ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಹಾವಳಿ | ಮೈ ‘ಸೋಂಕು’ವ ಆತಂಕ; ಪ್ರಯಾಣದ ಭಯ

ಕ್ರೀಡಾ ಜಗತ್ತಿನ ಭವಿಷ್ಯವೇನು?: ಪ್ರಮುಖರಿಗೆ ಸಹಜ ಸ್ಥಿತಿಯ ಭರವಸೆ
Last Updated 26 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ಕ್ರೀಡಾಂಗಣಗಳಲ್ಲಿ ಮತ್ತೆ ಅಭಿಮಾನಿಗಳ ಕ್ರೀಡಾಪ್ರೇಮ ಉ‌ಕ್ಕುವುದೇ..? ಮುಂದಿನ ದಿನಗಳಲ್ಲಿ ಅಭ್ಯಾಸ ನಿರಾತಂಕವಾಗಿ ಸಾಗುವುದೇ..? ಅಂತರ ಕಾಯ್ದುಕೊಂಡೇ ಆಡಬೇಕು ಎಂದಾದರೆ, ಮೈಮುಟ್ಟಿ ಆಡುವ ಆಟದಲ್ಲಿ ತೊಡಗಿಸಿಕೊಳ್ಳುವುದಾದರೂ ಹೇಗೆ...? ಕ್ರೀಡಾಲೋಕ ಮತ್ತೆ ಸಹಜ ಸ್ಥಿತಿಗೆ ಮರಳುವುದೇ...?

ಕೊರೊನಾ ಹಾವಳಿಯಿಂದಾಗಿ ಜಗತ್ತಿನಾದ್ಯಂತ ಕ್ರೀಡಾ ಚಟುವಟಿಕೆ ಸ್ಥಗಿತಗೊಂಡು ಬಹಳ ದಿನಗಳು ಕಳೆದವು. ಲಾಕ್‌ಡೌನ್‌ನಿಂದಾಗಿ ಒಂದು ತಿಂಗಳಿಂದ ಗೃಹಬಂಧನದಲ್ಲಿರುವ ಭಾರತದ ಪ್ರಮುಖ ಕ್ರೀಡಾಪಟುಗಳ ಪೈಕಿ ಅನೇಕರು ಕ್ರೀಡಾಲೋಕದ ಭವಿಷ್ಯದ ಬಗ್ಗೆ ಭರವಸೆಯಲ್ಲಿದ್ದರೆ, ಕೆಲವರು ಮುಂದಿನ ದಿನಗಳು ಕಠಿಣವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಗತ್ತು ಭಾರಿ ಸವಾಲನ್ನು ಎದುರಿಸುತ್ತಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ವೇಗದ ಬೌಲರ್‌ಗಳು ಸ್ವಲ್ಪ ಕಾಲವಾದರೂ ಚೆಂಡಿಗೆ ಎಂಜಲು ತಾಗಿಸುವುದನ್ನು ಬಿಡಬೇಕಾಗಿದೆ. ಸಂಭ್ರಮಾಚರಣೆಯ ಸಂದರ್ಭದಲ್ಲಿ ಅಪ್ಪಿಕೊಳ್ಳುವುದು, ಹೈ–ಫೈವ್‌ (ಕೈ ಮೇಲೆತ್ತಿ ಸಹ ಆಟಗಾರ ಕೈಗೆ ಬಡಿಯುವುದು) ಮಾಡುವುದು ಮುಂತಾದವುಗಳಿಂದ ಕೆಲ ಕಾಲ ದೂರ ಇರಬೇಕಾಗಿ ಬಂದೀತು ಎಂದು ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಕ್ರೀಡೆಯು ಜನರನ್ನು ಒಗ್ಗೂಡಿಸುವ ಪ್ರಬಲ ಮಾಧ್ಯಮ ನಿಜ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕ್ರೀಡಾ ಚಟುವಟಿಕೆ ಪುನರಾರಂಭಗೊಂಡ ನಂತರವೂ ಕೆಲವು ಶಿಸ್ತನ್ನು ಪಾಲಿಸಬೇಕಾದ ಅಗತ್ಯವಿದೆ. ಜನರು ಆರೋಗ್ಯದ ಬಗ್ಗೆ ಹೆಚ್ಚು ಈಗ ಹೆಚ್ಚು ಕಾಳಜಿ ಹೊಂದಿರುವುದರಿಂದ ಎಚ್ಚರಿಕೆಯಿಂದ ಇರುವರು ಎಂಬ ಭರವಸೆ ಇದೆ. ಫಿಟ್‌ನೆಸ್‌ಗಾಗಿ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಇನ್ನೂ ಹೆಚ್ಚುವ ನಿರೀಕ್ಷೆ ಇದೆ ಎಂಬುದು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಶೂಟರ್ ಅಭಿನವ್ ಬಿಂದ್ರಾ ಅವರ ಅಭಿಮತ.

ಒಲಿಂಪಿಕ್ಸ್‌ನಲ್ಲಿ ಪುರುಷರ ವಿಭಾಗದ ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿಕೊಟ್ಟಿರುವ ವಿಜೇಂದರ್ ಸಿಂಗ್ ಪ್ರಕಾರ ಕ್ರೀಡಾ ಜಗತ್ತು ಸಹಜ ಸ್ಥಿತಿಗೆ ಮರಳಲು ದೀರ್ಘ ಕಾಲ ಬೇಕು. ಆದರೆ ಭಾರತದ ಸಂದರ್ಭದಲ್ಲಿ ಏನನ್ನೂ ಹೇಳುವಂತಿಲ್ಲ. ಇಷ್ಟು ದಿನ ಮನೆಯ ಒಳಗೆ ಕುಳಿತ ಕ್ರೀಡಾಭಿಮಾನಿಗಳು ಅವಕಾಶ ಸಿಗುತ್ತಿದ್ಧಂತೆ ಅಂಗಣದತ್ತ ಧಾವಿಸಲಿದ್ದಾರೆ.

ಚೀನಾ, ಕೊರಿಯಾ ಮತ್ತು ಕೆಲವು ಯುರೋಪ್ ರಾಷ್ಟ್ರಗಳಿಗೆ ತೆರಳುವ ಸಂದರ್ಭ ಬಂದರೆ ಕ್ರೀಡಾಪಟುಗಳು ಆತಂಕಕ್ಕೆ ಒಳಗಾಗುವ ಸಾಧ್ಯತೆ ಇದೆ. ಅಂತರ ಕಾಯ್ದುಕೊಂಡು ಪ್ರಯಾಣ ಬೆಳೆಸುವುದು ಮತ್ತು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ದೊಡ್ಡ ಸವಾಲೇ ಸರಿ. ಇದನ್ನು ಕ್ರೀಡಾಲೋಕ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದುನೋಡಬೇಕಷ್ಟೇ ಎಂದು ಹೇಳಿದವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದ ಬ್ಯಾಡ್ಮಿಂಟನ್ ಪಟು ಬಿ.ಸಾಯಿ ಪ್ರಣೀತ್.

ವಿಮಾನ ಪ್ರಯಾಣದ ವೇಳೆ ಎಚ್ಚರಿಕೆ: ವಿಮಾನಯಾನದ ವೇಳೆ ವೈರಸ್ ಹರಡುವ ಸಾಧ್ಯತೆ ಹೆಚ್ಚು. ಆದ್ದರಿಂದ ನಾನಂತೂ ವಿಮಾನದಲ್ಲಿ ಅತ್ಯಂತ ಎಚ್ಚರಿಕೆಯಿಂದ ಪ್ರಯಾಣಿಸುವೆ. ಜಗತ್ತು ಸಹಜ ಸ್ಥಿತಿಗೆ ಬರಲಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಅತಿ ಜಾಗರೂಕತೆ ವಹಿಸಬೇಕಾದ ಅಗತ್ಯವಿದೆ ಎಂದು ಅನುಭವಿ ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿಣ್ಣಪ್ಪ ಹೇಳಿದರು.

ಕ್ರೀಡಾಜಗತ್ತು ಸಹಜ ಸ್ಥಿತಿಗೆ ಮರಳಿದ ಅಂತರ ಕಾಯ್ದುಕೊಳ್ಳುವುದಕ್ಕೆ ಹೆಚ್ಚಿನ ಒತ್ತು ನೀಡಬೇಕಾದೀತು. ನೇರ ಸಂಪರ್ಕ ಇರುವ ಕುಸ್ತಿ, ಬಾಕ್ಸಿಂಗ್ ಮತ್ತು ಆಗೊಮ್ಮೆ ಈಗೊಮ್ಮೆ ಸಂಪರ್ಕ ಮಾಡಬೇಕಾಗಿಬರುವ ಹಾಕಿ, ಫುಟ್‌ಬಾಲ್‌ನಂಥ ಕ್ರೀಡೆಯಲ್ಲಿ ಇದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು ಎಂದು ಭಾರತ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT