ಶುಕ್ರವಾರ, ನವೆಂಬರ್ 22, 2019
22 °C
ದಕ್ಷಿಣ ವಲಯ ಜೂನಿಯರ್‌ ಅಥ್ಲೆಟಿಕ್‌ ಕೂಟ: ಓಟದಲ್ಲಿ ಮಿಂಚಿದ ಕರ್ನಾಟಕದ ಕಾವೇರಿ

ದಕ್ಷಿಣ ವಲಯ ಜೂನಿಯರ್‌ ಅಥ್ಲೆಟಿಕ್‌ ಕೂಟ: ತಮಿಳುನಾಡಿಗೆ ಸಮಗ್ರ ಪ್ರಶಸ್ತಿ

Published:
Updated:
Prajavani

ಉಡುಪಿ: ತಮಿಳುನಾಡು ತಂಡದ ಅಥ್ಲೀಟುಗಳು ಒಟ್ಟು 336 ಪಾಯಿಂಟ್ಸ್‌ ಸಂಗ್ರಹಿಸಿ, 31ನೇ ದಕ್ಷಿಣ ವಲಯ ಜೂನಿಯರ್‌ ಅಥ್ಲೆಟಿಕ್‌ ಕೂಟದ ಸಮಗ್ರ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಂಡರು. ಎರಡನೇ ಹಾಗೂ ಅಂತಿಮ ದಿನವಾದ ಭಾನುವಾರ ಒಟ್ಟು 14 ಕೂಟ ದಾಖಲೆಗಳು ಮೂಡಿಬಂದವು.

ನಗರದ ಅಜ್ಜರಕಾಡು ಮೈದಾನ ದಲ್ಲಿ, 20 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಮೊದಲ ದಿನ ಕೂಟ ದಾಖಲೆಯೊಡನೆ 100 ಮೀ. ಓಟದಲ್ಲಿ ಮೊದಲಿಗರಾಗಿದ್ದ ಕಾವೇರಿ ಲಕ್ಷ್ಮಣಗೌಡ ಪಾಟೀಲ ಅವರು ಭಾನುವಾರ 200 ಮೀ. ಓಟದಲ್ಲೂ ನೂತನ ದಾಖಲೆಯೊಡನೆ ‘ಸ್ಪ್ರಿಂಟ್‌ ಡಬಲ್‌’ ಪೂರೈಸಿದರು.

ಅಂಬಿಕಾ ಬಾಲಕಿಯರ 20 ವರ್ಷದೊಳಗಿನವರ ಷಾಟ್‌ಪಟ್‌ನಲ್ಲಿ, ಕರಿಷ್ಮಾ ಬಿ.ಸನಿಲ್‌ ಜಾವೆಲಿನ್‌ನಲ್ಲಿ ಹಳೆಯ ದಾಖಲೆ ಮುರಿದರು. ರಮ್ಯಶ್ರೀ ಜೈನ್‌ 16 ವರ್ಷದೊಳಗಿನವರ ಜಾವೆಲಿನ್‌ನಲ್ಲಿ, ಶೈಲಿ ಸಿಂಗ್‌ ಲಾಂಗ್‌ಜಂಪ್‌ನಲ್ಲಿ ದಾಖಲೆ ಸ್ಥಾಪಿಸಿದರು. ಇವರೆಲ್ಲ ಆತಿಥೇಯ ಕರ್ನಾಟಕದ ಅಥ್ಲೀಟುಗಳು.

ಮೈಸೂರಿನ ಅಂಬಿಕಾ ಶಾಟ್‌ ಅನ್ನು 13.63 ಮೀ. ದೂರ ಎಸೆದು (ಹಳೆಯ ದಾಖಲೆ: 13.27 ಮೀ) ಮುರಿದರು. ಕಾವೇರಿ ಪಾಟೀಲ 24.59 ಸೆ.ಗಳಲ್ಲಿ 200 ಮೀ. ಓಟವನ್ನು ಕ್ರಮಿಸಿದರು.

ಹಳೆಯ ದಾಖಲೆ 24.60 ಸೆ.ಗಳಾಗಿತ್ತು. ರಮ್ಯಶ್ರೀ ಜೈನ್‌, ಜಾವೆಲಿನ್‌ಅನ್ನು 44.05 ಮೀ. ದೂರಕ್ಕೆ ಎಸೆದು, ಹಳೆದ ದಾಖಲೆ (38.05 ಮೀ.) ಮುರಿದರು. ಶೈಲಿ ಸಿಂಗ್‌ ಲಾಂಗ್‌ಜಂಪ್‌ನಲ್ಲಿ 6.06 ಮೀ. ದೂರ ಜಿಗಿದು (ಹಳೆಯ ದಾಖಲೆ: 5.85 ಮೀ.) ನೂತನ ದಾಖಲೆ ಸ್ಥಾಪಿಸಿದರು.

ಕರ್ನಾಟಕದ ಕೆ.ಕೆ.ವೆಂಕಟೇಶ್‌, 20 ವರ್ಷದೊಳಗಿನವರ ಬಾಲಕರ ವಿಭಾಗದ 5,000 ಮತ್ತು 10,000 ಮೀ. ಓಟದಲ್ಲಿ ಅಗ್ರಸ್ಥಾನ ಗಳಿಸಿ ಓಟದ ಡಬಲ್‌ ಪೂರೈಸಿದರು.

ಬಾಲಕರ 20 ವರ್ಷದೊಳಗಿನವರ, 18 ವರ್ಷದೊಳಗಿನವರ ಮತ್ತು 16 ವರ್ಷದೊಳಗಿನವರ ವಿಭಾಗದಲ್ಲಿ ತಮಿಳುನಾಡು ಕ್ರಮವಾಗಿ 62, 68 ಮತ್ತು 57 ಅಂಕಗಳೊಡನೆ ತಂಡ ಪ್ರಶಸ್ತಿ ಗೆದ್ದುಕೊಂಡಿತು. 14 ವರ್ಷದೊಳಗಿನವರ ವಿಭಾಗದಲ್ಲಿ ತೆಲಂಗಾಣ (23 ಅಂಕ) ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಬಾಲಕಿಯರ 20 ವರ್ಷದೊಳಗಿನವರ ವಿಭಾಗದಲ್ಲಿ ಕೇರಳ (70 ಅಂಕ) ಟೀಮ್‌ ಪ್ರಶಸ್ತಿ ಗೆದ್ದುಕೊಂಡಿತು. ಉಳಿದ ಮೂರು (18, 16 ಮತ್ತು 14 ವರ್ಷದೊಳಗಿನವರ) ವಿಭಾಗಗಳಲ್ಲಿ ತಮಿಳುನಾಡು ತಂಡವೇ ಟೀಮ್‌ ಚಾಂಪಿಯನ್‌ ಆಯಿತು.

ಫಲಿತಾಂಶಗಳು: ‌ಬಾಲಕರು: 20 ವರ್ಷದೊಳಗಿನವರು: 200 ಮೀ. ಓಟ: ಅಭಿನ್‌ ಬಿ.ದೇವಾಡಿಗ (ಕರ್ನಾಟಕ)–1, ಅರುಣ್‌ ಸಿ.ಕುಮಾರ್‌ (ತಮಿಳುನಾಡು)–2, ವಿಬಿನ್‌ ರಾಜ್‌ (ತಮಿಳುನಾಡು)–3, ಕಾಲ: 21.82 ಸೆ.; 5,000 ಮೀ. ಓಟ: ಕೆ.ಕೆ.ವೆಂಕಟೇಶ (ಕರ್ನಾಟಕ)–1, ಆರ್‌.ಅಭಿಲಾಷ್‌ (ತಮಿಳುನಾಡು)–2, ಅಸ್ಲಾಂ ಮುಲ್ತಾನಿ (ಕರ್ನಾಟಕ)–3, ಕಾಲ: 15ನಿ.33.86 ಸೆ.; 10,000 ಮೀ. ಓಟ: ಕೆ.ಕೆ.ವೆಂಕಟೇಶ (ಕರ್ನಾಟಕ)–1, ಎಂ.ಮಣಿಕಂಠನ್‌ (ತಮಿಳುನಾಡು)–2, ಕೆ.ಅಭಿಲಾಶ್‌ (ತಮಿಳುನಾಡು)–3, ಕಾಲ: 32.16.11 ಸೆ.

18 ವರ್ಷದೊಳಗಿನವರು: 100 ಮೀ. ಓಟ: ಭರತ್‌  ಯಾದವ್‌ (ಆಂಧ್ರಪ್ರದೇಶ)–1, ಆದಿತ್ಯ ಕುಮಾರ್ ಸಿಂಗ್ (ಕೇರಳ)–2, ವಿರೂಪಾಕ್ಷಪ್ಪ ಅಂಗಡಿ (ಕರ್ನಾಟಕ)–3, ಕಾಲ: 10.71 ಸೆ.; 200 ಮೀ. ಓಟ: ವಿರೂಪಾಕ್ಷಪ್ಪ ಅಂಗಡಿ–1, ಭರತ್ ಯಾದವ್‌ –2, ಟಿ.ಕೌಶಿಕ್‌ (ತಮಿಳುನಾಡು)–3, ಕಾಲ: 22 ಸೆ.; ಡಿಸ್ಕಸ್‌ ಥ್ರೊ: ಮೋಹಿತ್‌ ರಾಜ್‌ ಎನ್‌. (ಕರ್ನಾಟಕ)–1, ಜೆ.ಮಹೇಶ್ವರ್‌ (ತಮಿಳುನಾಡು)–2, ಟಾಮ್‌ ಜೋಯೆಲ್‌ (ಪುದುಚೇರಿ)–3, ದೂರ: 51.23 ಮೀ.; ಹ್ಯಾಮರ್‌ ಥ್ರೊ: ಸಚಿನ್‌ (ಕರ್ನಾಟಕ)–1, ಭರತ್‌ ಶೆಟ್ಟಿ (ಕರ್ನಾಟಕ)–2, ಎಸ್‌.ದಿನೇಶ್ (ತಮಿಳುನಾಡು)–3, ದೂರ: 49.87 ಮೀ.

ಬಾಲಕಿಯರು: 16 ವರ್ಷದೊಳಗಿನವರು: 100 ಮೀ. ಓಟ: ರುತಿಕಾ ಸರವಣನ್‌ (ತಮಿಳುನಾಡು)–1, ನಿಯೋಲ್‌ ಆ್ಯನಾ ಕಾರ್ನೇಲಿಯೊ (ಕರ್ನಾಟಕ)–2, ಶೈಲಿ ಸಿಂಗ್‌ (ಕರ್ನಾಟಕ)–3, ಕಾಲ: 12.35 ಸೆ.; 400 ಮೀ. ಓಟ: ಪ್ರತಿಭಾ ವರ್ಗೀಸ್‌ (ಕೇರಳ)–1, ಎ.ಮೈಥಿಲಿ (ತೆಲಂಗಾಣ)–2, ದಿಶಾ ಅಳಿಗೆ (ಕರ್ನಾಟಕ)–3, ಕಾಲ: 57.74 ಸೆ.; 2000  ಮೀ. ಓಟ: ಎಂ.ಕೃತಿಕಾ (ತಮಿಳುನಾಡು)–1, ಬಿ.ಯು.ಭವ್ಯಾ (ಕರ್ನಾಟಕ)–2, ಅಕಾಂಕ್ಷಾ (ತಮಿಳುನಾಡು)–3, 6ನಿ.48.17 ಸೆ.; 100 ಮೀ. ಹರ್ಡಲ್ಸ್: ಯಮುನಾ ಎ.ಪ್ರತೀಕ್ಷಾ (ತಮಿಳುನಾಡು)–1, ವೈಶಾಲಿ ಗಣೇಶನ್‌ (ತಮಿಳುನಾಡು)–2, ಎನ್‌. ರುಚಿತಾ (ಕರ್ನಾಟಕ)–3, 15.01 ಸೆ.; ಲಾಂಗ್‌ಜಂಪ್‌: ಶೈಲಿ ಸಿಂಗ್‌ (ಕರ್ನಾಟಕ)–1, ಯಮುನಾ ಎ.–2, ಗೆಮ್ಮಲ ಲಕ್ಷ್ಮಿ (ಆಂಧ್ರಪ್ರದೇಶ)–3, 6.06 ಮೀ.; ಹೈಜಂಪ್‌: ಎ.ಅನುಪ್ರಿಯಾ (ಕೇರಳ)–1, ಬಿ.ಸಂಧ್ಯಾ (ತಮಿಳುನಾಡು)–2, ಕೆ.ಸಿ.ಸ್ಫೂರ್ತಿ (ಕರ್ನಾಟಕ)–3; ಎತ್ತರ: 1.58 ಮೀ.; ಷಾಟ್‌ಪಟ್‌: ಬೃಂದಾ ಎಸ್‌.ಗೌಡ (ಕರ್ನಾಟಕ)–1, ಲಿಖಿತಾ ಯೋಗೀಶ್‌ (ಕರ್ನಾಟಕ)–2, ಎಸ್‌.ಮೋನಿಕಾ (ತಮಿಳುನಾಡು)–3, ದೂರ: 13.19 ಮೀ.; ಡಿಸ್ಕಸ್‌ ಥ್ರೊ: ಐಶ್ವರ್ಯ (ತಮಿಳುನಾಡು)–1, ರಮ್ಯಶ್ರೀ ಜೈನ್‌ (ಕರ್ನಾಟಕ)–2, ಲಿಖಿತಾ ಯೋಗೀಶ್‌ –3, ದೂರ: 35.10 ಮೀ.; ಜಾವೆಲಿನ್‌ ಥ್ರೊ: ರಮ್ಯಶ್ರೀ ಜೈನ್‌ (ಕರ್ನಾಟಕ)–1, ಐಶ್ವರ್ಯ ಸುರೇಶ್ (ಕೇರಳ)–2, ಐಶ್ವಯ್ಯ ಎಂ. (ತಮಿಳುನಾಡು)–3, ದೂರ: 43.05 ಮೀ.

 14 ವರ್ಷದೊಳಗಿನವರು: 600 ಮೀ. ಓಟ: ಪ್ರಿಯಾಂಕ ಮಡಿವಾಳಪ್ಪ ಓಲೇಕಾರ (ಕರ್ನಾಟಕ)–1, ಮಯೂಖಾ ವಿನೋದ್‌ (ಕೇರಳ)–2, ಎಂ.ಜಿ.ನಿವೇತಿಕಾ (ತಮಿಳುನಾಡು)–3; ಕಾಲ: 1ನಿ.37.96 ಸೆ.; ಷಾಟ್‌ಪಟ್‌: ವಿ.ಮಧುಮಿತಾ (ತಮಿಳುನಾಡು)–1, ಮರಿಯಾ ಡೋನಾ (ಕೇರಳ)–2, ಮಾಧುರ್ಯ (ಕರ್ನಾಟಕ)–3, ಕಾಲ: 12.77 ಮೀ.

 

ಪ್ರತಿಕ್ರಿಯಿಸಿ (+)