ಸಿಂಧು, ಕರೊಲಿನಾ ಫೈನಲ್ ಹಣಾಹಣಿ

7
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಅಕಾನೆ ಯಮಗುಚಿ, ಹಿ ಬಿಂಗ್‌ಜಿಯಾವೊಗೆ ಸೆಮಿಯಲ್ಲಿ ಕಹಿ

ಸಿಂಧು, ಕರೊಲಿನಾ ಫೈನಲ್ ಹಣಾಹಣಿ

Published:
Updated:

ಚೀನಾ: ರ‍್ಯಾಂಕಿಂಗ್‌ನಲ್ಲಿ ತಮಗಿಂತ ಮೇಲಿನ ಸ್ಥಾನ ಹೊಂದಿರುವ ಎದುರಾಳಿಗಳನ್ನು ಮಣಿಸಿದ ಭಾರತದ ಪಿ.ವಿ.ಸಿಂಧು ಮತ್ತು ಸ್ಪೇನ್‌ನ ಕರೊಲಿನಾ ಮರಿನ್‌, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದ ಫೈನಲ್ ಪ್ರವೇಶಿಸಿದರು. ಅಂತಿಮ ಹಣಾಹಣಿ ಭಾನುವಾರ ನಡೆಯಲಿದೆ.

ಶನಿವಾರ ಸಂಜೆ ನಡೆದ ಸೆಮಿಫೈನಲ್‌ ಪಂದ್ಯಗಳಲ್ಲಿ ಸಿಂಧು, ಜಪಾನ್‌ನ ಅಕಾನೆ ಯಮಗುಚಿ ಅವರನ್ನು 21–16, 24–22ರಿಂದ ಸೋಲಿಸಿದರೆ, ಕರೊಲಿನಾ ಅವರು ಚೀನಾದ ಹಿ ಬಿಂಗ್‌ಜಿಯಾವೊ ಎದುರು ಗೆದ್ದರು. ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಅಕಾನೆ, ಮೂರನೇ ಸ್ಥಾನದಲ್ಲಿರುವ ಸಿಂಧು ಎದುರು ಮೊದಲ ಗೇಮ್‌ನಲ್ಲಿ ನೀರಸ ಆಟ ಆಡಿದರು. ಎರಡನೇ ಗೇಮ್‌ನ ಆರಂಭದಲ್ಲಿ ಜಪಾನ್ ಆಟಗಾರ್ತಿ ಮುನ್ನಡೆ ಸಾಧಿಸಿದರೂ ಚೇತರಿಸಿಕೊಂಡ ಸಿಂಧು ಕೊನೆಯಲ್ಲಿ ಜಯ ತಮ್ಮದಾಗಿಸಿಕೊಂಡರು.

ಸಿಂಧು 21–20ರಿಂದ ಮುನ್ನಡೆದಿದ್ದ ಸಂದರ್ಭದಲ್ಲಿ ಪುಟಿದೆದ್ದ ಅಕಾನೆ ಪ್ರಬಲ ಪೈಪೋಟಿ ನೀಡಿದರು. ಹೀಗಾಗಿ 21–21, 22–22ರ ಸಮಬಲ ಸಾಧಿಸಲು ಅವರಿಗೆ ಸಾಧ್ಯವಾಯಿತು. ಆದರೂ ಪಟ್ಟುಬಿಡದ ಸಿಂಧು ಗೇಮ್ ಮತ್ತು ಪಂದ್ಯ ಗೆದ್ದರು. 55 ನಿಮಿಷಗಳಲ್ಲಿ ಪೈಪೋಟಿ ಮುಕ್ತಾಯಗೊಂಡಿತು.

ಕರೊಲಿನಾ ಮರಿನ್‌ಗೆ ಜಯ: ಮೊದಲ ಸೆಮಿಫೈನಲ್‌ನ ಆರಂಭದಲ್ಲಿ ಕರೊಲಿನಾಗೆ ಹಿ ಬಿಂಗ್‌ಜಿಯಾವೊ ಉತ್ತಮ ಪೈಪೋಟಿ ನೀಡಿದರು. ಮೊದಲ ಗೇಮ್‌ನಲ್ಲಿ  13–21ರಿಂದ ಹಿನ್ನಡೆ ಅನುಭವಿಸಿದ ಕರೊಲಿನಾ ಉಳಿದೆರಡು ಗೇಮ್‌ಗಳಲ್ಲಿ ಅಮೋಘ ಆಟವಾಡಿ 21–16 ಮತ್ತು 21–13ರಿಂದ ಗೆದ್ದರು. ಮೂರನೇ ಗೇಮ್‌ನಲ್ಲಿ ಸೋಲುವುದು ಖಚಿತವಾಗುತ್ತಿದ್ದಂತೆ ಹಿ ಬಿಂಗ್‌ಜಿಯಾವೊ ಕಣ್ಣೀರು ಹಾಕಿದರು.

ಕೆಂಟೊ ಮೊಮೊಟಾ– ಶೀ ಯೂಕಿ ಫೈನಲ್‌ಗೆ: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಜಪಾನ್‌ನ ಕೆಂಟೊ ಮೊಮೊಟೊ ಮತ್ತು ಚೀನಾದ ಶಿ ಯೂಕಿ ಫೈನಲ್‌ನಲ್ಲಿ ಸೆಣಸಲಿದ್ದಾರೆ. ಸೆಮಿಫೈನಲ್‌ನಲ್ಲಿ ಮೊಮೊಟೊ 21–16, 21–5ರಿಂದ ಮಲೇಷ್ಯಾದ ಡ್ಯಾರೆನ್ ಲ್ಯೂ ಅವರನ್ನು ಮಣಿಸಿದರು. ಶೀ ಯೂಕಿ 21–11, 21–17ರಿಂದ ತಮ್ಮದೇ ದೇಶದ ಚೆನ್ ಲಾಂಗ್ ಅವರನ್ನು ಸೋಲಿಸಿದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !