‘ಶ್ರೀಕಾಂತ್‌, ಪ್ರಣಯ್‌ ಸ್ಥಿರ ಸಾಮರ್ಥ್ಯ ತೋರಬೇಕು’

5

‘ಶ್ರೀಕಾಂತ್‌, ಪ್ರಣಯ್‌ ಸ್ಥಿರ ಸಾಮರ್ಥ್ಯ ತೋರಬೇಕು’

Published:
Updated:
Deccan Herald

ನವದೆಹಲಿ: ‘ಭಾರತದ ಬ್ಯಾಡ್ಮಿಂಟನ್‌ ಆಟಗಾರರಾದ ಕಿದಂಬಿ ಶ್ರೀಕಾಂತ್‌ ಹಾಗೂ ಎಚ್‌. ಎಸ್‌. ಪ್ರಣಯ್‌ ಅವರು ಇತ್ತೀಚಿನ ದಿನಗಳಲ್ಲಿ ಸ್ಥಿರ ಸಾಮರ್ಥ್ಯ ತೊರಲು ವಿಫಲರಾಗುತ್ತಿದ್ದಾರೆ. ಇದನ್ನು ಸರಿಪಡಿಸಿಕೊಳ್ಳಲು ಅವರು ಭಿನ್ನ ತಂತ್ರಗಾರಿಕೆ ಅನುಸರಿಸಬೇಕು’ ಎಂದು ಭಾರತದ ಹಿರಿಯ ಬ್ಯಾಡ್ಮಿಂಟನ್‌ ಕೋಚ್‌ ವಿಮಲ್‌ ಕುಮಾರ್‌ ಹೇಳಿದರು. 

ವಿಮಲ್‌, ಮಾಧ್ಯಮದವರೊಂದಿಗೆ ಭಾನುವಾರ ಮಾತುಕತೆ ನಡೆಸಿದರು.

ಇತ್ತೀಚೆಗೆ ನಡೆದ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಪ್ರೀ ಕ್ವಾರ್ಟರ್‌ ಪಂದ್ಯದಲ್ಲಿ ಶ್ರೀಕಾಂತ್ ಅವರು ಮಲೇಷ್ಯಾದ ಡರೆನ್‌ ಲೀವ್‌ ವಿರುದ್ಧ ಸೋತಿದ್ದರು. ಇದೇ ಘಟ್ಟದ ಪಂದ್ಯದಲ್ಲಿ ಬ್ರೆಜಿಲ್‌ನ ಇಗೊರ್‌ ಕೊಯ್ಲೊ ಎದುರು ಪ್ರಣಯ್‌ ಪರಾಭವಗೊಂಡಿದ್ದರು. 

‘ಈ ಇಬ್ಬರ ಆಟವು ನಿಜಕ್ಕೂ ನಿರಾಸೆ ತಂದಿದೆ. ಸ್ಥಿರ ಸಾಮರ್ಥ್ಯ ತೋರುವುದು ಅವರಿಗೆ ಮುಖ್ಯವಾಗಬೇಕು. ಅದನ್ನು ಸಾಧಿಸಲು ಆಗದಿದ್ದರೆ, ಆಟದಲ್ಲಿ ಭಿನ್ನ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಆಕ್ರಮಣಕಾರಿ ಆಟವಾಡುವ ಇವರಿಗೆ ಎದುರಾಳಿಯ ವೈಫಲ್ಯಗಳನ್ನು ಗ್ರಹಿಸಲು ಸಾಧ್ಯವಾಗಬೇಕು. ಏಷ್ಯನ್‌ ಕ್ರೀಡಾಕೂಟದಲ್ಲಿ ‍ಪದಕ ಗೆಲ್ಲಬೇಕಿದ್ದರೆ ಇದು ಮುಖ್ಯ’ ಎಂದು ವಿಮಲ್‌ ಕುಮಾರ್‌ ಹೇಳಿದರು. 

‘ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮಲೇಷ್ಯಾದ ಲೀ ಚಾಂಗ್‌ ವೀ ಅವರು ಸ್ಪರ್ಧಿಸಿರಲಿಲ್ಲ. ಈ ಅವಕಾಶವನ್ನು ಶ್ರೀಕಾಂತ್‌ ಸರಿಯಾಗಿ ಬಳಸಿಕೊಳ್ಳಲಿಲ್ಲ. ತಮ್ಮ ಆಟದ ಮಾದರಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಅವರಿಗೆ ಇದು ಸೂಕ್ತ ಸಮಯ’ ಎಂದು ಅವರು ಅಭಿಪ್ರಾಯಪಟ್ಟರು. 

‘ಲೀ ಚಾಂಗ್‌ ಹಾಗೂ ಲಿನ್‌ ಡ್ಯಾನ್‌ ಅವರನ್ನು ಬಿಟ್ಟರೆ ಕೆಂಟೊ ಮೊಮೊಟಾ ಅವರು ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೇ ಅವರು ಸ್ಥಿರ ಸಾಮರ್ಥ್ಯ ತೋರುತ್ತಿದ್ದಾರೆ’ ಎಂದು ಅವರು ತಿಳಿಸಿದರು. 

‘ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಪಿ. ವಿ. ಸಿಂಧು ಅವರು ಉತ್ತಮವಾಗಿ ಆಡುತ್ತಿದ್ದಾರೆ. ಬಲಿಷ್ಠ ಎದುರಾಳಿಗಳನ್ನು ಕಟ್ಟಿಹಾಕುವ ಅವರ ಆಟವು ನೋಡಲು ಸೊಗಸಾಗಿರುತ್ತದೆ. ಪದೇ ಪದೇ ಫೈನಲ್‌ ಪಂದ್ಯಗಳಲ್ಲಿ ಸೋತ ಮಾತ್ರಕ್ಕೆ ಅವರು ಕುಗ್ಗಬೇಕಿಲ್ಲ’ ಎಂದೂ ತಿಳಿಸಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !