ಸೋಮವಾರ, ಸೆಪ್ಟೆಂಬರ್ 20, 2021
20 °C

ಕ್ರೀಡಾ ಸಂಸ್ಥೆಗಳಿಗೆ ಮಾನ್ಯತೆ: ಸಚಿವಾಲಯಕ್ಕೆ ಹೊಸ ಹುಮ್ಮಸ್ಸು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕ್ರೀಡಾ ಸಂಸ್ಥೆಗಳಿಗೆ ಮಾನ್ಯತೆ ನೀಡಲು ದೆಹಲಿ ನ್ಯಾಯಾಲಯದ ಅನುಮತಿ ಕಡ್ಡಾಯವಲ್ಲ ಎಂಬ ಸುಪ್ರೀಂ ಕೋರ್ಟ್‌ನ ತೀರ್ಪು ಗುರುವಾರ ಹೊರಬೀಳುತ್ತಿದ್ದಂತೆ ಮಾನ್ಯತೆಗೆ ಸಂಬಂಧಿಸಿ ಕೇಂದ್ರ ಕ್ರೀಡಾ ಸಚಿವಾಲಯ ಹೊಸ ಹುಮ್ಮಸ್ಸಿನೊಂದಿಗೆ ಕಾರ್ಯಪ್ರವೃತ್ತವಾಗಿದೆ.

ವಕೀಲ ರಾಹುಲ್ ಮೆಹ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ 2010ರಲ್ಲಿ ತೀರ್ಪು ನೀಡಿದ್ದ ಹೈಕೋರ್ಟ್‌ ತನ್ನ ಗಮನಕ್ಕೆ ತರದೆ ಅಥವಾ ಅನುಮತಿ ಪಡೆಯದೆ ಕ್ರೀಡಾ ಸಂಸ್ಥೆಗಳಿಗೆ ಮಾನ್ಯತೆ ನೀಡುವಂತಿಲ್ಲ ಎಂದು ಸೂಚಿಸಿತ್ತು.

ರಾಷ್ಟ್ರೀಯ ಕ್ರೀಡಾ ನೀತಿಗೆ ಬದ್ಧವಾಗಿ ನಡೆದುಕೊಳ್ಳದ ಮತ್ತು ಸಮರ್ಪಕವಾಗಿ ಕಾರ್ಯನಿರ್ವಹಿಸದ ಸಂಸ್ಥೆಗಳಿಗೆ ಮಾನ್ಯತೆ ನೀಡುವುದನ್ನು ತಡೆಯಲು ಕ್ರೀಡಾ ಸಚಿವಾಲಯ ಮತ್ತು ಐಒಎಗೆ ಮಾರ್ಗದರ್ಶನ ನೀಡುವಂತೆ ರಾಹುಲ್ ಮೆಹ್ರಾ ಕೋರಿದ್ದರು.

ತೀರ್ಪು ಮರುಪರಿಶೀಲಿಸಬೇಕು ಎಂದು ಕೋರಿ ಕ್ರೀಡಾ ಸಚಿವಾಲಯ ಆಗಸ್ಟ್ ಎಳರಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಇದನ್ನು ತಿರಸ್ಕರಿಸಿದ್ದ ನ್ಯಾಯಾಲಯ ರಾಷ್ಟ್ರೀಯ ಕ್ರೀಡಾ ನೀತಿ ಜಾರಿಗೆ ಸಂಬಂಧಿಸಿದ ವರದಿ ನೀಡುವಂತೆ ಸೂಚಿಸಿತ್ತು. ಇದರ ಹಿನ್ನೆಲೆಯಲ್ಲಿ ಸಚಿವಾಲಯವು ಎಲ್ಲ ಸಂಸ್ಥೆಗಳಿಗೆ ಪ್ರಶ್ನಾವಳಿಗಳನ್ನು ಕಳುಹಿಸಿ ‍ಪದಾಧಿಕಾರಿಗಳ ವಯಸ್ಸು ಮತ್ತು ಅವಧಿಗೆ ಸಂಬಂಧಿಸಿ ಮಾಹಿತಿ ನೀಡುವಂತೆ ಸೂಚಿಸಿತ್ತು.

ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಕ್ರೀಡಾ ಸಚಿವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಕ್ರೀಡಾ ಸಚಿವಾಲಯ ಮತ್ತು ಭಾರತ ಒಲಿಂಪಿಕ್ ಸಂಸ್ಥೆಯ ಪರವಾಗಿ ತೀರ್ಪು ನೀಡಿದೆ. 

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ, ಇಂದು ಮಲ್ಹೋತ್ರಾ ಮತ್ತು ಕೆ.ಎಂ.ಜೋಸೆಫ್‌ ಅವರನ್ನು ಒಳಗೊಂಡ ಪೀಠವು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿತು. ಮಾನ್ಯತೆ ಸಿಗದೇ ಪರದಾಡುತ್ತಿರುವ ಕ್ರೀಡಾ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಬಹುದು ಎಂದೂ ಪೀಠ ಸಲಹೆ ನೀಡಿತು.

‘ಒಲಿಂಪಿಕ್ಸ್‌ಗೆ ಸಿದ್ಧವಾಗುತ್ತಿರುವ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಕ್ರೀಡಾ ಸಂಸ್ಥೆಗಳು ಕಾರ್ಯನಿರ್ವಹಿಸುವುದಕ್ಕೆ ಸುಪ್ರಿಂ ಕೋರ್ಟ್‌ನ ತೀರ್ಪು ಸಹಕಾರಿಯಾಗಿದೆ. ಆದರೆ ನಿಯಮಾವಳಿಗಳ ಪ್ರಕಾರ, ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು. ಅದಕ್ಕೆ ಸಂಬಂಧಿಸಿ ಸಚಿವಾಲಯ ಕಾರ್ಯಪ್ರವೃತ್ತವಾಗಿದ್ದು ಮುಂದಿನ ವಾರದ ಒಳಗೆ ಇದರ ರೂಪುರೇಷೆ ಸಿದ್ಧವಾಗಲಿದೆ’ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು