ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಸೌಲಭ್ಯ ಗಗನಕುಸುಮ

Last Updated 28 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಒಲಿಂಪಿಕ್ಸ್‌ ಮತ್ತು ವಿಶ್ವಮಟ್ಟದ ಕ್ರೀಡಾಕೂಟಗಳಲ್ಲಿ ದೊಡ್ಡ ಸಾಧನೆ ಮಾಡಲು ಪರಿಶ್ರಮ ಅಗತ್ಯ. ಅಂತಹ ಸಾಧನೆಗೆ ನಿತ್ಯದ ಪರಿಶ್ರಮ, ಅಭ್ಯಾಸಗಳೇ ಆಧಾರ. ಇದಕ್ಕೆ ಸೌಲಭ್ಯಗಳೇ ಮೂಲಾಧಾರ. ಧಾರವಾಡ ಜಿಲ್ಲೆ ಕೂಡ ಕ್ರೀಡಾ ಚಟುವಟಿಕೆಯಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದೆ. ವರ್ಷಗಳು ಉರುಳಿದಂತೆ ಈ ಸಾಧನೆ ಇನ್ನಷ್ಟು ಹೆಚ್ಚಾಗಬೇಕಾಗಿತ್ತು. ಆದರೆ, ಮೂಲ ಸೌಲಭ್ಯಗಳ ಕೊರತೆಯಿಂದ ಮುಂದಡಿ ಇಡಬೇಕಿದ್ದ ಅಥ್ಲೀಟ್‌ಗಳ ಹೆಜ್ಜೆ, ನಿಧಾನವಾಗಿ ಹಿಂದೆ ಸರಿಯುತ್ತಿದೆ.

ಕ್ರೀಡಾಕ್ಷೇತ್ರದಲ್ಲಿ ಧಾರವಾಡ ಜಿಲ್ಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರೂ ಈಗಲೂ ಸುಸಜ್ಜಿತ ಕ್ರೀಡಾಂಗಣಗಳ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ. ಧಾರವಾಡದ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣ ಜಿಲ್ಲೆಯಲ್ಲಿರುವ ಏಕೈಕ ಅಥ್ಲೆಟಿಕ್‌ ಟ್ರ್ಯಾಕ್‌. ಹುಬ್ಬಳ್ಳಿ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿರುವ ಕ್ರೀಡಾಪಟುಗಳು ಅಭ್ಯಾಸಕ್ಕಾಗಿ ಈಗಲೂ ಧಾರವಾಡಕ್ಕೆ ಹೋಗಬೇಕಾದ ಪರಿಸ್ಥಿತಿಯಿದೆ. ಇಲ್ಲವಾದರೆ ಮಣ್ಣಿನ ಟ್ರ್ಯಾಕ್‌ನಲ್ಲಿ ಓಡಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಸಿಂಥೆಟಿಕ್‌ ಮೇಲೆ ಓಡಬೇಕಾದ ಅನಿವಾರ್ಯತೆಯಿದೆ.

ಹುಬ್ಬಳ್ಳಿಯಲ್ಲಿ ಬಿವಿಬಿ ಕಾಲೇಜಿನಲ್ಲಿರುವ ಮಣ್ಣಿನ ಮೈದಾನದಲ್ಲಿಯೇ ಬಹುತೇಕ ಕ್ರೀಡಾಚಟುವಟಿಕೆಗಳು ನಡೆಯುತ್ತವೆ. ಸೆಟ್ಲಮೆಂಟ್‌ನಲ್ಲಿರುವ ಯಂಗ್‌ಸ್ಟರ್ಸ್‌ ಹಾಕಿ ಕ್ಲಬ್‌ನಲ್ಲಿ ಮಣ್ಣಿನ ಅಂಕಣದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಇದರಿಂದ ಕ್ರೀಡಾಪಟುಗಳಲ್ಲಿ ವೃತ್ತಿಪರತೆ ಬೆಳೆಯುತ್ತಿಲ್ಲ. ಆದ್ದರಿಂದ ಜಿಲ್ಲೆಯ ಪ್ರತಿಭೆಗಳು ಅನ್ಯ ಜಿಲ್ಲೆಗಳ ಹಾಗೂ ರಾಜ್ಯಗಳ ಪಾಲಾಗುತ್ತಿದ್ದಾರೆ. ಗ್ರಾಮೀಣ ಹಾಗೂ ತಾಲ್ಲೂಕು ಪ್ರದೇಶದ ಕ್ರೀಡಾಪಟುಗಳು ಈಗಲೂ ಡಾಂಬರು ರಸ್ತೆ ಮೇಲೆ ಓಡಿ ಅಭ್ಯಾಸ ಮಾಡುತ್ತಿದ್ದಾರೆ. ಆದ್ದರಿಂದ ತಾಲ್ಲೂಕಿನ ಕನಿಷ್ಠ ಒಂದಾದರೂ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸಬೇಕಾದ ಅಗತ್ಯವಿದೆ.

ರಾಷ್ಟ್ರೀಯ ಮಟ್ಟದ ಹಾಕಿ ಟೂರ್ನಿಗಳಲ್ಲಿ ಆಡಿರುವ ಮಣಿಕಂಠ ಭಜಂತ್ರಿ, ವಿನಾಯಕ ಬಿಜವಾಡ, ಪವನ ಗೋಕಾಕ, ಸಹದೇವ್‌ ಯರಕಲ್‌, ರಾಘವೇಂದ್ರ ಕೊರವರ ಹೀಗೆ ಅನೇಕ ಆಟಗಾರರು ಹುಬ್ಬಳ್ಳಿಯವರೇ. ಅವರು ಇಲ್ಲಿ ವೃತ್ತಿಪರ ತರಬೇತಿಗೆ ಅವಕಾಶ ಸಿಗದ ಕಾರಣ ಬೆಂಗಳೂರು ಸೇರಿದರು. ಅಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆದುಕೊಂಡರು.

ಗದಗ ರಸ್ತೆಯಲ್ಲಿರುವ ಮೈದಾನದಲ್ಲಿ ನಿತ್ಯ ನೂರಾರು ಮಕ್ಕಳು ಫುಟ್‌ಬಾಲ್‌ ಆಡುತ್ತಾರೆ. ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣ ಕ್ರೀಡಾ ಚಟುವಟಿಕೆಗಳಿಗಿಂತ ಬೇರೆ ಕಾರಣಕ್ಕೆ ಹೆಚ್ಚು ಬಳಕೆಯಾಗುತ್ತದೆ. ಹಳೇ ಹುಬ್ಬಳ್ಳಿಯ ಹೆಗ್ಗೇರಿ ಬಳಿ ಐದು ಎಕರೆಯಲ್ಲಿ ಸುಸಜ್ಜಿತ ಮೈದಾನ ನಿರ್ಮಿಸಲು 11 ವರ್ಷಗಳ ಹಿಂದೆಯೇ ಪಾಲಿಕೆ ನಿರ್ಧರಿಸಿತ್ತು. ಈಗಲೂ ಅಲ್ಲಿ ಕ್ರೀಡಾಂಗಣ ನಿರ್ಮಾಣವಾಗಿಲ್ಲ. ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಖೇಲೊ ಇಂಡಿಯಾದಿಂದ ತಾರಿಹಾಳ ಬಳಿ ನಿರ್ಮಾಣಕ್ಕೆ ಉದ್ದೇಶಿಸಿದ ಮೈದಾನ ನಿರ್ಮಾಣ ಕಾರ್ಯ ಇನ್ನೂ ಆರಂಭವಾಗಿಲ್ಲ. ಖಾಸಗಿಯಾಗಿ ಆರಂಭವಾಗಿರುವ ಕ್ರೀಡಾಂಗಣಗಳು, ಶೂಟಿಂಗ್‌ ಅಕಾಡೆಮಿಯೇ ಸ್ಥಳೀಯ ಪ್ರತಿಭೆಗಳಿಗೆ ಜೀವಾಳವಾಗಿವೆ.

ಧಾರವಾಡ ಜಿಲ್ಲೆಯ ಕ್ರೀಡಾ ಸಾಧನೆ ಮೆಲುಕು

ಧಾರವಾಡ ಜಿಲ್ಲೆ ಕ್ರಿಕೆಟ್‌, ಹಾಕಿ, ವಾಲಿಬಾಲ್‌, ಬ್ಯಾಡ್ಮಿಂಟನ್‌, ಫುಟ್‌ಬಾಲ್‌ ಹೀಗೆ ಎಲ್ಲ ಕ್ರೀಡೆಗಳಲ್ಲಿಯೂ ಹೆಸರಾಗಿತ್ತು. ಅಖಂಡ ಧಾರವಾಡ (ಗದಗ ಮತ್ತು ಹಾವೇರಿ ಒಳಗೊಂಡು) ಜಿಲ್ಲೆಯಿದ್ದಾಗ ನಿರಂತರವಾಗಿ ಕ್ರೀಡಾ ಚಟುವಟಿಕೆಗಳು ನಡೆಯುತ್ತಲೇ ಇದ್ದವು. 1887ರಲ್ಲಿ ಗದಗನಲ್ಲಿ ಹುಯಿಲಗೋಳ ಶ್ರೀನಿವಾಸರಾಯರು ಯಂಗ್‌ ಮೆನ್ಸ್‌ ಫುಟ್‌ಬಾಲ್‌ ಕ್ಲಬ್‌ ಆರಂಭಿಸಿದ್ದರು. 1916ರಲ್ಲಿ ಧಾರವಾಡದಲ್ಲಿ ಬಾಲ ಮಾರುತಿ ವ್ಯಾಯಾಮ ಸಂಸ್ಥೆ ಆರಂಭವಾಯಿತು. ಮುಂದೆ ಇದು ಕರ್ನಾಟಕ ವ್ಯಾಯಾಮ ವಿದ್ಯಾಪೀಠ ಎಂದಾಯಿತು.

ಹಾಕಿ ಆಟಕ್ಕೆ ಧಾರವಾಡ ಮೊದಲಿನಿಂದಲೂ ಹೆಸರುವಾಸಿ. ಜಿಲ್ಲೆಯಲ್ಲಿ ಹೆಸರಾಂತ ಪೊಲೀಸ್‌ ಹಾಕಿ ತಂಡವಿತ್ತು. ಕ್ಯಾಂಪ್‌ಬೆಲ್‌ ಕಪ್‌ ಹಾಕಿ ಸ್ಪರ್ಧೆ, ಸೆಟ್ಲಮೆಂಟ್‌ ಬಡಾವಣೆಯ ಹಾಕಿ ಟೂರ್ನಿಗಳು ಬಹಳಷ್ಟು ಪ್ರಸಿದ್ಧಿ ಪಡೆದಿದ್ದವು.

ಹುಬ್ಬಳ್ಳಿಯ ಸೆಟ್ಲಮೆಂಟ್‌ ಬಡಾವಣೆಯಲ್ಲಿ ಈಗಲೂ ಇರುವ ಹಾಕಿ ಮೈದಾನದಲ್ಲಿ ಅರಳಿದ ಪ್ರತಿಭೆಗಳೇ ಈಗ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಮಿಂಚುತ್ತಿದ್ದಾರೆ. ಗೋಕಾಕ್‌ ಸಹೋದರರು, ಬಟಾಡೆ ಸಹೋದರರು, ಸಿದ್ಧಲಿಂಗ, ಪಿ.ವೈ. ಹೊಸಮನಿ, ಬಿ. ಅರುಣ್ ಕುಮಾರ್‌, ಎಸ್‌.ಎಸ್‌. ರಾಣೆಬೆನ್ನೂರ, ಗೋಲ್‌ಕೀಪರ್‌ ಸೈಯದ್‌ ಹಶೀಂ ಅಲಿ, ಸೈಯದ್‌ ಸಾಹೇಬ್‌ ಸಿಂಧಗಿ ಹೆಸರಾಂತ ಹಾಕಿ ಆಟಗಾರರು ಎನಿಸಿದ್ದರು. ಮಹಿಳಾ ವಿಭಾಗದಲ್ಲಿ ವೀಣಾ ಸೊರಟೂರು ಮತ್ತು ಪೂರ್ಣಿಮಾ ಹಾಕಿಯಲ್ಲಿ ದೊಡ್ಡ ಸಾಧನೆ ಮಾಡಿದ್ದರು.

1920ರ ದಶಕದಲ್ಲಿ ಯುರೋಪಿಯನ್‌ ಅಧಿಕಾರಿಗಳ ಉತ್ತೇಜನದಿಂದ ಧಾರವಾಡದಲ್ಲಿ ಕ್ರಿಕೆಟ್‌ ಪ್ರಸಿದ್ಧಿ ಪಡೆಯಿತು. ಅಗ್ಗು ಭಾಸ್ಕರ್‌, ಭಾರತ ಇತರೆ ತಂಡದ ಪರವಾಗಿ ಇಂಗ್ಲೆಂಡ್‌ ವಿರುದ್ಧ ಪಂದ್ಯವಾಡಿದ್ದರು. ಈ ಭಾಗದ ಪ್ರಸಿದ್ಧ ಕಾಲೇಜುಗಳಲ್ಲಿ ಒಂದಾದ ಕರ್ನಾಟಕ ಕಾಲೇಜು ತಂಡಕ್ಕೆ ಜಕ್ಕನಗೌಡರ ನಾಯಕರಾಗಿದ್ದರು.

1949ರಲ್ಲಿ ಆರಂಭವಾದ ಧಾರವಾಡದ ಕ್ರಿಕೆಟ್‌ ಕ್ಲಬ್‌ ಕರ್ನಾಟಕಕ್ಕೆ ಉತ್ತಮ ಕ್ರಿಕೆಟಿಗರನ್ನು ನೀಡಿದೆ. 1950ರಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ ಆರಂಭವಾದ ಬಳಿಕ ಕ್ರಿಕೆಟ್‌ಗೆ ಸಾಕಷ್ಟು ಉತ್ತೇಜನ ಸಿಕ್ಕಿತು. ಈಗ ಬಿಡಿಕೆ, ಧಾರವಾಡದ ವಸಂತ ಮುರ್ಡೇಶ್ವರ ಕ್ರಿಕೆಟ್‌ ಅಕಾಡೆಮಿ, ಹುಬ್ಬಳ್ಳಿಯ ಭಾಣಜಿ ಕಿಮಜಿ ಕ್ರಿಕೆಟ್‌ ಕ್ಲಬ್‌, ತೇಜಲ್‌ ಶಿರಗುಪ್ಪಿ ಕ್ರಿಕೆಟ್‌ ಅಕಾಡೆಮಿ, ಧಾರವಾಡದ ಎಸ್‌ಡಿಎಂ ಕ್ರಿಕೆಟ್‌ ಕ್ಲಬ್‌, ಧಾರವಾಡದ ಫಸ್ಟ್‌ ಕ್ರಿಕೆಟ್‌ ಅಕಾಡೆಮಿಗಳು ತರಬೇತಿಗಳನ್ನು ನೀಡುತ್ತಿವೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಧಾರವಾಡ ವಲಯದ ಈಗಿನ ನಿಮಂತ್ರಕ ಬಾಬಾ ಭೂಸದ, ಸುಧಾಕರ ರಾಯ್‌, ಹುಬ್ಬಳ್ಳಿ ರೈಲ್ವೆ ತಂಡದ ಸಿತಾರಾಂ, ಸಾಲಿಯಾನ್‌, ಇತ್ತೀಚಿನ ತಲೆಮಾರಿನಲ್ಲಿ ಆನಂದ ಕಟ್ಟಿ, ಸೋಮಶೇಖರ ಶಿರಗುಪ್ಪಿ, ರಾಜೇಶ ಕಾಮತ್‌, ಅವಿನಾಶ ವೈದ್ಯ, ರೈಲ್ವೆ ತಂಡದ ನಿತಿನ್‌ ಭಿಲ್ಲೆ, ಅನಂತ ಭಾಗವತ್‌, ಸುರೇಶ ಶಾನಭಾಗ್‌ ಮಿಂಚಿದ್ದರು. ಈಗ ಪವನ್‌ ದೇಶಪಾಂಡೆ, ಪ್ರತೀಕ ಪಾಟೀಲ, ಪರೀಕ್ಷಿತ್‌ ಶೆಟ್ಟಿ ರಾಜ್ಯ ತಂಡಗಳಲ್ಲಿ ಗಮನ ಸೆಳೆಯುತ್ತಿದ್ದಾರೆ.

ಟೇಬಲ್‌ ಟೆನಿಸ್‌ನಲ್ಲಿಯೂ ಧಾರವಾಡ ಜಿಲ್ಲೆ ಸಾಕಷ್ಟು ಹೆಸರು ಮಾಡಿದೆ. ಧಾರವಾಡದ ಕಾಸ್ಮಸ್ ಟೇಬಲ್‌ ಟೆನಿಸ್‌ ಕ್ಲಬ್‌ ಮತ್ತು ಹುಬ್ಬಳ್ಳಿಯ ರೈಲ್ವೆ ತಂಡ ಈ ಭಾಗದಲ್ಲಿ ಖ್ಯಾತಿ ಹೊಂದಿವೆ. ಜಯಶೀಲನ್, ಕರುಣಾಕರನ್‌, ಸುಧೀರ ಗೋಖಲೆ, ಜೆ. ಪುರುಷೋತ್ತಮರಾವ್‌, ಸತೀಶ ಟಗರಪುರ್‌, ರವಿ ಕುಲಕರ್ಣಿ ರಾಷ್ಟ್ರೀಯ ಮಟ್ಟದಲ್ಲಿ ಪೇಢಾ ನಗರಿಯ ಖ್ಯಾತಿ ಎತ್ತಿ ಹಿಡಿದಿದ್ದಾರೆ. ಚಾರ್ಲ್ಸ್‌ ಉಪಾಧ್ಯಾಯ ಅವರು ಟೇಬಲ್‌ ಟೆನಿಸ್‌ನ ಹೆಸರಾಂತ ರೆಫರಿಯಾಗಿದ್ದಾರೆ. ರವಿ ಒಡೆಯರ್‌, ಜೆವೂರ್‌ ಸಾಗರ್‌, ನಂದಾ ದೇಶಪಾಂಡೆ, ರವಿಕುಮಾರ್ ನಾಯಕ್, ಆರತಿ ವಾಸನ್‌, ಸಬಿನಾ ಸನದಿ ಹೀಗೆ ಸಾಕಷ್ಟು ಆಟಗಾರರು ಟಿ.ಟಿ.ಯಲ್ಲಿ ಛಾಪು ಮೂಡಿಸಿದ್ದರು.

ಬ್ಯಾಡ್ಮಿಂಟನ್‌ನಲ್ಲಿ 1945ರ ಸಮಯದಲ್ಲಿ ಅದಂಖಾನ್‌ ಪಠಾಣ್‌, ಘೋಟೆಗಾಳೆಕರ್‌, ಹಳದಿಪುರ್‌, ಜೆ.ಎಸ್‌. ದೇಶಪಾಂಡೆ, ನಂದೂ ನಾಟೇಕರ್ ಹೆಸರು ಮಾಡಿದ್ದರು. ಮಹಿಳಾ ವಿಭಾಗದಲ್ಲಿ ಜೋಸೆಫ್‌ ಸಹೋದರಿಯರು ಗಮನ ಸೆಳೆದಿದ್ದರು. 1930ರ ದಶಕದಲ್ಲಿ ಜಿಲ್ಲೆಯಲ್ಲಿ ಫುಟ್‌ಬಾಲ್‌ ಖ್ಯಾತಿ ಹೊಂದಿತ್ತು ಸರಸ್ವತಿ ಫುಟ್‌ಬಾಲ್‌ ತಂಡ, ಮರ್ಚೆಂಟ್ಸ್ ತಂಡ, ರೈಲ್ವೆ ತಂಡ ಮತ್ತು ಧಾರವಾಡದ ಪೊಲೀಸ್‌ ತಂಡಗಳು ಖ್ಯಾತಿ ಹೊಂದಿದ್ದವು.

ಜೆ.ಎಸ್‌. ಪಾಂಡೆ, ಸುಧೀರ್‌ ಖೋಟ್‌, ರವಿಫಡಕೆ 1980ರ ದಶಕದಲ್ಲಿ ಸಂತೋಷ ಕಾಮತ್‌ ಮತ್ತು ವಿನಯ ಜವಳಿ ಬ್ಯಾಡ್ಮಿಂಟನ್‌ನಲ್ಲಿ ಹೆಸರು ಮಾಡಿದ್ದರು. ಊಬರ್‌ ಕಪ್‌ ಟೂರ್ನಿಯಲ್ಲಿ ಉಮಾಮೂರ್ತಿ ಮತ್ತು ಸುಧಾ ಪದ್ಮಾನಾಭನ್‌ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ಉಳಿದ ಕ್ರೀಡೆಗಳಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಮಾಡಿದ ಸಾಧನೆಯ ತೂಕ ಒಂದಾದರೆ, ಅಥ್ಲೆಟಿಕ್ಸ್‌ನದ್ದೇ ಒಂದು ತೂಕ. 1955ರ ಸಮಯದಲ್ಲಿ ಹುಬ್ಬಳ್ಳಿಯ ಸಿಲಿನ್‌ ಓ. ಕೊನೆಲ್‌ ಡಿಸ್ಕಸ್‌ ಎಸೆತದಲ್ಲಿ ರಾಷ್ಟ್ರೀಯ ಪಟ್ಟದಲ್ಲಿ ಪದಕ ಜಯಿಸಿದ್ದರು. 1980ರಲ್ಲಿ ಹುಬ್ಬಳ್ಳಿ ತಾಲ್ಲೂಕಿನ ಕಡಿಕೊಪ್ಪದ ಲಕ್ಷ್ಮಣ ಹರಿಯಪ್ಪ ಬೆನಕಣ್ಣನವರ್‌ ವಾಸ್ಕೊದಲ್ಲಿ ನಡೆದ ಅಖಿಲ ಭಾರತ ಮ್ಯಾರಥಾನ್‌ನಲ್ಲಿ 46 ಕಿ.ಮೀ. ದೂರವನ್ನು ಮೂರು ಗಂಟೆ 19 ನಿಮಿಷ 50 ಸೆಕೆಂಡ್‌ಗಳಲ್ಲಿ ತಲುಪಿ ಬೆಳ್ಳಿ ಪದಕ ಜಯಿಸಿದ್ದರು. 1990ರಲ್ಲಿ ಕ್ವಾಲಾಲಂಪುರದಲ್ಲಿ ಜರುಗಿದ ಹಿರಿಯರ ಆರನೇ ಏಷ್ಯನ್‌ ಅಥ್ಲೆಟಿಕ್‌ ಕೂಟದಲ್ಲಿ ಧಾರವಾಡದ ಹನುಮವ್ವ ಚುಳಕಿ ಹತ್ತು ಕಿ.ಮೀ. ದೂರದ ನಡುಗೆ ಸ್ಪರ್ಧೆಯನ್ನು ಬರಿಗಾಲಿನಲ್ಲಿ 32 ನಿಮಿಷ 18 ಸೆಕೆಂಡ್‌ಗಳಲ್ಲಿ ಮುಟ್ಟಿದ್ದರು.

ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಯಾದ ಬಳಿಕ ಪ್ರತಿಭೆಗಳ ಹರವು ಹೆಚ್ಚಾಗುತ್ತಲೇ ಹೋಯಿತು. ಕರ್ನಲ್‌ ಕಣಬರಗಿಮಠ, ಮೇಜರ್‌ ವಜನ್‌ದಾರ್‌ ಜವಳಿ ಅವರು 1935ರಿಂದ 1950ರ ವರೆಗೆ ಧಾರವಾಡದಿಂದ ಮುಂಬೈ ವಿಶ್ವವಿದ್ಯಾಲಯ ತಂಡವನ್ನು ಮಣಿಸಿದ್ದರು. ಮಹಿಳಾ ಅಥ್ಲೀಟ್‌ ಸೆಲ್‌ ಒ. ಕೊವೆಲ್‌ 1951–52ರಲ್ಲಿ ಹರ್ಡಲ್ಸ್‌, ಶಾಟ್‌ಪಟ್‌, ಡಿಸ್ಕಸ್‌ ಎಸೆತ, ಜಾವಲಿನ್ ಎಸೆತದ ಸ್ಪರ್ಧೆಗಳಲ್ಲಿ ಒಂದೇ ಕೂಟದಲ್ಲಿ ಒಂಬತ್ತು ಪದಕಗಳನ್ನು ಗೆದ್ದ ಹೆಗ್ಗಳಿಕೆ ಹೊಂದಿದ್ದಾರೆ. ಧಾರವಾಡದಲ್ಲಿ 1928ರಲ್ಲಿ ಆರಂಭವಾದ ಮಲ್ಲಸಜ್ಜನ ವ್ಯಾಯಾಮ ಶಾಲೆ ಕೂಡ ಹೆಸರುವಾಸಿಯಾಗಿದೆ.

ಆದರೆ, ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಸೌಲಭ್ಯಗಳ ಕೊರತೆಯಿಂದ ಸ್ಥಳೀಯರು ಬೇರೆ ಕಡೆ ಹೋಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT