ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಹೊಳಪು ಬೀರಿದ ಯುವ ತಾರೆಯರು

‘ಕಿಂಗ್‌’ ಕೊಹ್ಲಿ ದಾಖಲೆಗಳ ಸರದಾರ: ಮಯಂಕ್‌ ಮೇನಿಯಾ: ಮಿಥಾಲಿ ಸಂಘರ್ಷ: ಚಿನ್ನದ ಹುಡುಗಿ ಸಿಂಧು
Last Updated 29 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಕ್ರೀಡಾ ಜಗತ್ತಿಗೆ 2018ನೇ ಇಸವಿಯು ಮಹತ್ವದ ವರ್ಷವಾಗಿತ್ತು. ಕಾಮನ್‌ವೆಲ್ತ್, ಫಿಫಾ ವಿಶ್ವಕಪ್ ಫುಟ್‌ಬಾಲ್, ಏಷ್ಯನ್ ಗೇಮ್ಸ್‌, ವಿಶ್ವಕಪ್ ಹಾಕಿ, ಮಹಿಳೆಯರ ವಿಶ್ವ ಟ್ವೆಂಟಿ–20 ಕ್ರಿಕೆಟ್, ಇಂಡಿಯನ್ ಪ್ರೀಮಿಯರ್ ಲೀಗ್, ಕ್ರಿಕೆಟ್ ಸರಣಿಗಳು ಹೀಗೆ ವರ್ಷಪೂರ್ತಿ ಕ್ರೀಡಾಪ್ರೇಮಿಗಳಿಗೆ ರಸದೌತಣ ಆಸ್ವಾದಿಸುವ ಅವಕಾಶ ಸಿಕ್ಕಿತ್ತು.

ಕರ್ನಾಟಕ ಕ್ರಿಕೆಟ್‌ಗೆ ಸಿಹಿ–ಕಹಿ: ಜನವರಿ–ಫೆಬ್ರುವರಿಯಲ್ಲಿ ನಡೆದ 2017–18ನೇ ಸಾಲಿನ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟ್ರೋಫಿಯನ್ನು ಗೆದ್ದ ಕರ್ನಾಟಕ ತಂಡವು ಸಂಭ್ರಮಿಸಿತು. ರಣಜಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತಿದ್ದ ಕಹಿಯನ್ನು ಮರೆಯಿತು. ರಣಜಿಯಲ್ಲಿ 1160 ಮತ್ತು ವಿಜಯ್‌ ಹಜಾರೆಯಲ್ಲಿ 723 ರನ್‌ಗಳನ್ನು ಪೇರಿಸಿದ್ದ ಮಯಂಕ್ ಅಗರವಾಲ್ ಮಿಂಚಿದರು. ಆದರೆ, ಅವರಿಗೆ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದ್ದು ಮಾತ್ರ ವರ್ಷಾಂತ್ಯದಲ್ಲಿ. ಮೆಲ್ಬರ್ನ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿ ಮಿಂಚಿದರು. ಆದರೆ, ಸೆಪ್ಟೆಂಬರ್–ಅಕ್ಟೋಬರ್‌ನಲ್ಲಿ ಬೆಂಗಳೂರಿನ ಆತಿಥ್ಯದಲ್ಲಿ ನಡೆದ 2018–19ನೇ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ಲೀಗ್ ಹಂತದಲ್ಲಿ ಹೀನಾಯ ಸೋಲನುಭವಿಸಿತು. ಮುಂಬೈ ಚಾಂಪಿಯನ್ ಮತ್ತು ದೆಹಲಿ ರನ್ನರ್ಸ್ ಅಪ್ ಆದವು. ಕನ್ನಡಿಗ ರಾಹುಲ್ ದ್ರಾವಿಡ್ ಅವರು ಪ್ರತಿಷ್ಠಿತ ಐಸಿಸಿ ಹಾಲ್ ಆಫ್‌ ಫೇಮ್ ಗೌರವ ಪಡೆದುಕೊಂಡರು.

ಟೆಸ್ಟ್‌ ಕ್ರಿಕೆಟ್‌ನಲ್ಲಿಯೂ ಏಳು–ಬೀಳುಗಳು ಮುಂದುವರಿದವು. ಆದರೂ ಭಾರತ ತಂಡವು ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರಪಟ್ಟ ಉಳಿಸಿಕೊಂಡಿದೆ. ವಿರಾಟ್ ಕೊಹ್ಲಿ ನಾಯಕತ್ವದ ತಂಡವು ಇಂಗ್ಲೆಂಡ್‌ನಲ್ಲಿ ಸರಣಿ ಸೋಲನುಭವಿಸಿತು. ಶ್ರೀಲಂಕಾ ಮತ್ತು ಭಾರತದಲ್ಲಿ ನಡೆದ ವೆಸ್ಟ್ ಇಂಡೀಸ್ ಎದುರಿನ ಸರಣಿಗಳಲ್ಲಿ ಗೆದ್ದಿತು. ಟೆಸ್ಟ್‌ನಲ್ಲಿ ವಿರಾಟ್ ಆರು ಸಾವಿರ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಹತ್ತು ಸಾವಿರ ರನ್‌ಗಳ ಮೈಲುಗಲ್ಲುಗಳನ್ನು ಸ್ಥಾಪಿಸಿದರು.

ಆದರೆ ವಿರಾಟ್ ನಾಯಕತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಈ ಬಾರಿಯೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ರಶಸ್ತಿ ಗೆಲ್ಲಲಿಲ್ಲ. ಎರಡು ವರ್ಷಗಳ ನಿಷೇಧದ ನಂತರ ಟೂರ್ನಿಗೆ ಮರಳಿದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಮಹೇಂದ್ರಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ ಆಯಿತು. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಧೋನಿ ವಿದಾಯ ಹೇಳುತ್ತಾರೆ ಎಂಬ ಮಾತುಗಳು ಕೇಳಿಬಂದವು. ಆದರೆ, ನಂತರ ತಣ್ಣಗಾದವು.

ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ನಡೆದ ಕೆಪಿಎಲ್‌ ಏಳನೇ ಆವೃತ್ತಿಯಲ್ಲಿ ಬಿಜಾಪುರ ಬುಲ್ಸ್‌ ತಂಡ ಚಾಂಪಿಯನ್‌ ಆಗಿ ಟೂರ್ನಿಯಲ್ಲಿ ಎರಡು ಬಾರಿ ಪ್ರಶಸ್ತಿ ಜಯಿಸಿದ ಏಕೈಕ ತಂಡ ಎನ್ನುವ ಹೆಗ್ಗಳಿಕೆಯಿಂದ ಬೀಗಿತು.

ಚೆಂಡು ವಿರೂಪದ ಕಳಂಕ: ಆಸ್ಟ್ರೇಲಿಯಾದ ಕ್ಯಾಮರಾನ್ ಬ್ಯಾಂಕ್ರಾಫ್ಟ್‌, ಸ್ಟೀವ್ ಸ್ಮಿತ್‌ ಮತ್ತು ಡೇವಿಡ್ ವಾರ್ನರ್‌ ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ಸುದ್ದಿಯಾದರೆ, ಭಾರತ ಮಹಿಳಾ ಕ್ರಿಕೆಟ್ ತಂಡ ಟ್ವೆಂಟಿ–20 ವಿಶ್ವಕಪ್‌ನ ಸೆಮಿಫೈನಲ್‌ ಹಂತದಲ್ಲಿ ಹೊರಬಿದ್ದ ಬೆನ್ನಲ್ಲೇ ತಂಡದ ಆಡಳಿತ ಮತ್ತು ಮಿಥಾಲಿ ರಾಜ್‌ ನಡುವಿನ ವಾದ–ವಿವಾದ ಸಂಚಲನ ಉಂಟುಮಾಡಿತು.

ಫಿಫಾ ವಿಶ್ವಕಪ್‌ಗೆ ಫ್ರಾನ್ಸ್‌ ಒಡೆಯ: ಈ ಬಾರಿ ರಷ್ಯಾದಲ್ಲಿ ನಡೆದ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಫ್ರಾನ್ಸ್‌ ತಂಡವು ಪ್ರಭುತ್ವ ಸಾಧಿಸಿತು. ಫೈನಲ್‌ನಲ್ಲಿ ಫೈನಲ್‌ನಲ್ಲಿ ಕ್ರೊವೇಷ್ಯಾವನ್ನು ಮಣಿಸಿತು. ರಷ್ಯಾ, ಕ್ರೊವೇಷ್ಯಾ, ಬೆಲ್ಜಿಯಂ ತಂಡಗಳು ಮಿಂಚಿದರೆ, ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪೋರ್ಚುಗಲ್ ಮತ್ತು ಲಯೊನೆಲ್ ಮೆಸ್ಸಿಯ ಅರ್ಜೆಂಟೀನಾ ತಂಡಗಳು ಮಂಕಾದವು.

ಮಿಂಚಿದ ಫೆಡರರ್

ವರ್ಷದ ಆರಂಭದಲ್ಲಿ ನಡೆದ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ರೋಜರ್‌ ಫೆಡರರ್‌ ಮತ್ತು ಕ್ಯಾರೋಲಿನ ವೋಜ್ನಿಯಾಕಿ ಕ್ರಮವಾಗಿ ಪುರುಷರ ಮತ್ತು ಮಹಿಳಾ ಸಿಂಗಲ್ಸ್‌ ವಿಭಾಗಗಳಲ್ಲಿ ಚಾಂಪಿಯನ್‌ ಆದರು.

ಫ್ರೆಂಚ್‌ ಓಪನ್‌ನಲ್ಲಿ ರಫೆಲ್‌ ನಡಾಲ್ ಮತ್ತು ಸಿಮೊನಾ ಹಲೆಪ್‌ ಕಿರೀಟ ಮುಡಿಗೇರಿಸಿಕೊಂಡರು. ಅಮೆರಿಕ ಓಪನ್‌ನಲ್ಲಿ ನೊವಾಕ್ ಜೊಕೊವಿಚ್‌ ಮತ್ತು ನವೊಮಿ ಒಸಾಕ ಪ್ರಶಸ್ತಿ ಗೆದ್ದರು. ವಿಂಬಲ್ಡನ್‌ ಚಾಂಪಿಯನ್‌ಷಿಪ್‌ನಲ್ಲೂ ಜೊಕೊವಿಚ್‌ ಅವರು ಟ್ರೋಫಿ ಜಯಿಸಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ
ಸ್ಥಾನಕ್ಕೇರಿದರು.

ಗೋಲ್ಡ್‌ಕೋಸ್ಟ್‌ನಲ್ಲಿ ಚಿನ್ನದ ಬೇಟೆ – ಹಾಕಿಯಲ್ಲಿ ನಿರಾಸೆ

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್‌ಗಳು ಈ ಬಾರಿ ಅಮೋಘ ಸಾಧನೆ ಮಾಡಿದರು. 26 ಚಿನ್ನದ ಪದಕಗಳನ್ನು ಗೆದ್ದ ಭಾರತ ಮೂರನೇ ಸ್ಥಾನ ಪಡೆಯಿತು. ವೇಟ್‌ಲಿಫ್ಟಿಂಗ್‌ನಲ್ಲಿ ಕನ್ನಡಿಗ ಗುರುರಾಜ್ ಪೂಜಾರಿ ಬೆಳ್ಳಿಯ ಪದಕ ಗೆದ್ದು ಮಿಂಚಿದರು. ಟೇಬಲ್‌ ಟೆನಿಸ್‌ನಲ್ಲಿ ಮಣಿಕಾ ಬಾತ್ರಾ ಎಂಬ ನವತಾರೆಯ ಉದಯವಾಯಿತು.

ಹಾಕಿ ನಿರಾಶೆ; ವರ್ಷದ ಕೊನೆಯಲ್ಲಿ ನಡೆದ ವಿಶ್ವಕಪ್ ಹಾಕಿ ಟೂರ್ನಿ ಭಾರತಕ್ಕೆ ನಿರಾಸೆಯ ‘ಕೂಟ’ವಾಗಿತ್ತು. ತವರಿನಲ್ಲೇ ನಡೆದ ಟೂರ್ನಿಯ ಸೆಮಿಫೈನಲ್‌ ಹಂತಕ್ಕೇರಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಬೆಲ್ಜಿಯಂಗೆ ಚಾಂಪಿಯನ್ ಪಟ್ಟ ಗಳಿಸಿಕೊಟ್ಟ ರೋಚಕ ಫೈನಲ್‌ ಪಂದ್ಯ ಸದಾ ಕಾಲ ಹಾಕಿ ಪ್ರಿಯರ ನೆನಪಿನಲ್ಲಿ ಉಳಿಯಲಿದೆ.

ಬ್ಯಾಸ್ಕೆಟ್‌ಬಾಲ್‌ನಲ್ಲಿ ಭಾರತದ ಮಹಿಳೆಯರು ಈ ಬಾರಿ ಮತ್ತೆ ಸಾಧನೆಯ ಶಿಖರವೇರಿದರು. ಸೀನಿಯರ್‌ ಮತ್ತು 18 ವರ್ಷದೊಳಗಿನವರ ತಂಡಗಳು ಏಷ್ಯಾದಿಂದ ‘ಎ’ ವಿಭಾಗಕ್ಕೆ ಪದಾರ್ಪಣೆ ಮಾಡಿದ ಬೆನ್ನಲ್ಲೇ 16 ವರ್ಷದೊಳಗಿನವರು ಕೂಡ ಈ ಸಾಧನೆ ಮಾಡಿದರು.

ಕರಗಿದ ಕಬಡ್ಡಿ ಪ್ರಾಬಲ್ಯ: ಅಥ್ಲೀಟ್‌ಗಳ ಮಿಂಚು

ಹಿಂದಿನ ಎರಡೂ ಏಷ್ಯನ್‌ ಕ್ರೀಡಾಕೂಟಗಳಿಗಿಂತ ಈ ಬಾರಿಯ ಕೂಟದಲ್ಲಿ ‘ಚಿನ್ನ’ದ ನಗುವೇ ಹೆಚ್ಚಿತ್ತು. ಕರ್ನಾಟಕಕ್ಕೆ ಹೆಚ್ಚು ಗೊತ್ತೇ ಇರದ ಕುರಾಶ್‌ ಕ್ರೀಡೆಯಲ್ಲಿ ಕನ್ನಡತಿ ಮಲಪ್ರಭಾ ಜಾಧವ್‌ ಕಂಚಿನ ಪದಕ ಗೆದ್ದರು. ಅಥ್ಲೆಟಿಕ್ಸ್‌ನಲ್ಲಿ ಎಂ.ಆರ್‌. ಪೂವಮ್ಮ, ಟೆನಿಸ್‌ನಲ್ಲಿ ರೋಹನ್‌ ಬೋಪಣ್ಣ ಸ್ವರ್ಣ ಸಾಧಕರಾದರು. ಕಬಡ್ಡಿ ತಂಡದಲ್ಲಿ ಉಷಾ ರಾಣಿ, ಈಕ್ವೇಸ್ಟ್ರಿಯನ್ ಸ್ಪರ್ಧೆಯಲ್ಲಿ ಬೆಂಗಳೂರಿನ ಫವಾದ್ ಮಿರ್ಜಾ ಬೆಳ್ಳಿ ಜಯಿಸಿದರು.

ಏಷ್ಯನ್‌ ಕ್ರೀಡಾಕೂಟದಲ್ಲಿ ಕಬಡ್ಡಿ ಸೇರ್ಪಡೆಯಾದ ವರ್ಷದಿಂದ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಒಮ್ಮೆಯೂ ಚಿನ್ನದ ಪದಕ ಬಿಟ್ಟುಕೊಟ್ಟಿರಲಿಲ್ಲ. ಆದರೆ, ಈ ಬಾರಿ ಪುರುಷರ ತಂಡ ಕಂಚಿಗೆ ಸಮಾಧಾನ ಪಟ್ಟುಕೊಂಡರೆ, ಮಹಿಳಾ ತಂಡ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು. ಒಟ್ಟಾರೆಯಾಗಿ ಕೂಟದಲ್ಲಿ ಭಾರತ 15 ಚಿನ್ನ ಸೇರಿದಂತೆ ಒಟ್ಟು 69 ಪದಕ ಜಯಿಸಿತು. ಚೆಸ್‌ನಲ್ಲಿ ಕರ್ನಾಟಕದ ಪಾಲಿಗೆ ಖುಷಿಯ ವರ್ಷ. ಇದುವರೆಗೆ ಎಂ.ಎಸ್‌. ತೇಜಕುಮಾರ್‌ ಮಾತ್ರ ಗ್ರ್ಯಾಂಡ್‌ಮಾಸ್ಟರ್‌ ಆಗಿದ್ದರು. ವರ್ಷದ ಕೊನೆಯಲ್ಲಿ ಶಿವಮೊಗ್ಗದ ಜಿ.ಎ. ಸ್ಟ್ರ್ಯಾನಿ ಕೂಡ ಗ್ರ್ಯಾಂಡ್‌ ಮಾಸ್ಟರ್‌ ಪದವಿ ಸಂಪಾದಿಸಿದರು. ವಿಶ್ವ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಹಿಮಾ ದಾಸ್ ಚಿನ್ನದ ಓಟ, ವಿಶ್ವ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಅವರ ವಿಶ್ವ ದಾಖಲೆಯ ಚಿನ್ನದ ಸಂಭ್ರಮ ಕಳೆಗಟ್ಟಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT