ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾಲಿಂಪಿಕ್ಸ್‌ ಸೈಕ್ಲಿಂಗ್‌: ದಾಖಲೆಯತ್ತ ಸಾರಾ, ಡಯಾಸ್ ಹೆಜ್ಜೆ

ವೈಯಕ್ತಿಕ ಸಾಧನೆ ಉತ್ತಮ‍ಪಡಿಸಿಕೊಂಡ ಆಸ್ಟ್ರೇಲಿಯಾ ಸೈಕ್ಲಿಸ್ಟ್‌ ಪೀಜ್ ಗ್ರೆಕೊ
Last Updated 25 ಆಗಸ್ಟ್ 2021, 15:42 IST
ಅಕ್ಷರ ಗಾತ್ರ

ಟೋಕಿಯೊ: ಹೀಟ್ಸ್‌ನಲ್ಲಿ ವಿಶ್ವ ದಾಖಲೆ ಮುರಿದ ಬ್ರಿಟನ್‌ನ ಸಾರಾ ಸ್ಟೋರಿ ಅವರು ಪ್ಯಾರಾಲಿಂಪಿಕ್ಸ್‌ನ ಸೈಕ್ಲಿಂಗ್‌ನಲ್ಲಿ ದಾಖಲೆಯ ಚಿನ್ನ ಗಳಿಕೆಯತ್ತ ಹೆಜ್ಜೆ ಹಾಕಿದ್ದಾರೆ. ಕೂಟದ ಸ್ಪರ್ಧೆಗಳು ಆರಂಭಗೊಂಡ ಬುಧವಾರ ಈಜುಕೊಳ ಮತ್ತು ಸೈಕ್ಲಿಂಗ್ ಟ್ರ್ಯಾಕ್‌ನಲ್ಲಿ ವಿಶ್ವ ದಾಖಲೆ ಹಾಗೂ ಪ್ಯಾರಾಲಿಂಪಿಕ್ ದಾಖಲೆಗಳು ಮುರಿದುಬಿದ್ದವು.

ಸಿ–5 ವಿಭಾಗದ 3,000 ಮೀಟರ್ಸ್ ವೈಯಕ್ತಿಕ ಪರ್ಸ್ಯೂಟ್‌ನಲ್ಲಿ ಫೈನಲ್ ಪ್ರವೇಶಿಸಿದ ಅವರು 15ನೇ ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಚಿನ್ನ ಗೆದ್ದ ತಮ್ಮದೇ ದೇಶದ ಮೈಕಿ ಕೆನಿ ಅವರ ದಾಖಲೆಯತ್ತ ದಾಪುಗಾಲು ಹಾಕಿದ್ದಾರೆ. ಮೈಕ್ ಕೆನಿ ಅವರು ಪ್ಯಾರಾಲಿಂಪಿಕ್ಸ್‌ನ ಈಜಿನಲ್ಲಿ ಒಟ್ಟು 16 ಬಾರಿ ಚಾಂಪಿಯನ್ ಆಗಿದ್ದಾರೆ.

ಬ್ರೆಜಿಲ್‌ನ ಡ್ಯಾನಿಯಲ್ ಡಯಾಸ್ ಅವರೂ ಅಮೋಘ ಸಾಧನೆಯತ್ತ ಸಾಗಿದ್ದಾರೆ. ಈಜು ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಅವರು ಮೂರು ಪದಕಗಳನ್ನು ಗೆದ್ದರೆ ಕೆನಿ ಅವರ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಬುಧವಾರ ನಡೆದ ಎಸ್‌–5 ವಿಭಾಗದ 200 ಮೀಟರ್ಸ್ ಫ್ರೀಸ್ಟೈನಲ್‌ನಲ್ಲಿ ಅವರಿಗೆ ಕಂಚಿನ ಪದಕ ಗೆಲ್ಲಲಷ್ಟೇ ಸಾಧ್ಯವಾಯಿತು. ಚಿನ್ನ, ಇಟಲಿಯ ಫ್ರಾನ್ಸಿಸ್ಕೊ ಬೊಷಿಯಾರ್ಡೊ ಪಾಲಾಯಿತು. ಡಯಾಸ್‌ ಈ ವರೆಗೆ 14 ಚಿನ್ನ ಸೇರಿದಂತೆ 25 ‍ಪದಕಗಳನ್ನು ಗಳಿಸಿದ್ದಾರೆ.

ಪೀಜ್‌ ಗ್ರೆಕೊಗೆ ಮೊದಲ ಚಿನ್ನ

ಆಸ್ಟ್ರೇಲಿಯಾದ ಪೀಜ್ ಗ್ರೆಕೊ ಅವರು ಟೋಕಿಯೊ ‍ಪ್ಯಾರಾಲಿಂಪಿಕ್ಸ್‌ನ ಮೊದಲ ಚಿನ್ನ ತಮ್ಮದಾಗಿಸಿಕೊಂಡರು. ವೆಲೊಡ್ರೋಮ್ ಟ್ರ್ಯಾಕ್‌ನಲ್ಲಿ ಬುಧವಾರ ನಡೆದ ಮಹಿಳೆಯರ ಸಿ–1, 3 ವಿಭಾಗದ ಮೂರು ಸಾವಿರ ಮೀಟರ್ಸ್‌ ವೈಯಕ್ತಿಕ ಪರ್ಸ್ಯೂಟ್‌ನಲ್ಲಿ ಚೀನಾದ ವಾಂಗ್‌ ಕ್ಸಿಯಾಮಿ ಅವರನ್ನು ಹಿಂದಿಕ್ಕಿ ಪೀಜ್ ಮೊದಲಿಗರಾದರು. ಜರ್ಮನಿಯ ಶಿಂಡ್ಲರ್ ಡೆನಿಸ್ ಕಂಚಿನ ಪದಕ ಗಳಿಸಿದರು.

ಜನಿಸಿದಾಗಲೇ ಸೆರೆಬ್ರಲ್ ಪಾಲ್ಸಿ ಸಮಸ್ಯೆಗೆ ಒಳಗಾಗಿದ್ದ ಗ್ರೆಕೊ ಅವರ ದೇಹದ ಬಲಭಾಗದಲ್ಲಿ ಸ್ವಾದೀನ ಇರಲಿಲ್ಲ. ಆದರೂ ಕ್ರೀಡೆಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದರು. ಇದು, ಪ್ಯಾರಾಲಿಂಪಿಕ್ಸ್‌ನಲ್ಲಿ ಅವರು ಗೆದ್ದ ಮೊದಲ ಪದಕವಾಗಿದೆ. ಹೀಟ್ಸ್‌ನಲ್ಲಿ ಎಂಟು ಸೆಕೆಂಡುಗಳ ಅಂತರದಲ್ಲಿ ತಮ್ಮದೇ ವಿಶ್ವ ದಾಖಲೆ ಮುರಿದ ಅವರು ಫೈನಲ್‌ನಲ್ಲಿ ಮತ್ತಷ್ಟು ಉತ್ತಮ ಸಾಧನೆ ಮಾಡಿ 3 ನಿಮಿಷ 50.815 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

‘ಅತ್ಯಂತ ಖುಷಿಯಾಗುತ್ತಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದೇನೆಂದು ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಹೇಳಿದರು.

ಇಬ್ಬರಿಗೆ ಕೋವಿಡ್ ಸೋಂಕು

ಸ್ಪರ್ಧೆಗಳು ನಡೆದ ಮೊದಲ ದಿನವಾದ ಬುಧವಾರ ಕ್ರೀಡಾಗ್ರಾಮದಲ್ಲಿ ಇಬ್ಬರು ಕ್ರೀಡಾಪಟುಗಳಿಗೆ ಕೋವಿಡ್ ಸೋಂಕು ದೃಢವಾಗಿದೆ. ಈ ಮೂಲಕ ಎರಡು ದಿನಗಳಲ್ಲಿ ಮೂವರಿಗೆ ಕೋವಿಡ್ ದೃಢಪಟ್ಟಂತಾಗಿದೆ. ಮೂರು ದಿನಗಳಲ್ಲಿ ಒಟ್ಟು ಒಂಬತ್ತು ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ವ್ಹೀಲ್‌ ಚೇರ್‌ ರಗ್ಬಿ: ಆಸ್ಟ್ರೇಲಿಯಾಗೆ ಆಘಾತ

ವ್ಹೀಲ್‌ಚೇರ್‌ರಗ್ಬಿ ಸ್ಪರ್ಧೆಯಲ್ಲಿ ಹ್ಯಾಟ್ರಿಕ್ ಚಿನ್ನದ ಕನಸಿನೊಂದಿಗೆ ಬಂದಿರುವ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲೇ ಆಘಾತವಾಯಿತು. ಬುಧವಾರ ನಡೆದ ಪಂದ್ಯದಲ್ಲಿ ಇದೇ ಮೊದಲ ಬಾರಿ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಡೆನ್ಮಾರ್ಕ್ ವಿರುದ್ಧ ಆಸ್ಟ್ರೇಲಿಯಾ 53–54ರಲ್ಲಿ ಸೋತಿತು. ವ್ಹೀಲ್‌ಚೇರ್‌ ರಗ್ಬಿಯಲ್ಲಿ 2008ರಿಂದ ಆಸ್ಟ್ರೇಲಿಯಾ ಒಂದು ಪಂದ್ಯ ಕೂಡ ಸೋತಿರಲಿಲ್ಲ. ಎರಡು ಗುಂಪುಗಳಲ್ಲಿ ಅಗ್ರ ಸ್ಥಾನ ಗಳಿಸುವ ಎರಡು ತಂಡಗಳು ಮಾತ್ರ ಸೆಮಿಫೈನಲ್‌ ‍ಪ್ರವೇಶಿಸಲಿವೆ.

ಭಾರತದ 12 ಕ್ರೀಡಾಪಟುಗಳ ಪಯಣ


ಭಾರತದ ಎರಡನೇ ತಂಡದ 12 ಕ್ರೀಡಾಪಟುಗಳು ಬುಧವಾರ ನವದೆಹಲಿಯಿಂದ ಹೊರಟರು. ಜಾವೆಲಿನ್‌ನಲ್ಲಿ ಎರಡು ಬಾರಿ ಚಾಂಪಿಯನ್‌ ಆಗಿರುವ ದೇವೇಂದ್ರ ಜಜಾರಿಯ ಮತ್ತು ಹಾಲಿ ವಿಶ್ವ ಚಾಂಪಿಯನ್ ಸಂದೀಪ್ ಚೌಧರಿ ಒಳಗೊಂಡ ಐವರು ಜಾವೆಲಿನ್ ಪಟುಗಳು ಈ ತಂಡದಲ್ಲಿದ್ದರು. ಹೈಜಂಪ್ ಪಟುಗಳಾದ ನಿಶಾದ್ ಕುಮಾರ್ ಮತ್ತು ರಾಮ್ ಪಾಲ್‌, ಡಿಸ್ಕಸ್ ಥ್ರೋ ಪಟು ಯೋಗೇಶ್ ಕಾತೂನಿಯಾ ಅವರೂ ಎರಡನೇ ತಂಡದಲ್ಲಿ ಪಯಣಿಸಿದರು.

ಅಥೆನ್ಸ್ ಮತ್ತು ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ 40 ವರ್ಷದ ದೇವೇಂದ್ರ ಹ್ಯಾಟ್ರಿಕ್ ಸಾಧನೆಯ ಕನಸಿನಲ್ಲಿದ್ದಾರೆ. 63.97 ಮೀಟರ್ಸ್ ದೂರ ಎಸೆದು ವಿಶ್ವ ದಾಖಲೆ ನಿರ್ಮಿಸಿದ್ದ ಅವರು ಜೂನ್‌ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ ಅರ್ಹತಾ ಸುತ್ತಿನಲ್ಲಿ 65.71 ಮೀಟರ್ಸ್ ದೂರದ ಸಾಧನೆಯೊಂದಿಗೆ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಾರೆ.

ಎಫ್‌–46 ವಿಭಾಗದಲ್ಲಿ ಸ್ಪರ್ಧಿಸುವ ದೇವೇಂದ್ರ ಅವರಿಗೆ ಈ ಬಾರಿ ಭಾರತದವರೇ ಆದ ಅಜಿತ್ ಸಿಂಗ್ ಮತ್ತು ಸುಂದರ್ ಗುರ್ಜಾರ್ ಅವರಿಂದ ಪ್ರಬಲ ಪೈಪೋಟಿ ಎದುರಾಗಲಿದೆ. ಹೀಗಾಗಿ ಮೂರೂ ಪದಕಗಳು ಭಾರತಕ್ಕೆ ಸಿಗುವ ನಿರೀಕ್ಷೆ ಮೂಡಿದೆ.

‘ನೀರಜ್ ಚೋಪ್ರಾ ಅವರು ಚಿನ್ನ ಗೆದ್ದ ನಂತರ ಎಲ್ಲರ ಕಣ್ಣು ಜಾವೆಲಿನ್ ಎಸೆತಗಾರರ ಮೇಲೆ ಬಿದ್ದಿದೆ. ಟೋಕಿಯೊ ಪ್ಯಾರಾಲಿಂಪಿಕ್ಸ್ ನಂತರ ಜಾವೆಲಿನ್ ಥ್ರೋ ಭಾರತದಲ್ಲಿ ಕ್ರಿಕೆಟ್‌ ನಂತರ ಅತಿಹೆಚ್ಚು ಪ್ರಸಿದ್ಧಿ ಗಳಿಸಲಿರುವ ಕ್ರೀಡೆ ಆಗಲಿದೆ’ ಎಂದು ದೇವೇಂದ್ರ ಅಭಿಪ್ರಾಯಪಟ್ಟರು.

ಎಫ್‌ 64 ವಿಭಾಗದ ಜಾವೆಲಿನ್ ಥ್ರೋದಲ್ಲಿ ಪಾಲ್ಗೊಳ್ಳುವ ಸಂದೀಪ್ ಚೌಧರಿ ಮತ್ತು ಸುಮಿತ್ ಅಂಟಿಲ್ ಅವರ ಮೇಲೆಯೂ ಪದಕದ ನಿರೀಕ್ಷೆ ಇದೆ. ಅವರು ಈಗ ವಿಶ್ವ ರ್‍ಯಾಂಕಿಂಗ್‌ನಲ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ. ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳು 27ರ ಶುಕ್ರವಾರ ಆಂಭವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT