ಬುಧವಾರ, ಜನವರಿ 22, 2020
24 °C

ದಕ್ಷಿಣ ಏಷ್ಯಾ ಕ್ರೀಡಾಕೂಟ| ಭಾರತದ ಪ್ರಾಬಲ್ಯ: ಬೆಂಗಳೂರಿನ ನವೀನ್‌ಗೆ ಚಿನ್ನ

ಪಿಟಿಐ Updated:

ಅಕ್ಷರ ಗಾತ್ರ : | |

‌ಕಠ್ಮಂಡು: ಬ್ಯಾಡ್ಮಿಂಟನ್‌, ಟೇಬಲ್‌ ಟೆನಿಸ್‌ನಲ್ಲಿ ಬಹುತೇಕ ಪದಕಗಳನ್ನು ಕಬಳಿಸಿದ ಭಾರತದ ಕ್ರೀಡಾಪಟುಗಳು 13ನೇ ದಕ್ಷಿಣ ಏಷ್ಯಾ ಕ್ರೀಡೆಗಳಲ್ಲಿ ಐದನೇ ದಿನವೂ ಪ್ರಾಬಲ್ಯ ಮೆರೆದಿದ್ದಾರೆ. ಶುಕ್ರವಾರ 19 ಚಿನ್ನದ ಪದಕಗಳನ್ನು ಒಳಗೊಂಡಂತೆ ಒಟ್ಟು 41 ಪದಕಗಳನ್ನು ಭಾರತದ ಪಾಲಾದವು.

ಬೆಂಗಳೂರಿನ ನವೀನ್‌ ಜಾನ್‌, ಸೈಕ್ಲಿಂಗ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಪುರುಷರ ಟೈಮ್‌ ಟ್ರಯಲ್ಸ್‌ ಸ್ಪರ್ಧೆಯಲ್ಲಿ ನವೀನ್‌ 49 ನಿಮಿಷ 22.250 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಇತ್ತೀಚಿಗೆ ಬಿಕಾನೇರ್‌ನಲ್ಲಿ ನಡೆದಿದ್ದ 24ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‍ಷಿಪ್‌ನಲ್ಲಿ ಅವರು ಟೈಮ್ ಟ್ರಯಲ್ಸ್‌ನಲ್ಲಿಯೇ ಚಿನ್ನ ಗೆದ್ದಿದ್ದರು.

ಭಾರತ ಒಟ್ಟು 165 ಪದಕಗಳೊಂದಿಗೆ ಪದಕಪಟ್ಟಿಯಲ್ಲಿ (81 ಚಿನ್ನ, 59 ಬೆಳ್ಳಿ, 25 ಕಂಚು) ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಐದನೇ ದಿನ 18 ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನೂ ಗೆದ್ದುಕೊಂಡಿತು. ನೇಪಾಳ 41 ಚಿನ್ನ, 27 ಬೆಳ್ಳಿ, 48 ಕಂಚಿನ ಪದಕಗಳೊಂದಿಗೆ (ಒಟ್ಟು 116 ಪದಕ) ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ 134 ಪದಕಗಳೊಂದಿಗೆ (23–42–69) ಮೂರನೇ ಸ್ಥಾನದಲ್ಲಿದೆ.

ಬ್ಯಾಡ್ಮಿಂಟನ್‌ನಲ್ಲಿ ಗರಿಷ್ಠ ನಾಲ್ಕು ಚಿನ್ನ, ಎರಡು ಬೆಳ್ಳಿ ಭಾರತದ ಷಟ್ಲರ್‌ಗಳ ಪಾಲಾದವು. ಸಿರಿಲ್‌ ವರ್ಮಾ ಪುರುಷರ ಸಿಂಗಲ್ಸ್‌, ಅಸ್ಮಿತಾ ಚಲಿಹಾ ಮಹಿಳೆಯರ ಸಿಂಗಲ್ಸ್‌ನಲ್ಲಿ ವಿಜೇತರಾದರು. ಸಿರಿಲ್‌ ಫೈನಲ್‌ನಲ್ಲಿ ಸ್ವದೇಶದ ಆರ್ಯಮನ್‌ ಟಂಡನ್‌ ವಿರುದ್ಧ 17–21, 23–21, 21–13ರಲ್ಲಿ ವಿಜೇತರಾದರು.

ಅಸ್ಮಿತಾ 21–18, 25–23 ರಿಂದ ಸ್ವದೇಶದ ಗಾಯತ್ರಿ ಗೋಪಿಚಂದ್‌ ಅವರನ್ನು ಸೋಲಿಸಿದರು. ಧ್ರುವ್‌, ಪುರುಷರ ಮತ್ತು ಮಿಕ್ಸಡ್‌ ಡಬಲ್ಸ್‌ನಲ್ಲಿ ವಿಜೇತರಾಗಿ ಎರಡು ಚಿನ್ನ ಕೊರಳಿಗೇರಿಸಿಕೊಂಡರು. 

ಅಥ್ಲೆಟಿಕ್ಸ್‌: ಭಾರತ ಅಥ್ಲೆಟಿಕ್ಸ್‌ನಲ್ಲಿ 12 ಪದಕಗಳನ್ನು ಗೆದ್ದುಕೊಂಡಿದ್ದು, ಇದರಲ್ಲಿ ಎರಡು ಚಿನ್ನದ ಪದಕಗಳಿದ್ದವು. ಷಾಟ್‌ಪಟ್‌ನಲ್ಲಿ ತೇಜಿಂದರ್‌ ಪಾಲ್‌ ತೂರ್‌ 20.03 ಮೀ. ಚಿನ್ನ ಗೆದ್ದರು. ಇದು ಕೂಟ ದಾಖಲೆಯಾಯಿತು. ಹಳೆ ಯ ದಾಖಲೆ ಬಹಾದೂರ್‌ ಸಿಂಗ್‌ ಸಾಗೂ (1999ರಲ್ಲಿ 19.15 ಮೀ.) ಹೆಸರಿನಲ್ಲಿತ್ತು. ಅಭಾ ಖತುವಾ, ಇದೇ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಚಿನ್ನ ಗೆದ್ದರು. 

ಫೆನ್ಸಿಂಗ್‌ ಸ್ಪರ್ಧೆಯಲ್ಲಿ ಮೂರು ಚಿನ್ನ, ಮೂರು ಬೆಳ್ಳಿಯ ಪದಕಗಳು ಭಾರತೀಯ ಸ್ಪರ್ಧಿಗಳ ಪಾಲಾದವು. ವೇಟ್‌ಲಿಫ್ಟಿಂಗ್‌ನಲ್ಲೂ ಸ್ಫೂರ್ತಿಯುತ ಪ್ರದರ್ಶನ ನೀಡಿದ್ದು, ಮೂರು ಚಿನ್ನ, ಒಂದು ಬೆಳ್ಳಿ ಗೆದ್ದುಕೊಂಡರು.

ಟಿ.ಟಿ– ಅಮಲ್‌ರಾಜ್‌ಗೆ ಪ್ರಶಸ್ತಿ: ಟೇಬಲ್‌ ಟೆನಿಸ್‌ನಲ್ಲಿ ಭಾರತ ಒಟ್ಟು ಏಳು ಚಿನ್ನ ಮತ್ತು ಐದು ಬೆಳ್ಳಿಯ ಪದಕಗಳನ್ನು ಗೆದ್ದುಕೊಂಡ ಸಿಂಹಪಾಲನ್ನು ಪಡೆಯಿತು.

ಅಂಥೋನಿ ಅಮಲ್‌ರಾಜ್‌ ಟೇಬಲ್‌ ಟೆನಿಸ್‌ ಸಿಂಗಲ್ಸ್‌ ಫೈನಲ್‌ನಲ್ಲಿ ಸ್ವದೇಶದ ಹರ್ಮೀತ್ ದೇಸಾಯಿ ಅವರನ್ನು ಸೋಲಿಸಿ ಟೇಬಲ್‌ ಟೆನಿಸ್‌ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು. ಒಂದು ಹಂತದಲ್ಲಿ 0–3 ಸೆಟ್‌ಗಳಿಂದ ಹಿಂದೆಬಿದ್ದಿದ್ದ  ಅಮಲ್‌ರಾಜ್‌ ಅಂತಿಮ ವಾಗಿ 6–11, 9–11, 10–12, 11–7, 11–4, 11–9, 11– 7 ರಿಂದ ಜಯಗಳಿಸಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಸುತೀರ್ಥ ಮುಖರ್ಜಿ ಕೂಡ ಹಿನ್ನಡೆ ಯಿಂದ ಚೇತರಿಸಿಕೊಂಡು 8–11, 11–8, 6–11, 11–4, 13–11, 11–8 ರಲ್ಲಿ ಅಹಿಕಾ ಮುಖರ್ಜಿ ಮೇಲೆ ಜಯಗಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು