ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂತಿರುವುದು ಆರಾಮವಲ್ಲ!

Last Updated 17 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಆರೋಗ್ಯವನ್ನು ಕಾಪಾಡಿಕೊಂಡು ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳಬೇಕೆಂಬ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ? ಆದರೆ ಗಂಟೆಗಟ್ಟಲೇ ಕೆಲಸದಲ್ಲಿ ಮುಳುಗಿ ಹೋಗಿರುವವರು ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳುವುದು ಕನಸಾಗಿಯೇ ಉಳಿಯುತ್ತದೆ.

ಸಾಫ್ಟ್‌ವೇರ್ ಉದ್ಯೋಗಿಯಾಗಿರಲಿ, ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳ ನೌಕರರಾಗಿರಲಿ ಪ್ರಸ್ತುತ ವಿವಿಧ ರಂಗಗಳಲ್ಲಿ ಕೆಲಸ ಮಾಡುತ್ತಿರುವ ಬಹುತೇಕರು ಒಂದೆಡೆ ಕುರ್ಚಿ ಮೇಲೆ ಕುಳಿತುಕೊಂಡೇ ಕೆಲಸ ಮಾಡುತ್ತಿದ್ದಾರೆ. ಕುಳಿತುಕೊಂಡರೆ ಆರಾಮವಾಗಿರುತ್ತದೆ ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ ನಡೆಯುವುದನ್ನೇ ಮರೆತು, ಹೆಚ್ಚು ಹೊತ್ತು ಕುಳಿತುಕೊಂಡೇ ಇದ್ದರೆ, ನಿಮ್ಮ ಆರೋಗ್ಯವನ್ನು ನೀವೇ ಕೆಡಿಸಿಕೊಳ್ಳುತ್ತಿದ್ದೀರಿ ಎಂಬುದರಲ್ಲಿ ಸಂಶಯ ಬೇಡ!

ಹೆಚ್ಚು ಹೊತ್ತು ಕುಳಿತಿರುವುದರಿಂದ ದೇಹದ ಬಹುತೇಕ ಅಂಗಾಂಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಕೆಲವು ಸಂಶೋಧನೆಗಳು ಬಹಿರಂಗ ಪಡಿಸಿವೆ. ಹೃದಯ ಸಂಬಂಧಿತ ರೋಗಗಳು, ವಿವಿಧ ಬಗೆಯ ಕ್ಯಾನ್ಸರ್‌ಗಳು, ಮಾಂಸಖಂಡಗಳಲ್ಲಿ ಸೆಳೆತ, ಕೈ–ಕಾಲುಗಳ ನೋವು, ಬೆನ್ನು ನೋವು, ಕತ್ತು ನೋವು, ಸೊಂಟ ನೋವು ಹೀಗೆ ಹಲವು ಸಮಸ್ಯೆಗಳು ಕಾಡುತ್ತವೆ.

ಕುಳಿತುಕೊಂಡು ಕೆಲಸ ಮಾಡುವುದು ಅನಿವಾರ್ಯತೆ ಹಲವರಿಗೆ ಇರುತ್ತದೆ. ಇಂತಹವರು ಸುಲಭವಾದ ಕೆಲವು ವ್ಯಾಯಾಮಗಳನ್ನು ಮಾಡುತ್ತಾ ಆರೋಗ್ಯ ಕಾಪಾಡಿಕೊಳ್ಳಬಹುದು. ಅಂತಹ ಸುಲಭವಾದ ಮತ್ತು ತಜ್ಞರು ಸೂಚಿಸಿರುವ ಕೆಲವು ವ್ಯಾಯಾಮಗಳು ಇಲ್ಲಿವೆ.

ನಡೆಯುವ ಹವ್ಯಾಸವಿರಲಿ: ಮುಂಜಾನೆ ಮತ್ತು ಸಂಜೆ ಕನಿಷ್ಠ 15 ನಿಮಿಷವಾದರೂ ವಾಯು ವಿಹಾರ ಮಾಡಬೇಕು. ಇದರಿಂದ ದಿನವೆಲ್ಲಾ ಉಲ್ಲಾಸವಾಗಿಯೂ ಇರುತ್ತದೆ. ಕಚೇರಿಯಲ್ಲಿ ಕುಳಿತಿದ್ದಾಗ ಆಗಾಗ್ಗೆ ಎದ್ದು ಒಂದೆರಡು ನಿಮಿಷ ಸುತ್ತಾಡಿ.

ಚೆಂಡಿನ ಮೇಲೆ ಕುಳಿತುಕೊಳ್ಳಿ: ಫಿಟ್‌ನೆಸ್ ಪ್ರಿಯರಿಗಾಗಿಯೇ ತಯಾರಿಸಲಾಗಿರುವ ದೊಡ್ಡ ಗಾತ್ರದ ವಿಶೇಷ ಚೆಂಡುಗಳನ್ನು ಜಿಮ್‌ಗಳಲ್ಲಿ ಬಳಸುವುದು ನೋಡಿರುತ್ತೀರಿ ಇಂತಹ ಚೆಂಡು ಬಳಸಬಹುದು. ಬೆನ್ನಿಗೆ ರಕ್ಷಣೆ ಇಲ್ಲದಂತಹ ಕುರ್ಚಿಗಳ ಮೇಲೆ ಬೆನ್ನು ನೇರವಾಗಿ ಮಾಡಿ, ಪಾದಗಳನ್ನು ನೆಲಕ್ಕೆ ತಾಕಿಸಿ, ಮೊಣ ಕೈಗಳನ್ನು ಸೊಂಟದ ಬಳಿ ಇಟ್ಟು ಹಸ್ತಗಳನ್ನು ಚಾಚಿ ಸ್ವಲ್ಪ ಹೊತ್ತು ಕುಳಿತು ನಿಧಾನವಾಗಿ ಉಸಿರಾಡಿ. ನಿತ್ಯ ಕುಳಿತುಕೊಂಡು ಕೆಲಸ ಮಾಡುವವರ ಆರೋಗ್ಯ ಕಾಪಾಡಲು ಈ ವ್ಯಾಯಮ ನೆರವಾಗಬಲ್ಲದು.

ಕಾಲುಗಳಿಗೆ ವ್ಯಾಯಾಮ: ಮೊದಲಿಗೆ ಬಲ ಮೊಣಕಾಲನ್ನು ನೆಲಕ್ಕೆ ಊರಿ. ಎಡಗಾಲಿನ ಪಾದವನ್ನು ನೆಲಕ್ಕೆ ತಾಕಿಸಿ ನೇರವಾಗಿಟ್ಟು ಕನಿಷ್ಠ ಮೂರು ನಿಮಿಷ, ಕುಳಿತಿರಿ, ನಂತರ ಎಡ ಮೊಣಕಾಲನ್ನು ನೆಲಕ್ಕ ಊರಿ ಬಲಗಾಲನ್ನು ನೇರವಾಗಿ ಮೂರು ನಿಮಿಷ ಇಟ್ಟಿರಿ. ಈ ರೀತಿ ಮಾಡುವುದರಿಂದ ಕಾಲು ನೋವನ್ನು ಕಡಿಮೆ ಮಾಡಬಹುದು.

ಯೋಗಾಸನ ಒಳ್ಳೆಯದು: ಜಿಮ್‌ನಲ್ಲಿ ಬೆವರು ಹರಿಸಲು ಇಷ್ಟಪಡದವರು, ಸುಲಭವಾದ ಯೋಗಾಸನಗಳನ್ನು ಮಾಡುವುದರಿಂದಲೂ ಆರೋಗ್ಯ ಕಾಪಾಡಿಕೊಳ್ಳಬಹುದು. ಮುಖ್ಯವಾಗಿ ಮಾರ್ಜಾಲಾಸನದಂತಹ ಆಸನಗಳನ್ನು ಅಭ್ಯಸಿಸುವದರಿಂದ ಹೆಚ್ಚು ಕುಳಿತಿರುವವರು ಆರೋಗ್ಯ ಕಾಪಾಡಿಕೊಳ್ಳಬಹುದು.

ಕೂರುವ ಭಂಗಿ ಸರಿ ಇರಲಿ: ಕಚೇರಿಗಳಲ್ಲಿ ಕುರ್ಚಿಗಳ ಮೇಲೆ ಕೂರುವಾಗ ಸರಿಯಾದ ಭಂಗಿಯಲ್ಲಿ ಕೂರಬೇಕು. ಸದಾ ಬೆನ್ನು ನೇರ ಮಾಡಿ ಕುಳಿತುಕೊಂಡರೆ ಒಳ್ಳೆಯದು. ಮೊಣಕೈಗಳು ನೇರವಾಗಿರಬೇಕು. ಕಂಪ್ಯೂಟರ್ ಪರದೆಯನ್ನು ನೋಡುವಾಗ ಕಣ್ಣುಗಳಿಗೆ ಹಾನಿಯಾಗದಂತಹ ಭಂಗಿಯಲ್ಲಿ ಕುಳಿತುಕೊಳ್ಳಬೇಕು. ಸೊಂಟ, ಮೊಣಕಾಳು ಮತ್ತು ಪಾದಗಳು ಲಂಬ ಕೋನದಲ್ಲಿ ಇರುವಂತಹ ಭಂಗಿಯಲ್ಲಿ ಕೂರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT