತ್ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ. ಸೆಮಿಫೈನಲ್‌ನಲ್ಲಿ ಮತ್ತೆ ಅವರಿಗೆ ಸುಪನಿದಾ ಸವಾಲು ಎದುರಾಗುವ ಸಾಧ್ಯತೆಯಿದೆ.

ಲಂಡನ್‌ ಒಲಿಂಪಿಕ್ಸ್ ಕಂಚಿನ ವಿಜೇತೆ ಸೈನಾ ನೆಹ್ವಾಲ್‌ ಕೂಡ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ. ಆಕರ್ಷಿ ಕಶ್ಯಪ್‌, ಮಾಳವಿಕಾ ಬಾನ್ಸೋದ್‌ ಕೂಡ ಅದೃಷ್ಟ ಪರೀಕ್ಷಿಸಲಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕೆನಡಾದ ಮಿಚೆಲ್ಲೆ ಲೀ, ಪೋಲೆಂಡ್‌ನ ಜೋರ್ಡಾನ್ ಹಾರ್ಟ್‌, ಅಮೆರಿಕದ ಐರಿಸ್ ವಾಂಗ್‌ ಮತ್ತು ರಷ್ಯಾದ ಇವ್‌ಜೆನಿಯಾ ಕೊಸೆತ್ಸಕಯಾ ಕೂಡ ಪ್ರಬಲ ಸ್ಪರ್ಧಿಗಳಾಗಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಎಚ್‌.ಎಸ್‌. ಪ್ರಣಯ್‌, ಸೌರಭ್ ವರ್ಮಾ, ಸಮೀರ್ ವರ್ಮಾ, ಶುಭಂಕರ್ ಡೇ, ಕಿರಣ್ ಜಾರ್ಜ್‌, ಮಿಥುನ್ ಮಂಜುನಾಥ್‌ ಮತ್ತು ಪ್ರಿಯಾಂಶು ರಾಜಾವತ್‌ ಕಣಕ್ಕಿಳಿಯಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಭಟ್ ಕೆ.– ಶಿಖಾ ಗೌತಮ್‌ ಆಡಲಿದ್ದಾರೆ.

ಹಿಂದೆ ಸರಿದ ಲಕ್ಷ್ಯ, ಸಾತ್ವಿಕ್ –ಚಿರಾಗ್‌:

ಇಂಡಿಯಾ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ಮತ್ತು ಪುರುಷರ ಡಬಲ್ಸ್ ವಿಭಾಗಗಳಲ್ಲಿ ಚಾಂಪಿಯನ್‌ಗಳಾದ ಕ್ರಮವಾಗಿ ಲಕ್ಷ್ಯ ಸೇನ್‌ ಮತ್ತು ಚಿರಾಗ್‌ ಶೆಟ್ಟಿ– ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಜೋಡಿಯು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಕಳೆದ ವರ್ಷದ ಅಕ್ಟೋಬರ್‌ನಿಂದ ಬೆನ್ನುಬೆನ್ನಿಗೆ ಟೂರ್ನಿಗಳಲ್ಲಿ ಆಡುತ್ತಿದ್ದು ‘ದಣಿವಾಗಿದೆ‘ ಎಂಬ ಕಾರಣವನ್ನು ಲಕ್ಷ್ಯ ನೀಡಿದ್ದಾರೆ. ಈ ಅವಧಿಯಲ್ಲಿ ಅವರು ಒಂಬತ್ತು ಟೂರ್ನಿಗಳಲ್ಲಿ ಆಡಿದ್ದಾರೆ.

ಕಿದಂಬಿ ಶ್ರೀಕಾಂತ್‌, ಕರ್ನಾಟಕದ ಆಟಗಾರ್ತಿ ಅಶ್ವಿನಿ ಪೊನ್ನಪ್ಪ, ಮನು ಅತ್ರಿ ಕೂಡ ಕಣಕ್ಕಿಳಿಯುತ್ತಿಲ್ಲ. ಕಳೆದ ವಾರ ಕೋವಿಡ್‌ ಖಚಿತಪಟ್ಟ ಕಾರಣ ಈ ಮೂವರು ಇಂಡಿಯಾ ಓಪನ್ ಟೂರ್ನಿಯಲ್ಲೂ ಆಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT