ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರ್ಯಾಕ್ ಮೇಲೆ ‘ಸ್ನೇಹ’ ಪದಕ ಗೆಲ್ಲುವ ದಾಹ

Last Updated 20 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ನೆಟ್‌ಬಾಲ್‌ ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಮಟ್ಟಕ್ಕೇರಿದ್ದ ಸ್ನೇಹಾ ಫೀಲ್ಡ್‌ನಲ್ಲಿ ಲಾಂಗ್‌ಜಂಪ್‌, ಹೈಜಂಪ್‌ ಸಾಧಕಿಯಾಗಿ ಗಮನ ಸೆಳೆದಿದ್ದರು. ಇದೀಗ ಓಟದ ಟ್ರ್ಯಾಕ್‌ಗೆ ಇಳಿದು ಮೂರೇ ವರ್ಷಗಳಲ್ಲಿ ರಾಷ್ಟ್ರೀಯ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಒಲಿಂಪಿಕ್ಸ್ ಅರ್ಹತೆಗಾಗಿ ನಡೆಯುವ ತರಬೇತಿ ಶಿಬಿರಕ್ಕೆ ತೆರಳಿದ್ದಾರೆ.

ಕೆಲವು ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆಯುತ್ತಿದ್ದ ಕ್ರೀಡಾಕೂಟಗಳಲ್ಲಿ ಹೈಜಂಪ್ ಮತ್ತು ಲಾಂಗ್ ಜಂಪ್‌ನಲ್ಲಿ ತಪ್ಪದೇ ಕಾಣಿಸಿಕೊಳ್ಳುತ್ತಿದ್ದ ಹೆಸರು ಸ್ನೇಹಾ ಪಿ.ಜೆ. ಬೆಂಗಳೂರಿನ ಹಂಪಿ ನಗರ ನಿವಾಸಿಯಾದ ಅವರು ಈ ಎರಡು ವಿಭಾಗಗಳಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ ಕೂಟದ ವರೆಗೂ ಸಾಧನೆ ವಿಸ್ತರಿಸಿದ ಪ್ರತಿಭೆ. ಆದರೆ ಈಗ ಮೂರು ವರ್ಷಗಳಿಂದ ಅವರು ‘ಟ್ರ್ಯಾಕ್‌’ ಬದಲಿಸಿದ್ದಾರೆ. ಜಂಪಿಂಗ್‌ನಿಂದ ಏಕಾಏಕಿ ಓಟದ ಕಡೆಗೆ ವಾಲಿದ ಅವರು ಟ್ರ್ಯಾಕ್‌ನಲ್ಲೂ ಮಿಂಚಿದರು. ಮೂರೇ ವರ್ಷಗಳಲ್ಲಿ ದಾಖಲೆ ಮುರಿಯುವಂಥ ಸಾಮರ್ಥ್ಯ ತೋರಿದ ಪರಿಣಾಮ ಈಗ ಒಲಿಂಪಿಕ್ಸ್‌ಗಾಗಿ ನಡೆಯಲಿರುವ ಭಾರತ ತಂಡದ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.

24ನೇ ವಯಸ್ಸಿನಲ್ಲಿ ಟ್ರ್ಯಾಕ್‌ಗೆ ಕಾಲಿಟ್ಟ ಸ್ನೇಹಾ ಐದೇ ತಿಂಗಳಲ್ಲಿ ರಾಜ್ಯದ ಪ್ರಮುಖ ಓಟಗಾರರ ಜೊತೆ ಸ್ಪರ್ಧಿಸಿ ಅಗ್ರ ಹತ್ತರಲ್ಲಿ ಸ್ಥಾನ ಗಳಿಸಿದರು. ಒಂದು ವರ್ಷದ ಒಳಗೆ 100 ಮೀಟರ್ಸ್ ಓಟದಲ್ಲಿ ರಾಜ್ಯದ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡರು. 200 ಮೀಟರ್ಸ್‌ನಲ್ಲೂ ಪದಕ ಗಳಿಸಿದರು.

ಪಾಠದ ಭಾರ ತಪ್ಪಿಸಿಕೊಳ್ಳುವ ಯತ್ನದಲ್ಲಿ...

ಜಯಶೀಲ ಮತ್ತು ರೇವತಿ ದಂಪತಿಯ ಪುತ್ರಿ ಸ್ನೇಹಾ, ಹಂಪಿನಗರದ ನ್ಯೂ ಕೇಂಬ್ರಿಜ್ ಶಾಲೆಯಲ್ಲಿ ಕಲಿಯುತ್ತಿದ್ದಾಗ ಪಾಠದ ಭಾರವನ್ನು ಇಳಿಸಿಕೊಳ್ಳುವುದಕ್ಕಾಗಿ ಕ್ರೀಡಾಂಗಣದ ಕಡೆಗೆ ಮುಖ ಮಾಡಿದವರು.
‘ಕ್ರೀಡೆಯ ಬಗ್ಗೆ ಹೆಚ್ಚೇನೂ ಗೊತ್ತಿರಲಿಲ್ಲ. ಶಾಲೆಯಲ್ಲಿ ಹಾಗೇ ಸುಮ್ಮನೆ ಆಡಲು ಶುರು ಮಾಡಿದೆ. ಹೈಜಂಪ್ ಮತ್ತು ಲಾಂಗ್‌ ಜಂಪ್ ಮಾಡಲು ಹೇಳಿದರು; ಮಾಡಿದೆ. ಶಾಲಾ ಕ್ರೀಡಾಕೂಟದಲ್ಲಿ ಮೊದಲಿಗಳಾದೆ. ಜಿಲ್ಲೆ, ವಿಭಾಗ ಮಟ್ಟಕ್ಕೆ ಆಯ್ಕೆಯಾದೆ. ಎಸ್‌ಎಸ್ಎಲ್‌ಸಿ ತಲುಪುವಷ್ಟರಲ್ಲಿ ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕಾಯಿತು. ಹೀಗಾಗಿ ಕ್ರೀಡಾಂಗಣದಿಂದ ದೂರ ಆದೆ. ನಂತರ ನಡೆದದ್ದೆಲ್ಲವೂ ಕಲ್ಪನಾತೀತ...’ ಎಂದರು ಸ್ನೇಹಾ.

ದ್ವಿತೀಯ ಪಿಯುಸಿ ಓದುತ್ತಿದ್ದಾಗ ಸ್ನೇಹಾ ಮನಸ್ಸು ಕ್ರಿಕೆಟ್ ನತ್ತ ಒಲಿಯಿತು. ನಂತರ ಫೀಲ್ಡ್‌ಗೆ ‘ಜಿಗಿದ’ ಅವರು ಡಾನ್ ಬಾಸ್ಕೊ ತಾಂತ್ರಿಕ ಸಂಸ್ಥೆಯಲ್ಲಿ ಓದುತ್ತಿದ್ದಾಗ ವಿಶ್ವವಿದ್ಯಾಲಯ ಮಟ್ಟದಲ್ಲಿ ಪದಕ ಗೆದ್ದರು. ಕೊನೆಗೆ ಅದೃಷ್ಟ ಒಲಿದದ್ದು ನೆಟ್‌ಬಾಲ್ ಅಂಗಣದಲ್ಲಿ. ಗೋಲ್ ಡಿಫೆಂಡರ್ ಆಗಿ ಭಾರತ ತಂಡದ ಉತ್ತಮ ‘ರಕ್ಷಕಿ’ ಎಂದು ಹೆಸರು ಮಾಡಿದರು. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ತಂಡ ಆರನೇ ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತರರಾಷ್ಟ್ರೀಯ ಕೂಟದಲ್ಲಿ ಪಾಲ್ಗೊಂಡದ್ದು ಮತ್ತು ವಿಜ್ಞಾನ ವಿಷಯವನ್ನು ಓದಿದ್ದು ಅರಣ್ಯ ಇಲಾಖೆಯಲ್ಲಿ ಉಪ ವಲಯಾಧಿಕಾರಿ ಹುದ್ದೆ ಗಳಿಸಲು ನೆರವಾಯಿತು.

ಬದಲಾದ ಕ್ರೀಡಾ ಬದುಕು

ಉದ್ಯೋಗದ ಜೊತೆಯಲ್ಲೇ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನ ಅಥ್ಲಾನ್ ಫ್ಲೀಟ್ ಒಲಿಂಪಸ್ ಅಕಾಡೆಮಿಯ ಕೋಚ್ ಯತೀಶ್ ಕುಮಾರ್ ಎಂ.ಬಿ. ಅವರ ಕಣ್ಣಿಗೆ ಬಿದ್ದ ಸ್ನೇಹಾ ಅವರ ಕ್ರೀಡಾ ಬದುಕಿನ ಹಾದಿಯೇ ಬದಲಾಯಿತು.

2016ರಲ್ಲಿ ಯತೀಶ್ ಬಳಿ ತರಬೇತಿಗೆ ಸೇರಿದಾಗ ಸ್ನೇಹಾ ವಯಸ್ಸು 24. ಏಪ್ರಿಲ್‌ನಲ್ಲಿ ತರಬೇತಿ ಆರಂಭಗೊಂಡಿತು. ಸೆಪ್ಟೆಂಬರ್‌ನಲ್ಲಿ ನಡೆದ ರಾಜ್ಯ ಅಥ್ಲೆಟಿಕ್ ಕೂಟದಲ್ಲಿ 100 ಮತ್ತು 200 ಮೀಟರ್ಸ್ ಓಟದಲ್ಲಿ 5ನೇ ಸ್ಥಾನ ಗಳಿಸಿದರು. ಮುಂದಿನ ವರ್ಷ ಧಾರವಾಡದಲ್ಲಿ ನಡೆದ ರಾಜ್ಯ ಒಲಿಂಪಿಕ್ಸ್‌ನಲ್ಲಿ ಟ್ರ್ಯಾಕ್ ವಿಭಾಗದಲ್ಲಿ ಮೊದಲ ಪದಕ ಗಳಿಸಿ ಸಂಭ್ರಮಿಸಿದರು. 200 ಮೀಟರ್ಸ್ ಓಟದಲ್ಲಿ ಬೆಳ್ಳಿ ಮತ್ತು 100 ಮೀಟರ್ಸ್ ಓಟದಲ್ಲಿ ಕಂಚಿನ ಪದಕ ಅವರ ಕೊರಳಿಗೇರಿತು.

ಕಳೆದ ವರ್ಷ ದಕ್ಷಿಣ ಕನ್ನಡದ ಆಳ್ವಾಸ್ ಕಾಲೇಜಿನಲ್ಲಿ ನಡೆದ ರಾಜ್ಯ ಒಲಿಂಪಿಕ್ಸ್‌ನ 100 ಮೀಟರ್ಸ್ ಓಟದಲ್ಲಿ ದಾಖಲೆ ಬರೆದು ರಾಜ್ಯದ ಹೊಸ ಸ್ಪ್ರಿಂಟ್ ರಾಣಿ ಎನಿಸಿಕೊಂಡರು. ಎಚ್.ಎಂ.ಜ್ಯೋತಿ (11.30 ಸೆಕೆಂಡು) ಮೂರು ವರ್ಷಗಳ ಹಿಂದೆ ನಿರ್ಮಿಸಿದ್ದ ದಾಖಲೆಯನ್ನು 14 ಮೈಕ್ರೊಸೆಕೆಂಡುಗಳ ಅಂತರದಲ್ಲಿ ಹಿಂದಿಕ್ಕಿದರು. ಬೆಂಗಳೂರಿನಲ್ಲಿ ನಡೆದ ಅರಣ್ಯ ಇಲಾಖೆಯ ಕ್ರೀಡಾಕೂಟದಲ್ಲೂ ಪದಕಗಳು ಬಂದವು. ಈ ಸಾಧನೆಗಳನ್ನು ಗಮನಿಸಿದ ಭಾರತ ಅಥ್ಲೆಟಿಕ್ಸ್ ಫೆಡರೇಷನ್‌ನ ಹೈ ಪರ್ಫಾರ್ಮೆನ್ಸ್ ಡೈರೆಕ್ಟರ್, ಜರ್ಮನಿಯ ವಾಕರ್ ಹರ್ಮನ್ ಅವರು ಒಲಿಂಪಿಕ್ಸ್ ಆಯ್ಕೆ ತರಬೇತಿ ಶಿಬಿರಕ್ಕೆ ಕರೆಸಿಕೊಂಡರು.

ಸಾಮರ್ಥ್ಯ ಪರೀಕ್ಷೆಗೆ ಹೊರಟ ಕೋಚ್‌ಗೆ ಲಭಿಸಿದ ‘ಚಿನ್ನ’

ಮಧ್ಯಮ ದೂರ ಓಟಗಾರನಾಗಿದ್ದ ಯತೀಶ್‌ ಗಾಯದ ಸಮಸ್ಯೆಗಳಿಂದಾಗಿ ಪದೇ ಪದೇ ಅಂಗಣದಿಂದ ದೂರ ಉಳಿಯಬೇಕಾಗಿತ್ತು. ಹೀಗಾಗಿ ಆಸ್ಟ್ರೇಲಿಯಾಗೆ ತೆರಳಿ ಕೋಚಿಂಗ್‌ ತರಬೇತಿ ಪಡೆದರು. ಜೊತೆಯಲ್ಲಿ ಗಾಯದ ಸಮಸ್ಯೆಗಳಿಗೆ ‘ಮದ್ದು’ ಅರೆಯುವ ಕೋರ್ಸ್‌ಗಳನ್ನೂ ಪೂರೈಸಿದರು. ಬೆಂಗಳೂರಿಗೆ ವಾಪಸಾದ ನಂತರ ಕಲಿತ ವಿದ್ಯೆಯನ್ನು ಪ್ರಯೋಗ ಮಾಡಲು ಅವಕಾಶ ಹುಡುಕುತ್ತಿದ್ದರು. ಈ ಸಂದರ್ಭದಲ್ಲಿ ದೊರಕಿದವರು ಸ್ನೇಹಾ.

ಲಾಂಗ್ ಜಂಪ್ ಮತ್ತು ನೆಟ್ ಬಾಲ್ ಆಟಗಾರ್ತಿಯಾಗಿದ್ದ ಅವರನ್ನು ಹುರಿದುಂಬಿಸಿ ಓಟಕ್ಕೆ ಸಿದ್ಧಗೊಳಿಸಿದರು. ಇದರಿಂದ ಅವರಿಗೆ ಚಿನ್ನ ಗಳಿಸುವ ಓಟಗಾರ್ತಿ ಲಭಿಸಿದರು. ರಾಜ್ಯಕ್ಕೆ ಉತ್ತಮ ಕ್ರೀಡಾಪಟು ಸಿಕ್ಕಿದರು. ಇದೀಗ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಹಾದಿಯಲ್ಲಿರುವ ಅವರು ದೇಶಕ್ಕೆ ಹೆಮ್ಮೆ ತರುವ ಗುರಿ ಹೊಂದಿದ್ದಾರೆ.

‘ಸ್ನೇಹಾ ಅವರಲ್ಲಿ ಇನ್ನೂ 5 ವರ್ಷ ಓಡುವ ಶಕ್ತಿ ಇದೆ. ಆದ್ದರಿಂದ ಟೋಕಿಯೊ ಒಲಿಂಪಿಕ್ಸ್ ಮಾತ್ರವಲ್ಲ, ನಂತರದ ಒಲಿಂಪಿಕ್ಸ್‌ ವರೆಗೂ ಆಯ್ಕೆಗೆ ಲಭ್ಯ ಇರುವ ಭರವಸೆ ಇದೆ’ ಎನ್ನುತ್ತಾರೆ ಯತೀಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT