ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾದಲ್ಲಿ ರಾಜ್ಯಮಟ್ಟದ ‘ಫ್ಲೋರ್ ಬಾಲ್ ಟೂರ್ನಿ’

Last Updated 2 ಡಿಸೆಂಬರ್ 2022, 15:47 IST
ಅಕ್ಷರ ಗಾತ್ರ

ಕುಮಟಾ: ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ‘ಫ್ಲೋರ್ ಬಾಲ್’ ಪಂದ್ಯಾವಳಿಯು ಡಿ.4ರಂದು ಬೆಳಿಗ್ಗೆ 10ಕ್ಕೆ ಪಟ್ಟಣದ ಡಾ.ಎ.ವಿ.ಬಾಳಿಗಾ ವಾಣಿಜ್ಯ ಕಾಲೇಜು ಆವರಣದಲ್ಲಿ ಉದ್ಘಾಟನೆಯಾಗಲಿದೆ.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹನುಮಂತಪ್ಪ ನಿಟ್ಟೂರು, ‘25 ಜಿಲ್ಲೆಗಳಿಂದ 450 ಕ್ರೀಡಾಪಟುಗಳು, 50 ಜನ ತಂಡ ವ್ಯವಸ್ಥಾಪಕರು ಸೇರಿ 500 ಮಂದಿ ಭಾಗವಹಿಸಲಿದ್ದಾರೆ’ ಎಂದರು.

‘ಫ್ಲೋರ್ ಬಾಲ್ ಹೊಸ ಕ್ರೀಡೆಯಾಗಿದೆ. ಅದನ್ನು ಗ್ರಾಮೀಣ ಭಾಗದಲ್ಲಿ ಉತ್ತೇಜಿಸಲು ಇಲ್ಲಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ರಾಜ್ಯ ಫ್ಲೋರ್ ಬಾಲ್ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ನಾಯ್ಕ ಮಾತನಾಡಿ, ‘ತಂಡದಲ್ಲಿ ಒಟ್ಟು 15 ಜನ ಆಟಗಾರರಿರುವ ಈ ಕ್ರೀಡೆಯನ್ನು, ಒಳಾಂಗಣ ಹಾಗೂ ಹೊರಾಂಗಣ ಮೈದಾನದಲ್ಲೂ ಆಡಬಹುದಾಗಿದೆ. ಪಂದ್ಯಾವಳಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಪಂದ್ಯಾವಳಿಗೆ ಬರುವ ವಿದ್ಯಾರ್ಥಿಗಳಿಗೆ ಪಟ್ಟಣದ ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ನೆಲ್ಲಿಕೇರಿ ಕಾಲೇಜು ಹಾಗೂ ವಿದ್ಯಾರ್ಥಿನಿಯರಿಗೆ ನಿರ್ಮಲಾ ಕಾನ್ವೆಂಟ್ ಶಿಕ್ಷಣ ಸಂಸ್ಥೆಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.

‘ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆ, ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘ, ಕಾರವಾರ ಹಾಗೂ ಹೊನ್ನಾವರ ತಾಲ್ಲೂಕುಗಳ ಪದವಿಪೂರ್ವ ಕಾಲೇಜುಗಳ ಸಂಯುಕ್ತ ಅಶ್ರಯದಲ್ಲಿ ಪಂದ್ಯಾವಳಿ ನಡೆಯಲಿದೆ’ ಎಂದು ತಿಳಿಸಿದರು.

ಪ್ರಾಚಾರ್ಯರಾದ ಎಸ್.ವಿ.ಶೇಣ್ವಿ, ಎಂ.ಎಚ್.ಭಟ್ಟ, ಉಪನ್ಯಾಸಕರಾದ ಕಿರಣ ಗಾಂವ್ಕರ್, ಹೇಮಾ ಪೈ ಇದ್ದರು.

ಕ್ರೀಡೆಯ ಸ್ವರೂಪ ಹೀಗಿದೆ:‘ಫ್ಲೋರ್ ಬಾಲ್’ ಕ್ರೀಡೆಯನ್ನು ಹಾಕಿಯ ಮಾದರಿಯಲ್ಲೇ ಆಡಲಾಗುತ್ತದೆ. ಸಾಮಾನ್ಯವಾಗಿ ಒಂದು ತಂಡದಲ್ಲಿ ಗೋಲ್ ಕೀಪರ್ ಸೇರಿದಂತೆ ಒಟ್ಟು ಏಳು ಆಟಗಾರರು ಇರುತ್ತಾರೆ.

ಪ್ಲಾಸ್ಟಿಕ್‌ನಿಂದ ಮಾಡಿದ ಬ್ಯಾಟ್‌ಗಳು ಮತ್ತು ‍ಪ್ಲಾಸ್ಟಿಕ್‌ನಿಂದ ತಯಾರಿಸಿದ, ರಂಧ್ರಗಳಿರುವ ಚೆಂಡನ್ನು ಆಟದಲ್ಲಿ ಬಳಸಲಾಗುತ್ತದೆ. ತಲಾ 20 ನಿಮಿಷಗಳ ಮೂರು ಅವಧಿಗಳಲ್ಲಿ ಪಂದ್ಯ ನಡೆಯುತ್ತದೆ.

ಸ್ವೀಡನ್ ದೇಶದಲ್ಲಿ 1960ರ ಸುಮಾರಿಗೆ ಈ ಕ್ರೀಡೆಯನ್ನು ಮೊದಲ ಬಾರಿಗೆ ಅಭಿವೃದ್ಧಿ ಪಡಿಸಲಾಯಿತು. ಮೂಲ ನಿಯಮಗಳನ್ನು 1979ರಲ್ಲಿ ರೂಪಿಸಲಾಯಿತು. 1981ರಲ್ಲಿ ಅಧಿಕೃತವಾಗಿ ನಿಯಮಗಳನ್ನು ಅನ್ವಯಿಸಲಾಯಿತು.

ಪ್ರಸ್ತುತ ಅಂತರರಾಷ್ಟ್ರೀಯ ಫ್ಲೋರ್‌ಬಾಲ್ ಒಕ್ಕೂಟದ (ಐ.ಎಫ್.ಎಫ್) ಮೂಲಕ ಅಂತರರಾಷ್ಟ್ರೀಯ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT