ಕ್ವಾರ್ಟರ್‌ಗೆ ಗೌರವ್‌, ನಮನ್‌

ಭಾನುವಾರ, ಮೇ 26, 2019
26 °C
ಸ್ಟ್ರಾಂಜಾ ಸ್ಮಾರಕ ಬಾಕ್ಸಿಂಗ್‌ ಟೂರ್ನಿ: ದಹಿಯಾಗೆ ನಿರಾಸೆ

ಕ್ವಾರ್ಟರ್‌ಗೆ ಗೌರವ್‌, ನಮನ್‌

Published:
Updated:
Prajavani

ನವದೆಹಲಿ: ಬಲಿಷ್ಠ ಪಂಚ್‌ಗಳ ಮೂಲಕ ಎದುರಾಳಿಗಳನ್ನು ತಬ್ಬಿಬ್ಬುಗೊಳಿಸಿದ ಭಾರತದ ಗೌರವ್‌ ಸೋಲಂಕಿ ಮತ್ತು ನಮನ್‌ ತನ್ವರ್‌ ಅವರು ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ಸ್ಟ್ರಾಂಜಾ ಸ್ಮಾರಕ ಬಾಕ್ಸಿಂಗ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ರಾತ್ರಿ ನಡೆದ ಪುರುಷರ 52 ಕೆ.ಜಿ. ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಗೌರವ್‌ 3–2 ಪಾಯಿಂಟ್ಸ್‌ನಿಂದ ಕಜಕಸ್ತಾನದ ಅನ್ವರ್‌ ಮುಜಾಪರೋವ್‌ ಅವರನ್ನು ಮಣಿಸಿದರು.

ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದ ಗೌರವ್‌, ಆರಂಭದಿಂದಲೇ ಪಾದರಸದಂತಹ ಚಲನೆ ಮತ್ತು ನಿಖರ ಪಂಚ್‌ಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ಮುಂದಿನ ಸುತ್ತಿನಲ್ಲಿ ಗೌರವ್‌, ಉಜ್‌ಬೆಕಿಸ್ತಾನದ ಫಯಜೋವ್‌ ಖುದೋನ್ಯಜರ್‌ ಸವಾಲು ಎದುರಿಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಫಯಜೋವ್‌, ಬಲ್ಗೇರಿಯಾದ ಟಿಂಕೊ ಬನಬಾಕೋವ್‌ ಎದುರು ಗೆದ್ದರು.

91 ಕೆ.ಜಿ ವಿಭಾಗದಲ್ಲಿ ಕಣದಲ್ಲಿದ್ದ 19 ವರ್ಷ ವಯಸ್ಸಿನ ನಮನ್‌ 5–0ರಲ್ಲಿ ಪೋಲೆಂಡ್‌ನ ಮೈಕಲ್‌ ಸೊಜಿನ್‌ಸ್ಕಿ ಅವರನ್ನು ಪರಾಭವಗೊಳಿಸಿದರು.

ನಮನ್‌ ಅವರು ಕಾಮನ್‌ವೆಲ್ತ್‌ ಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದರು. ಮುಂದಿನ ಸುತ್ತಿನಲ್ಲಿ ತನ್ವರ್‌, ಉಕ್ರೇನ್‌ನ ಸೆರ್ಹಿ ಹಾರ್ಸ್‌ಕೋವ್‌ ಎದುರು ಸೆಣಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಸೆರ್ಹಿ 5–0ರಲ್ಲಿ ಸರ್ಬಿಯಾದ ಡಾರ್ಕೊ ಸ್ಟಾಂಕೊವಿಚ್‌ ಎದುರು ವಿಜಯಿಯಾದರು.

ದಹಿಯಾಗೆ ನಿರಾಸೆ: 60 ಕೆ.ಜಿ. ವಿಭಾಗದಲ್ಲಿ ರಿಂಗ್‌ಗೆ ಇಳಿದಿದ್ದ ಅಂಕುಶ್‌ ದಹಿಯಾ ನಿರಾಸೆ ಕಂಡರು.

ಉಲನ್‌ ಬಾತರ್‌ ಕಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅಂಕುಶ್‌, ಮಸಿಡೋನಿಯಾದ ಜಸಿನ್‌ ಲಜಾಮ ಎದುರು ಮಣಿದರು.  

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !