ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಮಹಿಳಾ ಸಿಂಗಲ್ಸ್‌ನಲ್ಲಿ ಅರಳುವುದೇ ಚಿನ್ನ

ಇಂದಿನಿಂದ ಟೂರ್ನಿ ಆರಂಭ: ಸೈನಾ, ಸಿಂಧು ಆಕರ್ಷಣೆ
Last Updated 10 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಂ: ವಿಶ್ವದೆಲ್ಲೆಡೆ ಈಗ ಕೋವಿಡ್ ಕಳವಳ ಶುರುವಾಗಿದೆ. ಕೋವಿಡ್‌ ಸೋಂಕು ಹರಡುವ ಆತಂಕದಿಂದ ಈಗಾಗಲೇ ಹಲವು ಮಹತ್ವದ ಕ್ರೀಡಾಕೂಟಗಳನ್ನು ಮುಂದೂಡಲಾಗಿದೆ.

ಈ ಬೆಳವಣಿಗೆಗಳ ನಡುವೆಯೇ ಇಲ್ಲಿನ ಅರೇನಾ ಬರ್ಮಿಂಗ್‌ಹ್ಯಾಂನಲ್ಲಿ ಬುಧವಾರ ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ಗೆ ಚಾಲನೆ ಸಿಗಲಿದೆ.

₹ 8.11 ಕೋಟಿ ಬಹುಮಾನ ಮೊತ್ತದ ಈ ಚಾಂಪಿಯನ್‌ಷಿಪ್‌ ಒಟ್ಟು 12 ಸಾವಿರ ರ‍್ಯಾಂಕಿಂಗ್‌ ಪಾಯಿಂಟ್ಸ್‌ ಒಳಗೊಂಡಿದೆ. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಏಪ್ರಿಲ್‌ 28 ಕೊನೆಯ ದಿನವಾಗಿದೆ. ಹೀಗಾಗಿ ರ‍್ಯಾಂಕಿಂಗ್‌ ಪಾಯಿಂಟ್ಸ್‌ ಹೆಚ್ಚಿಸಿಕೊಳ್ಳುವ ಗುರಿಯೊಂದಿಗೆ ವಿವಿಧ ದೇಶಗಳ ಪ್ರಮುಖ ಕ್ರೀಡಾಪಟುಗಳು ಇದರಲ್ಲಿ ಕಣಕ್ಕಿಳಿಯಲಿದ್ದಾರೆ.

121 ವರ್ಷಗಳ ಇತಿಹಾಸವಿರುವ ಚಾಂಪಿಯನ್‌ಷಿಪ್‌ನಲ್ಲಿ ಭಾರತವು ಎರಡು ಚಿನ್ನದ ಪದಕಗಳನ್ನು ಗೆದ್ದಿದೆ. ಕರ್ನಾಟಕದ ಪ್ರಕಾಶ್‌ ಪಡುಕೋಣೆ (1980) ಮತ್ತು ಆಂಧ್ರಪ್ರದೇಶದ ಪುಲ್ಲೇಲಾ ಗೋಪಿಚಂದ್‌ (2001) ಅವರಿಂದ ಈ ಸಾಧನೆ ಮೂಡಿಬಂದಿತ್ತು. ಆದರೆ ಮಹಿಳಾ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಕೈಗೆಟುಕದಾಗಿದೆ. ಈ ಕೊರಗನ್ನು ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್‌ ಈ ಬಾರಿ ದೂರ ಮಾಡುವರೇ ಎಂಬ ಕುತೂಹಲ ಗರಿಗೆದರಿದೆ.

2018ರಲ್ಲಿ ಸಿಂಧು,ಸೆಮಿಫೈನಲ್‌ ಪ್ರವೇಶಿಸಿದ್ದರು. ಇದು ಅವರ ಶ್ರೇಷ್ಠ ಸಾಧನೆಯಾಗಿದೆ. ಹಾಲಿ ವಿಶ್ವ ಚಾಂಪಿಯನ್‌ ಆಗಿರುವ ಸಿಂಧು, ಇತ್ತೀಚೆಗೆ ನಡೆದಿದ್ದ ಟೂರ್ನಿಗಳಲ್ಲಿ ಪರಿಣಾಮಕಾರಿಯಾಗಿ ಆಡಲು ವಿಫಲರಾಗಿದ್ದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಭಾರತದ ಆಟಗಾರ್ತಿ, ಮೊದಲ ಸುತ್ತಿನಲ್ಲಿ ಅಮೆರಿಕದ ಬೀವೆನ್‌ ಜಾಂಗ್‌ ವಿರುದ್ಧ ಸೆಣಸಲಿದ್ದಾರೆ.

ಸೈನಾ ನೆಹ್ವಾಲ್‌ ಕೂಡ ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದಾರೆ. ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ದೇಶದ ಮೊದಲ ಆಟಗಾರ್ತಿ ಎಂಬ ಹಿರಿಮೆ ಅವರದ್ದು. 2015ರಲ್ಲಿ ಈ ಸಾಧನೆ ಮೂಡಿಬಂದಿತ್ತು. ಭಾರತದ ಆಟಗಾರ್ತಿಗೆ ಈ ಬಾರಿ ಮೊದಲ ಸುತ್ತಿನಲ್ಲೇ ಕಠಿಣ ಸವಾಲು ಎದುರಾಗಲಿದೆ. ಅವರು ಜಪಾನ್‌ನ ಮೂರನೇ ಶ್ರೇಯಾಂಕದ ಆಟಗಾರ್ತಿ ಅಕಾನೆ ಯಮಗುಚಿ ವಿರುದ್ಧ ಆಡಬೇಕಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್ ಪದಕ ಜಯಿಸುವ ಹುಮ್ಮಸ್ಸಿನಲ್ಲಿದ್ದಾರೆ. ಅವರು ಹೋದ ವರ್ಷ ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದ್ದರು. ಆರಂಭಿಕ ಪಂದ್ಯದಲ್ಲಿ ಶ್ರೀಕಾಂತ್‌ ಅವರು ಚೆನ್ ಲಾಂಗ್‌ ವಿರುದ್ಧ ಸೆಣಸಬೇಕಿದೆ. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿರುವ ಚೆನ್‌, ಇಲ್ಲಿ ಮೂರನೇ ಶ್ರೇಯಾಂಕ ಹೊಂದಿದ್ದಾರೆ. ಹೀಗಾಗಿ ಭಾರತದ ಆಟಗಾರನಿಗೆ ಕಠಿಣ ಪೈಪೋಟಿ ಎದುರಾಗುವ ಸಾಧ್ಯತೆ ಇದೆ.

ಬಿ.ಸಾಯಿ ಪ್ರಣೀತ್‌ ಅವರು ಚೀನಾದ ಜಾವೊ ಜುನ್‌ ಪೆಂಗ್‌ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ.

ಪರುಪಳ್ಳಿ ಕಶ್ಯಪ್‌, ಇಂಡೊನೇಷ್ಯಾದ ಹಿರೆನ್‌ ರುಸ್ತಾವಿಟೊ ಎದುರೂ; ಲಕ್ಷ್ಯ ಸೇನ್‌, ಹಾಂಗ್‌ಕಾಂಗ್‌ನ ಲೀ ಚೆವುಕ್‌ ಯಿವು ವಿರುದ್ಧವೂ ಹೋರಾಡಲಿದ್ದಾರೆ.

ಮಹಿಳಾ ಡಬಲ್ಸ್‌ನಲ್ಲಿ ಕಣಕ್ಕಿಳಿಯಲಿರುವ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಅವರು ಆಸ್ಟ್ರೇಲಿಯಾದ ಸೆತ್ಯಾನಾ ಮಪಾಸಾ ಮತ್ತು ಗ್ರೊನ್ಯಾ ಸೋಮರ್‌ವಿಲ್ಲೆ ವಿರುದ್ಧ ಸೆಣಸಲಿದ್ದಾರೆ.

ಮಿಶ್ರ ಡಬಲ್ಸ್‌ನಲ್ಲಿ ಸಿಕ್ಕಿ ಮತ್ತು ಪ್ರಣವ್‌ ಜೆರ‍್ರಿ ಚೋಪ್ರಾ ಅವರು ಚೀನಾದ ಜೆಂಗ್‌ ಸಿ ವೀ ಹಾಗೂ ಹುವಾಂಗ್‌ ಯಾ ಕ್ವಿಯೊಂಗ್‌ ಎದುರು ಆಡಲಿದ್ದಾರೆ.

ಕೋವಿಡ್‌ ಭೀತಿಯಿಂದಾಗಿ ಭಾರತದ ಏಳು ಆಟಗಾರರು ಚಾಂಪಿಯನ್‌ಷಿಪ್‌ನಿಂದ ಹಿಂದೆ ಸರಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT