ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೋಟ–2021: ಕರಾಳತೆ ಮರೆಸಿದ ಚಿನ್ನದ ಹೊಳಪು

Last Updated 31 ಡಿಸೆಂಬರ್ 2021, 4:15 IST
ಅಕ್ಷರ ಗಾತ್ರ

2021 ಭಾರತದ ಕ್ರೀಡಾರಂಗಕ್ಕೆ ಅತಿ ಹೆಚ್ಚು ಯಶಸ್ಸು ತಂದುಕೊಟ್ಟ ವರ್ಷ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಏಳು ಪದಕ, ಪ್ಯಾರಾಲಿಂಪಿಕ್ಸ್‌ನಲ್ಲಿ ದಿಗ್ವಿಜಯ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಜಯಭೇರಿ, ಅಂತರರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಪದಕ ಬೇಟೆ... ಜೊತೆಗೆ ಒಂದಿಷ್ಟು ವಿವಾದ, ಚರ್ಚೆಗಳೂ ಸೇರಿದವು.

***

ಆಗಸ್ಟ್ ಏಳು..

2021ನೇ ಇಸವಿಯ ಕರಾಳ ನೆನಪುಗಳೆಲ್ಲವನ್ನೂ ಮರೆಸಿ ಹರ್ಷದ ಹೊನಲು ಉಕ್ಕಿದ ದಿನವದು. ಅಂದು ಟೋಕಿಯೊದ ಒಲಿಂಪಿಕ್ಸ್‌ ಅಂಗಳದಲ್ಲಿ ಭಾರತದ ನೀರಜ್ ಚೋಪ್ರಾ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗಳಿಸಿದ್ದೇ ಸಂಭ್ರಮ ಗರಿಗೆದರಲು ಕಾರಣವಾಯಿತು. ಭಾರತದ ಟ್ರ್ಯಾಕ್‌ ಮತ್ತು ಫೀಲ್ಡ್‌ ಇತಿಹಾಸದಲ್ಲಿ ಒಲಿದ ಮೊತ್ತಮೊದಲ ಒಲಿಂಪಿಕ್ಸ್‌ ಚಿನ್ನ ಅದು.

ಕೋವಿಡ್‌ ಎರಡನೇ ಅಲೆಯಲ್ಲಿ ತತ್ತರಿಸಿದ್ದ ಮನಗಳಿಗೆ ನೀರಜ್ ಸಾಧನೆ ತಂಪೆರೆದಿದ್ದು ಸುಳ್ಳಲ್ಲ. ಅವರಷ್ಟೇ ಅಲ್ಲ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಭಾರತದ ಪ್ರತಿ ಅಥ್ಲೀಟ್ ಕೂಡ ಈ ಬಾರಿ ದೇಶವಾಸಿಗಳಲ್ಲಿ ಹೊಸ ಭರವಸೆ ತುಂಬಿದರು. ಒಟ್ಟು ಏಳು ಪದಕ ಗೆದ್ದ ಭಾರತ ತಂಡವು ಶ್ರೇಷ್ಠ ಸಾಧನೆ ಮಾಡಿತು. ಕಳೆದೆರಡು ವರ್ಷಗಳಿಂದಕೊರೊನಾ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಸೂಕ್ತ ಅಭ್ಯಾಸ ಮಾಡಲಾಗದಿದ್ದರೂ ಇಂತಹದೊಂದು ಸಾಧನೆ ಮೂಡಿಬಂದಿದ್ದು ಆಶಾದಾಯಕ ಬೆಳವಣಿಗೆ.

ಮಹಿಳೆಯರ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಕೊರಳಿಗೇರಿಸಿಕೊಂಡವರು ಪಿ.ವಿ. ಸಿಂಧು. ಸತತ ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದ ಸಾಧಕಿ ಅವರು. ಕೂಟದ ಮೊದಲ ದಿನವೇ ಮಹಿಳೆಯರ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಮಣಿಪುರದ ಕಣ್ಮಣಿ ಮೀರಾಬಾಯಿ ಚಾನು, ಬಡತನ, ಸೌಲಭ್ಯಗಳ ಕೊರತೆಗಳಿದ್ದರೂ ಛಲದಿಂದ ಸಾಧನೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟರು. ತಮ್ಮ ಹಳ್ಳಿಯಿಂದ ಪಟ್ಟಣಕ್ಕೆ ಹೋಗಿ ಅಭ್ಯಾಸ ಮಾಡಲು ನೆರವಾಗಿದ್ದ ಲಾರಿ ಚಾಲಕರನ್ನು ಕರೆದು ಉಡುಗೊರೆ, ಔತಣ ನೀಡಿ ಕೃತಜ್ಞತೆ ಸಲ್ಲಿಸಿದ ಅವರ ನಡೆ ಜನಮನ ಗೆದ್ದಿತು.

ಪಿ.ವಿ.ಸಿಂಧು
ಪಿ.ವಿ.ಸಿಂಧು

ಅಸ್ಸಾಂ ಹುಡುಗಿ ಲವ್ಲಿನಾ ಬೊರ್ಗೊಹೈನ್ ಬಾಕ್ಸಿಂಗ್‌ನಲ್ಲಿ ಕಂಚಿನ ಪದಕ ಗೆದ್ದು ರಾತ್ರಿ ಬೆಳಗಾಗುವುದರೊಳಗೆ ತಾರೆಯಾಗಿ ಬೆಳಗಿದರು. ಪುರುಷರ ಕುಸ್ತಿಯ 57 ಕೆ.ಜಿ. ವಿಭಾಗದಲ್ಲಿ ರವಿಕುಮಾರ್ ದಹಿಯಾ ಬೆಳ್ಳಿ, 65 ಕೆ.ಜಿ. ವಿಭಾಗದಲ್ಲಿ ಬಜರಂಗ್ ಪೂನಿಯಾ ಕಂಚಿನ ಪದಕ ಕೊರಳಿಗೇರಿಸಿಕೊಂಡರು.

41 ವರ್ಷಗಳಿಂದ ಪದಕ ಬರ ಎದುರಿಸಿದ್ದ ಭಾರತದ ಹಾಕಿ ತಂಡವು ಈ ಬಾರಿ ಗುರಿ ತಪ್ಪಲಿಲ್ಲ. ಮನಪ್ರೀತ್ ಸಿಂಗ್ ನಾಯಕತ್ವದ ಬಳಗವು ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಯಿತು. ಮಹಿಳಾ ವಿಭಾಗದಲ್ಲಿ ‘ಕಪ್ಪುಕುದುರೆ’ಯಾಗಿ ಕಣಕ್ಕಿಳಿದಿದ್ದ ರಾಣಿ ರಾಂಪಾಲ್ ಬಳಗವು ಕೂದಲೆಳೆಯ ಅಂತರದಲ್ಲಿ ಪದಕ ತಪ್ಪಿಸಿಕೊಂಡಿತು. ಆದರೆ, ಈ ಹುಡುಗಿಯರು ಆಡಿದ ರೀತಿಗೆ ಜಗವೇ ನಿಬ್ಬೆರಗಾಯಿತು. ವಿಶ್ವದ ಉದ್ದಗಲಕ್ಕೂ ಪ್ರಶಂಸೆಯ ಸುರಿಮಳೆಯಾಯಿತು. ಮಹಿಳಾ ಹಾಕಿಯ ಹೊಸ ಪರ್ವ ಆರಂಭವಾಯಿತು.

ಈ ಒಲಿಂಪಿಕ್ಸ್‌ನ ಮತ್ತೊಂದು ವಿಶೇಷವೆಂದರೆ, ಗಾಲ್ಫ್ ಪಂದ್ಯವನ್ನು ನೋಡಲು ದೇಶದ ಬಹಳಷ್ಟು ಕ್ರೀಡಾಪ್ರೇಮಿಗಳು ಬೆಳಗಿನ ಜಾವವೇ ಎದ್ದು ಟಿವಿ ಮುಂದೆ ಕುಳಿತಿದ್ದು! ಅದಕ್ಕೆ ಕಾರಣರಾಗಿದ್ದು ಬೆಂಗಳೂರಿನ ಅದಿತಿ ಅಶೋಕ್. ಮಹಿಳೆಯರ ಗಾಲ್ಫ್‌ನಲ್ಲಿ ಈ ಆಟಗಾರ್ತಿಯು ಅಲ್ಪ ಅಂತರದಲ್ಲಿ ಪದಕ ಕೈತಪ್ಪಿಸಿಕೊಂಡರು. ನಾಲ್ಕನೇ ಸ್ಥಾನ ಪಡೆದರು. ಬೆಂಗಳೂರಿನ ಶ್ರೀಹರಿ ನಟರಾಜ್ ಈಜಿನಲ್ಲಿಗಮನ ಸೆಳೆದರು.ಫೆನ್ಸಿಂಗ್‌ನಲ್ಲಿ ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದ ಭವಾನಿದೇವಿ, ಸೇಲಿಂಗ್‌ನಲ್ಲಿ ಅರ್ಹತೆ ಗಿಟ್ಟಿಸಿದ ನೇತ್ರಾ ಕುಮನನ್, ಈಕ್ವೆಸ್ಟ್ರಿಯನ್‌ನಲ್ಲಿ ಭರವಸೆ ಮೂಡಿಸಿದ ಫವಾದ್ ಮಿರ್ಜಾ ಮತ್ತಿತರರು ಗಮನ ಸೆಳೆದರು.

ಮೀರಾಬಾಯಿ ಚಾನು
ಮೀರಾಬಾಯಿ ಚಾನು

ಒಲಿಂಪಿಕ್ಸ್ ಬಿಟ್ಟರೆ, ನೈರೋಬಿಯಲ್ಲಿ ನಡೆದ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಭಾರತದ ಶೈಲಿ ಸಿಂಗ್ ಮತ್ತು ಅಮಿತ್ ಕ್ರಮವಾಗಿ ಲಾಂಗ್ ಜಂಪ್ ಹಾಗೂ 10 ಸಾವಿರ ಮೀಟರ್ ನಡಿಗೆಯಲ್ಲಿ ಬೆಳ್ಳಿ ಗೆದ್ದರು. ಕನ್ನಡತಿ ಪ್ರಿಯಾ ಮೋಹನ್ ಅವರಿದ್ದ ತಂಡವು 4X400 ಮೀ ಮಿಶ್ರ ರಿಲೆಯಲ್ಲಿ ಕಂಚು ಜಯಿಸಿತು.

ಕ್ರಿಕೆಟ್‌ ಏರುಮುಖ; ಕೊಹ್ಲಿ ಇಳಿಮುಖ
ಭಾರತದ ಕ್ರಿಕೆಟ್‌ ಕ್ಷೇತ್ರ ಎರಡು ವೈರುಧ್ಯಗಳಿಗೆ ಸಾಕ್ಷಿಯಾದ ವರ್ಷ ಇದು. ಆಸ್ಟ್ರೇಲಿಯಾ, ಇಂಗ್ಲೆಂಡ್‌ನಲ್ಲಿ ಟೆಸ್ಟ್ ವಿಜಯ ಸಾಧಿಸಿದ್ದು ಹೆಗ್ಗಳಿಕೆ. ಆದರೆ, ನಾಯಕ ವಿರಾಟ್ ಕೊಹ್ಲಿ ವೃತ್ತಿ ಜೀವನವು ಇಳಿಜಾರಿನಲ್ಲಿ ಸಾಗಿದ್ದು ಕೂಡ ವಿಪರ್ಯಾಸ. ಟಿ20 ವಿಶ್ವಕಪ್ ನಂತರ ಟಿ20 ಕ್ರಿಕೆಟ್ ತಂಡದ ನಾಯಕತ್ವವನ್ನು ಅವರು ಬಿಟ್ಟುಕೊಟ್ಟರು. ಏಕದಿನ ತಂಡದ ನಾಯಕತ್ವದಿಂದ ಬಿಸಿಸಿಐ ಅವರನ್ನು ಕೆಳಗಿಳಿಸಿತು. ಇದೀಗ ಅವರು ಟೆಸ್ಟ್ ತಂಡಕ್ಕೆ ಮಾತ್ರ ನಾಯಕರಾಗಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್ ತಂಡಕ್ಕೆ ರೋಹಿತ್ ಶರ್ಮಾ ನಾಯಕರಾಗಿದ್ದಾರೆ.

ಈ ವರ್ಷದ ಮೊದಲ ತಿಂಗಳಲ್ಲಿಯೇ ಬ್ರಿಸ್ಬೇನ್‌ನ ಗಾಬಾದಲ್ಲಿ ಐತಿಹಾಸಿಕ ಟೆಸ್ಟ್ ವಿಜಯ ಸಾಧಿಸಿದ ಭಾರತ ಸಂಭ್ರಮಿಸಿತು. ಆಸ್ಟ್ರೇಲಿಯಾಕ್ಕೆ ಅದರ ನೆಲದಲ್ಲಿಯೇ ಸರಣಿ ಸೋಲುಣಿಸಿತ್ತು. ಆದರೆ ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರ ಅನುಪಸ್ಥಿತಿ ಇತ್ತು. ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ರಿಷಭ್ ಪಂತ್ ಅವರಂತಹ ಯುವ ಆಟಗಾರರು ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಮಾಡಿದ ಸಾಧನೆ ಅದು.

ಫೆಬ್ರುವರಿಯಲ್ಲಿ ಅಹಮದಾಬಾದ್‌ನಲ್ಲಿ ಉದ್ಘಾಟನೆಗೊಂಡ ಬೃಹತ್ ಕ್ರೀಡಾಂಗಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನಾಮಕರಣ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಯಿತು. ಆದರೆ, ಇದೇ ಅಂಗಳದಲ್ಲಿ ಇಂಗ್ಲೆಂಡ್ ಎದುರಿನ ಟೆಸ್ಟ್‌ನಲ್ಲಿ ಭಾರತ ಭರ್ಜರಿ ಜಯ ಸಾಧಿಸಿ ದಾಖಲೆ ಬರೆಯಿತು.

ಆಸ್ಟ್ರೇಲಿಯಾದಲ್ಲಿ ಗೆದ್ದ ಬಾರ್ಡರ್‌–ಗಾವಸ್ಕರ್ ಟ್ರೋಫಿಯೊಂದಿಗೆ ಭಾರತ ತಂಡದ ಆಟಗಾರರು
ಆಸ್ಟ್ರೇಲಿಯಾದಲ್ಲಿ ಗೆದ್ದ ಬಾರ್ಡರ್‌–ಗಾವಸ್ಕರ್ ಟ್ರೋಫಿಯೊಂದಿಗೆ ಭಾರತ ತಂಡದ ಆಟಗಾರರು

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಭಾರತದಲ್ಲಿಯೇ ಆಯೋಜಿಸಲಾಗಿತ್ತು. ಆದರೆ, ಮೊದಲ ಹಂತದ ಪಂದ್ಯಗಳು ಮುಗಿಯುವಷ್ಟರಲ್ಲಿ ಕೆಲವು ಆಟಗಾರರು ಕೋವಿಡ್‌ಗೆ ತುತ್ತಾದರು. ಅದರಿಂದಾಗಿ ಟೂರ್ನಿಯ ಉಳಿದ ಪಂದ್ಯಗಳನ್ನು ಮುಂದೂಡಲಾಯಿತು.

ಜೂನ್‌ನಲ್ಲಿ ನಡೆದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ಎದುರು ಭಾರತ ನಿರಾಶೆ ಅನುಭವಿಸಿತು. ಕಳೆದ ಅಕ್ಟೋಬರ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಉಳಿದ ಟೂರ್ನಿ ಆಯೋಜನೆಗೊಂಡಿತು. ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಯಿತು. ತದನಂತರದ ಟಿ20 ವಿಶ್ವಕಪ್‌ನಲ್ಲಿ ಭಾರತ ಪಾಕಿಸ್ತಾನದ ಎದುರು ಸೋತಿತು. ವಿಶ್ವಕಪ್ ಮಟ್ಟದ ಟೂರ್ನಿಗಳಲ್ಲಿ ಪಾಕ್ ಎದುರು ಭಾರತ ಅನುಭವಿಸಿದ ಮೊದಲ ಸೋಲಿದು. ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಗೆದ್ದ ಆಸ್ಟ್ರೇಲಿಯಾ ಚಾಂಪಿಯನ್ ಆಯಿತು.

ಭಾರತ ತಂಡದ ಮುಖ್ಯಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕವಾಗಿದ್ದಾರೆ. ಇದೀಗ ತಂಡವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT