ಮಂಗಳವಾರ, ಸೆಪ್ಟೆಂಬರ್ 17, 2019
21 °C

ಅಥ್ಲೀಟ್‌ಗಳಿಂದ ಗಮನಾರ್ಹ ಸಾಧನೆ: ಫೆಲಿಕ್ಸ್

Published:
Updated:

ಬೆಂಗಳೂರು: ಭಾರತದ ಕ್ರೀಡಾ ಕ್ಷೇತ್ರಕ್ಕೆ ಪ್ರತಿಭಾನ್ವಿತರು ಆಗಮಿಸುತ್ತಿದ್ದು, ‌ಅಥ್ಲೀಟ್‌ಗಳು ಗಮನಾರ್ಹ ಸಾಧನೆ ತೋರುತ್ತಿದ್ದಾರೆ ಎಂದು ಹಿರಿಯ ಹಾಕಿ ಆಟಗಾರ ಜೂಡ್‌ ಫೆಲಿಕ್ಸ್‌ ಹೇಳಿದರು. 

ಇಲ್ಲಿನ ಇನ್‌ಫೆಂಟ್ರಿ ರಸ್ತೆಯ ಸ್ಪರ್ಶ್‌ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ‘ಸ್ಪೋರ್ಥೋ’ ಕ್ರೀಡಾ ವೈದ್ಯಕೀಯ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 

ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಇತ್ತೀಚೆಗೆ ಹೆಚ್ಚು ಪದಕ ಗಳಿಸುತ್ತಿದೆ. ಕ್ರೀಡಾ ಕ್ಷೇತ್ರಕ್ಕೆ ಆಗಮಿಸುವವರಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳು ದೊರೆಯಬೇಕಿವೆ. ಆಟಗಾರರಿಗೆ ನಿರೀಕ್ಷಿತ ಪ್ರಮಾಣದಲ್ಲಿ ವೈದ್ಯಕೀಯ ಮಾರ್ಗದರ್ಶಕರಿಲ್ಲ. ಗಂಭೀರವಾಗಿ ಗಾಯಗೊಂಡರೆ ಆಟಗಾರನ ವೃತ್ತಿ ಜೀವನ ಮುಗಿದಂತಾಗುತ್ತದೆ. ಹೀಗಾಗಿ ಉತ್ತಮ ಕ್ರೀಡಾ ವೈದ್ಯಕೀಯ ತಜ್ಞರಿರುವ ಆರೋಗ್ಯ ಕೇಂದ್ರಗಳು ದೇಶದ ಎಲ್ಲೆಡೆ ಆರಂಭವಾಗಬೇಕಿವೆ ಎಂದರು.

ಸ್ಪರ್ಶ ಆಸ್ಪತ್ರೆ ಮುಖ್ಯಸ್ಥ ಡಾ.ಶರಣ್‌ ಪಾಟೀಲ್‌ ಮಾತನಾಡಿ, ವೃತ್ತಿಪರ ಕ್ರೀಡಾಪಟುಗಳ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ‘ಸ್ಪೋರ್ಥೋ’ ಆರಂಭಿಸಲಾಗಿದೆ. ಕ್ರೀಡಾ ಮನಶಾಸ್ತ್ರಜ್ಞರು, ಭೌತಿಕ ಚಿಕಿತ್ಸಕರು, ಆಹಾರ ಪೋಷಕಾಂಶ ತಜ್ಞರು, ಹೃದ್ರೋಗ ತಜ್ಞರ ಪ್ರತ್ಯೇಕ ವಿಭಾಗಗಳಿದ್ದು, ಆಟಗಾರರ ಕ್ಷೇಮಕ್ಕಾಗಿ ಶ್ರಮಿಸಲಿವೆ ಎಂದು ಹೇಳಿದರು. 

ಪ್ಯಾರಾ ಒಲಿಂಪಿಕ್ಸ್‌ ಈಜುಪಟು ಶರತ್‌ ಗಾಯಕ್‌ವಾಡ್‌, ಸೈಕ್ಲಿಸ್ಟ್ ಸಮೀಮ್‌ ರಿಜ್ವಿ, ಹಿರಿಯ ಹಾಕಿ ಆಟಗಾರ ಜೂಡ್‌ ಫೆಲಿಕ್ಸ್‌ ಅವರಿಗೆ ‘ಸ್ಪೋರ್ಥೋ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಡಾ.ಹರೀಶ್ ಪುರಾಣಿಕ್‌, ಡಾ.ಪದ್ಮನಾಭನ್‌ ಶೇಖರ್, ಡಾ.ಅನನ್ಯ ಇದ್ದರು.  

Post Comments (+)