ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧು, ಸಮೀರ್‌ ಜಯಭೇರಿ

ಬಿಡಬ್ಲ್ಯುಎಫ್‌ ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿ: ಜಗ್ಯಾರ್ತೊ, ತಾಯ್‌ಗೆ ಸೋಲು
Last Updated 13 ಡಿಸೆಂಬರ್ 2018, 18:30 IST
ಅಕ್ಷರ ಗಾತ್ರ

ಗುವಾಂಗ್ಜು: ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ, ಚೀನಾ ತೈಪೆಯ ತಾಯ್‌ ತ್ಸು ಯಿಂಗ್‌ ಅವರನ್ನು ಕಂಗೆಡಿಸಿದ ಭಾರತದ ಪಿ.ವಿ.ಸಿಂಧು, ಬಿಡಬ್ಲ್ಯುಎಫ್‌ ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಗುಂಪು ಹಂತದಲ್ಲಿ ಅಮೋಘ ಜಯ ಸಾಧಿಸಿದರು.

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದ ಮೊದಲ ಗೇಮ್‌ನಲ್ಲಿ ಸೋತರೂ ಛಲ ಬಿಡದೆ ಕಾದಾಡಿದ ಸಿಂಧು 14–21, 21–16, 21–18ರಿಂದ ಜಯ ಸಾಧಿಸಿದರು. ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಭಾರತದ ಸಮೀರ್ ವರ್ಮಾ 21–16, 21–7ರಲ್ಲಿ ಇಂಡೊನೇಷ್ಯಾದ ಟಾಮಿ ಸುಗ್ಯಾರ್ತೊ ಎದುರು ಗೆದ್ದರು.

ಸಿಂಧು ಮತ್ತು ತ್ಸು ಅವರು ಈ ಹಿಂದೆ 13 ಬಾರಿ ಸೆಣಸಿದ್ದು ಭಾರತದ ಆಟಗಾರ್ತಿ ಇತ್ತೀಚೆಗೆ ಸತತ ಆರು ಪಂದ್ಯಗಳಲ್ಲಿ ಸೋತಿದ್ದರು. ಇದಕ್ಕೆ ಗುರುವಾರ ಸೇಡು ತೀರಿಸಿಕೊಂಡರು.

16 ನಿಮಿಷ ನಡೆದ ಮೊದಲ ಗೇಮ್‌ನಲ್ಲಿ ಸಿಂಧು ನೀರಸ ಆಟವಾಡಿದರು. ಅವರು ಗಳಿಸಿದ 14 ಪಾಯಿಂಟ್‌ಗಳಲ್ಲಿ ಹೆ‌ಚ್ಚಿನವು ಎದುರಾಳಿ ಎಸಗಿದ ತಪ್ಪುಗಳಿಂದಾಗಿ ಲಭಿಸಿದ್ದವು. ತಂತ್ರ ಮತ್ತು ಚುರುಕಿನ ಆಟದ ಮೂಲಕ ಮೇಲುಗೈ ಸಾಧಿಸಿದ ತ್ಸು ಸುಲಭವಾಗಿ ಗೇಮ್‌ನಲ್ಲಿ ಗೆದ್ದರು.

ಎರಡನೇ ಗೇಮ್‌ನ ಆರಂಭದಲ್ಲಿ ತ್ಸು ಅವರು ಅಂಗಣದ ಮೂಲೆ ಮೂಲೆಗೆ ಷಟಲ್‌ ಅನ್ನು ಅಟ್ಟಿ ಸಿಂಧುಗೆ ಪ್ರಯಾಸ ತಂದೊಡ್ಡಿದ್ದರು. ಆದರೆ ಪ್ರತಿ ತಂತ್ರ ಹೂಡಿದ ಸಿಂಧು 6–3ರಿಂದ ಮುನ್ನಡೆದು ವಿಶ್ವಾಸ ಹೆಚ್ಚಿಸಿಕೊಂಡರು. ನಂತರ ಈ ಮುನ್ನಡೆಯನ್ನು 10–4ಕ್ಕೆ ಏರಿಸಿದರು.

ವಿರಾಮದ ನಂತರ ತ್ಸು ಪ್ರಬಲ ಪೈಪೋಟಿ ನೀಡಿ ಲಯಕ್ಕೆ ಮರಳಲು ಪ್ರಯತ್ನಿಸಿದರು. ಆದರೆ ಸಿಂಧು ಮಣಿಯಲಿಲ್ಲ. 17–12 ಮತ್ತು 19–13ರಿಂದ ಮುಂದೆ ಸಾಗಿದ ಅವರು ನಂತರ ಗೇಮ್‌ ಗೆದ್ದು ಸಮಬಲ ಸಾಧಿಸಿದರು.

ನಿರ್ಣಾಯಕ ಮೂರನೇ ಗೇಮ್‌ನ ಆರಂಭದಲ್ಲಿ ತ್ಸು ಸತತ ಮೂರು ಪಾಯಿಂಟ್ ಗಳಿಸಿದರು. ನಂತರ ಈ ಮುನ್ನಡೆ 5–2 ಮತ್ತು 8–5ಕ್ಕೆ ಏರಿತು. ನಂತರ ಸಿಂಧು ಕೂಡ ಭಾರಿ ಪೈಪೋಟಿಗೆ ಮುಂದಾದರು. ಹೀಗಾಗಿ ವಿರಾಮದ ವೇಳೆ ಹಿನ್ನಡೆ 11–12 ಆಯಿತು. ವಿರಾಮದ ನಂತರ ಎದುರಾಳಿ ಆಟಗಾರ್ತಿ ಸತತ ಮೂರು ಬಾರಿ ತಪ್ಪುಗಳನ್ನು ಎಸಗಿದರು. ಆದ್ದರಿಂದ ಸಿಂಧು 16–13ರ ಮುನ್ನಡೆ ಸಾಧಿಸಿದರು. ಕ್ರಾಸ್ ಕೋರ್ಟ್ ಶಾಟ್‌ ಮತ್ತು ಶಕ್ತಿಶಾಲಿ ಸ್ಮ್ಯಾಷ್‌ಗಳು ಸಿಂಧು ಅವರಿಗೆ ನಿರಂತರ ಪಾಯಿಂಟ್‌ಗಳನ್ನು ತಂದುಕೊಟ್ಟವು.

ಸಮೀರ್‌ ಸಾಧನೆ: ಸಮೀರ್‌ ವರ್ಮಾ ಪಂದ್ಯದ ಆರಂಭದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದರು. ನಂತರ ತಿರುಗೇಟು ನೀಡಿ 11–7ರಿಂದ ಮುನ್ನಡೆದರು. ಪ್ರತಿ ದಾಳಿಗೆ ಮುಂದಾದರೂ ಸುಗ್ಯಾರ್ತೊ ಫಲ ಕಾಣಲಿಲ್ಲ. ಹೀಗಾಗಿ ಮೊದಲ ಗೇಮ್‌ ಭಾರತದ ಆಟಗಾರನ ಪಾಲಾಯಿತು.

ಎರಡನೇ ಗೇಮ್‌ನ ಆರಂಭದಲ್ಲೂ ಸುಗ್ಯಾರ್ತೊ ಮುನ್ನಡೆ ಗಳಿಸಿದರು. ಆದರೆ ಸೋಲೊಪ್ಪಿಕೊಳ್ಳಲು ಸಿದ್ಧವಿಲ್ಲದ ಸಮೀರ್‌ ಮನಮೋಹಕ ಆಟವಾಡಿ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT