ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಮೇಲೆ ಸಿಂಧು, ಪ್ರಣಯ್‌ ಕಣ್ಣು

ಮಲೇಷ್ಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿ
Last Updated 27 ಜೂನ್ 2022, 12:25 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಭಾರತದ ಪಿ.ವಿ.ಸಿಂಧು ಮತ್ತು ಎಚ್‌.ಎಸ್‌. ಪ್ರಣಯ್‌ ಅವರು ಮಂಗಳವಾರ ಇಲ್ಲಿ ಆರಂಭವಾಗಲಿರುವ ಮಲೇಷ್ಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ.

ಈ ತಿಂಗಳ ಆರಂಭದಲ್ಲಿ ನಡೆದ ಇಂಡೊನೇಷ್ಯಾ ಓಪನ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದ ಸಿಂಧು, ಇಲ್ಲಿ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.

ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಅವರಿಗೆ ಈ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಕಠಿಣ ಸವಾಲು ಎದುರಾಗಿದೆ. ಥಾಯ್ಲೆಂಡ್‌ನ ಪಾರ್ನ್‌ಪವೀ ಚೊಚುವಾಂಗ್ ಅವರಿಗೆ ಮುಖಾಮುಖಿಯಾಗಲಿದ್ದಾರೆ. ವಿಶ್ವ ಕ್ರಮಾಂಕದಲ್ಲಿ 10ನೇ ಸ್ಥಾನದಲ್ಲಿರುವ ಆಟಗಾರ್ತಿಯ ಎದುರು ಎಂಟು ಪಂದ್ಯಗಳಲ್ಲಿ ಸಿಂಧು ಐದು ಬಾರಿ ಗೆದ್ದು, ಮೂರು ಸಲ ಸೋತಿದ್ದಾರೆ. ಕಳೆದ ಐದು ಪಂದ್ಯಗಳಲ್ಲಿ ಮೂರು ಬಾರಿ ಸಿಂಧು ನಿರಾಸೆ ಅನುಭವಿಸಿದ್ದಾರೆ.

ಸಿಂಧು ಮೊದಲ ಸುತ್ತಿನ ತಡೆ ದಾಟಿದರೆ, ಒಲಿಂಪಿಕ್ ಚಾಂಪಿಯನ್‌ ಚೀನಾದ ಚೆನ್ ಯು ಫೆ ಅವರಿಗೆ ಮುಖಾಮುಖಿಯಾಗುವ ಸಾಧ್ಯತೆಯಿದೆ.

ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ, ಭಾರತದ ಸೈನಾ ನೆಹ್ವಾಲ್ ಕೂಡ ಕಣಕ್ಕಿಳಿಯುತ್ತಿದ್ದು, ಮೊದಲ ಪಂದ್ಯದಲ್ಲಿ ಅಮೆರಿಕದ ಐರಿಸ್‌ ವಾಂಗ್ ಎದುರು ಸೆಣಸಲಿದ್ದಾರೆ.

ಸ್ಥಿರ ಸಾಮರ್ಥ್ಯ ತೋರುವ ತವಕದಲ್ಲಿರುವ ಪ್ರಣಯ್, ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಮಲೇಷ್ಯಾದ ಡರೆನ್ ಲಿವ್ ಎದುರು ಆಡುವರು. ಈ ವಿಭಾಗದಲ್ಲಿ ಬಿ. ಸಾಯಿ ಪ್ರಣೀತ್‌, ಸಮೀರ್ ವರ್ಮಾ, ಪರುಪಳ್ಳಿ ಕಶ್ಯಪ್‌ ಕೂಡ ಅದೃಷ್ಟಪರೀಕ್ಷೆಗೆ ಸಜ್ಜಾಗಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ, ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ– ಬಿ.ಸುಮೀತ್ ರೆಡ್ಡಿ, ವೆಂಕಟ್‌ ಗೌರವ್‌ ಪ್ರಸಾದ್‌– ಜೂಹಿ ದೇವಾಂಗನ್‌ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT