ಸೋಮವಾರ, ಜೂನ್ 14, 2021
27 °C

ಟೋಕಿಯೊ ಒಲಿಂಪಿಕ್ಸ್‌: ಭರವಸೆ ಕೈಬಿಡದ ಶ್ರೀಕಾಂತ್

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಗಳಿಸಲು ಅವಕಾಶವಿದ್ದ ಮೂರು ಟೂರ್ನಿಗಳು ರದ್ದಾದ ಕಾರಣ ಭಾರತದ ಕಿದಂಬಿ ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್ ಅವರ ಟೋಕಿಯೊ ಟಿಕೆಟ್ ಕನಸಿಗೆ ಅಡ್ಡಿಯಾಗಿದೆ. ಆದರೂ ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ನ ಅಂತಿಮ ನಿರ್ಧಾರಕ್ಕೆ ಕಾಯುತ್ತಿದ್ದು ಭರವಸೆ ಕಳೆದುಕೊಂಡಿಲ್ಲ ಎಂದು ಶ್ರೀಕಾಂತ್ ತಿಳಿಸಿದ್ದಾರೆ.

ಒಲಿಂಪಿಕ್ಸ್‌ಗೂ ಮೊದಲು ನಡೆಯಬೇಕಾಗಿದ್ದ ಕೊನೆಯ ಸ್ಪರ್ಧೆಯಾದ ಸಿಂಗಪುರ ಓಪನ್‌ ಟೂರ್ನಿಯನ್ನು  ಕೋವಿಡ್ ತಂದೊಡ್ಡಿರುವ ವಿಷಮ ಸ್ಥಿತಿಯಿಂದಾಗಿ ಬುಧವಾರ ರದ್ದುಗೊಳಿಸಲಾಗಿತ್ತು. ಇದನ್ನು ಜೂನ್ ಒಂದರಿಂದ ಆರರ ವರೆಗೆ ನಿಗದಿಪಡಿಸಲಾಗಿತ್ತು. ಇದಕ್ಕೂ ಮೊದಲು ಮಲೇಷ್ಯಾ ಓಪನ್ ಮತ್ತು ಇಂಡಿಯಾ ಓಪನ್ ಟೂರ್ನಿಗಳನ್ನು ರದ್ದುಗೊಳಿಸಲಾಗಿತ್ತು. 

ಸಿಂಗಪುರ ಓಪನ್ ಟೂರ್ನಿಯನ್ನು ರದ್ದುಗೊಳಿಸಿ ಹೊರಡಿಸಿದ್ದ ಪ್ರಕಟಣೆಯಲ್ಲಿ, ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಆಟಗಾರರ ಕುರಿತ ಮಾಹಿತಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿತ್ತು.

‘ಸ್ಪರ್ಧೆಗಳು ನಡೆದಿದ್ದರೆ ನಾನು ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುತ್ತಿದ್ದೆನೋ ಏನೋ. ಆದರೆ ಟೂರ್ನಿಗಳು ನಡೆಯಲೇ ಇಲ್ಲ. ಹೀಗಿರುವಾಗ ಆಟಗಾರರು ಏನು ಮಾಡಲಾಗುತ್ತದೆ? ಆದ್ದರಿಂದ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಮುಖ್ಯವಾಗುತ್ತದೆ. ಅದರ ಆದೇಶಕ್ಕಾಗಿ ಕಾಯುತ್ತಿದ್ದೇನೆ’ ಎಂದು ವಿಶ್ವ ರ‍್ಯಾಂಕಿಂಗ್‌ನಲ್ಲಿ ಈ ಹಿಂದೆ ಮೊದಲ ಸ್ಥಾನ ಗಳಿಸಿದ್ದ ಶ್ರೀಕಾಂತ್ ಹೇಳಿದರು.

ಆಗಸ್ಟ್ ತಿಂಗಳ ವರೆಗೆ ಭಾರತದಲ್ಲೂ ಯಾವುದೇ ಟೂರ್ನಿಗಳು ನಡೆಯುವುದಿಲ್ಲ. ತೆಲಂಗಾಣದಲ್ಲಿ ಈಗ ಲಾಕ್ ಡೌನ್ ಜಾರಿಯಲ್ಲಿದೆ. ಹೀಗಾಗಿ ಸದ್ಯ ಶ್ರೀಕಾಂತ್ ತರಬೇತಿಯಿಂದ ದೂರ ಉಳಿದಿದ್ದಾರೆ. ತರಬೇತಿಗೆ ಅವಕಾಶ ನೀಡುವಂತೆ ಸಂಬಂಧಪಟ್ಟವರನ್ನು ಬ್ಯಾಡ್ಮಿಂಟನ್ ಸಂಸ್ಥೆ ಕೋರಿದ್ದು ಇದಕ್ಕೆ ಫಲ ಸಿಕ್ಕಿದರೆ ಮುಂದಿನ ವಾರ ಅಭ್ಯಾಸ ಕಣಕ್ಕೆ ಇಳಿಯುವುದಾಗಿಯೂ ಅವರು ವಿವರಿಸಿದ್ದಾರೆ.

ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಪಿ.ವಿ.ಸಿಂಧು, ಬಿ.ಸಾಯಿ ಪ್ರಣೀತ್ ಮತ್ತು ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ–ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಕೂಡ ತರಬೇತಿಯಿಂದ ದೂರು ಉಳಿಯಲು ನಿರ್ಧರಿಸಿದ್ದಾರೆ.

‘ಮೂರು ಟೂರ್ನಿಗಳು ರದ್ದಾಗಿರುವುದು ಬೇಸರದ ವಿಷಯ. ಏಳು ವಾರಗಳಿಂದ ತರಬೇತಿ ಪಡೆಯುತ್ತಿದ್ದೆ. ಸದ್ಯ ಟೂರ್ನಿಗಳೇ ಇಲ್ಲ ಎಂದು ಗೊತ್ತಾದ ಮೇಲೆ ವಿಶ್ರಾಂತಿ ಪಡೆದುಕೊಂಡಿದ್ದೇನೆ. ಸ್ಪರ್ಧೆ ಇಲ್ಲದೇ ಇದ್ದರೆ ತರಬೇತಿ ಪಡೆದು ಫಲವೇನು’ ಎಂದು ಪ್ರಶ್ನಿಸಿದ ಪ್ರಣೀತ್ ‘ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವುದರಿಂದ ಮುಂದಿನ ವಾರದಿಂದ ತರಬೇತಿ ಮುಂದುವರಿಸಲಿದ್ದೇನೆ’ ಎಂದರು. 

ಪಿ.ವಿ.ಸಿಂಧು ಕೆಲವು ದಿನಗಳಿಂದ ತುಂಬ ಬೆವರು ಸುರಿಸಿದ್ದಾರೆ. ಹೀಗಾಗಿ ಸದ್ಯ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರ ತಂದೆ ಪಿ.ವಿ.ರಮಣ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು