ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನ್‌ ವ್ಯಾನ್‌, ಒಕುಹರಗೆ ಚಾಂಪಿಯನ್ ಪಟ್ಟ

ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್‌: ಕೆಂಟ ನಿಶಿಮೊಟೊ, ರಚನಕ್‌ಗೆ ನಿರಾಸೆ
Last Updated 18 ನವೆಂಬರ್ 2018, 20:35 IST
ಅಕ್ಷರ ಗಾತ್ರ

ಹಾಂಕಾಂಗ್‌: ಕೊರಿಯಾದ ಸೋನ್‌ ವ್ಯಾನ್‌ ಹೊ ಮತ್ತು ಜಪಾನ್‌ನ ನೊಜೊಮಿ ಒಕುಹರ ಭಾನುವಾರ ಮುಕ್ತಾಯಗೊಂಡ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದರು.

ಎರಡು ವರ್ಷಗಳಿಂದ ಪ್ರಶಸ್ತಿಯ ಬರ ಅನುಭವಿಸಿದ್ದ ಸೋನ್‌ ವ್ಯಾನ್‌ ಇಲ್ಲಿ ಆರಂಭದಿಂದಲೇ ಅಮೋಘ ಆಟವಾಡಿದ್ದರು. ಆರನೇ ಶ್ರೇಯಾಂಕಿತರಾಗಿದ್ದ ಅವರು ಸೆಮಿಫೈನಲ್‌ನಲ್ಲಿ ಜಪಾನ್‌ ಕೆಂಟೊ ಮೊಮೊಟೊ ಅವರನ್ನು ಮಣಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

ಫೈನಲ್‌ನ ಮೊದಲ ಗೇಮ್‌ನ ಆರಂಭದಲ್ಲೇ ಸತತ 12 ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟರು. ಹೀಗಾಗಿ 14–21ರಿಂದ ಸೋಲನುಭವಿಸಿದರು. ಆದರೆ ಎರಡನೇ ಗೇಮ್‌ನಲ್ಲಿ 21–17ರಿಂದ ಗೆದ್ದು ತಿರುಗೇಟು ನೀಡಿದ ಅವರು 21–13ರಿಂದ ನಿರ್ಣಾಯಕ ಗೇಮ್‌ ಗೆದ್ದು ಸಂಭ್ರಮಿಸಿದರು.

ನಿಶಿಮೊಟೊ ವಿರುದ್ಧ ಸೋನ್‌ ಈ ವರ್ಷ ಒಟ್ಟು ಏಳು ಪಂದ್ಯಗಳನ್ನು ಆಡಿದ್ದು ಇದು ಐದನೇ ಜಯವಾಗಿದೆ.

‘ಎರಡನೇ ಗೇಮ್‌ನಲ್ಲಿ ಎದುರಾಳಿಗೆ ತುಂಬ ಸುಸ್ತಾಗಿರುವುದು ಗೊತ್ತಾಯಿತು. ಇದರ ಲಾಭ ಪಡೆದ ನಾನು ಆಕ್ರಮಣಕಾರಿ ಆಟಕ್ಕೆ ಮುಂದಾದೆ. ಇದಕ್ಕೆ ಫಲ ಸಿಕ್ಕಿತು’ ಎಂದು ಸೋನ್ ಹೇಳಿದರು.

ರಚನಕ್‌ಗೆ ನಿರಾಸೆ: ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ತಾಯ್ಲೆಂಡ್‌ನ ರಚನಕ್ ಇಂಟನನ್ ಅವರನ್ನು ಒಕುಹರ 21–19, 24–22ರಿಂದ ಮಣಿಸಿದರು. 64 ನಿಮಿಷ ನಡೆದ ಪಂದ್ಯದಲ್ಲಿ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿಯ ಹೋರಾಟದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಕೊನೆಗೆ ಗೆಲುವು ಒಕುಹರಗೆ ಒಲಿಯಿತು.

‘ಈ ಜಯ ನನ್ನಲ್ಲಿ ಹೊಸ ಹುರುಪು ತುಂಬಿದ್ದು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಧನೆ ಮಾಡುವ ಭರವಸೆ ಮೂಡಿಸಿದೆ’ ಎಂದು ಒಕುಹರ ಹೇಳಿದರು.

ಯೂಕಿ–ಸಯಾಕ ಜೋಡಿಗೆ ಪ್ರಶಸ್ತಿ
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಯೂಕಿ ಫುಕುಶಿಮಾ ಮತ್ತು ಸಯಾಕ ಹಿರೋಟ ಜೋಡಿ ದಕ್ಷಿಣ ಕೊರಿಯಾದ ಲೀ ಸೋ ಹೀ ಮತ್ತು ಶಿನ್‌ ಸೆಂಗ್‌ ಚಾನ್‌ ಅವರನ್ನು ಮಣಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಜಪಾನ್‌ ಆಟಗಾರ್ತಿಯರು 21–18, 21–17ರಿಂದ ಗೆದ್ದರು.

ಮೊದಲ ಗೇಮ್‌ನಲ್ಲಿ ಹೋರಾಡಿ ಸೋತ ಲೀ ಮತ್ತು ಶಿನ್ ಜೋಡಿ ಎರಡನೇ ಗೇಮ್‌ನ ಪ್ರತಿ ಹಂತದಲ್ಲೂ ಏಟಿಗೆ ತಿರುಗೇಟು ನೀಡಿದರು. 14–15ರ ಹಿನ್ನಡೆ ಅನುಭವಿಸಿದ್ದ ಸಂದರ್ಭದಲ್ಲಿ ಸುದೀರ್ಘ ರ‍್ಯಾಲಿಯ ನಂತರ ಪಾಯಿಂಟ್ ಗೆದ್ದು 15–15ರ ಸಮಬಲ ಸಾಧಿಸಿದರು. ಆದರೆ ಸೋಲೊಪ್ಪಿಕೊಳ್ಳದ ಯೂಕಿ–ಸಯಾಕ ಜೋಡಿ ಛಲದಿಂದ ಕಾದಾಡಿ ಪ್ರಶಸ್ತಿ ಗೆದ್ದರು.

ಮಿಶ್ರ ಡಬಲ್ಸ್‌ನಲ್ಲಿ ಚೀನಾದ ಯೂಟ ವಾಟನಬೆ ಮತ್ತು ಅರಿಸಾ ಹಿಗಶಿನೊ ಪ್ರಶಸ್ತಿ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT