ಶನಿವಾರ, ಜುಲೈ 24, 2021
21 °C

ಕೋವಿಡ್‌ ಹೋರಾಟದಲ್ಲಿ ಗೆದ್ದ ಬಾಕ್ಸರ್‌ ಡಿಂಕೊ ಸಿಂಗ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ಹಿರಿಯ ಬಾಕ್ಸರ್‌ ಡಿಂಕೊ ಸಿಂಗ್‌ ಅವರು ಕೋವಿಡ್‌–19ನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಮೇ 31ರಂದು ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಕೂಡಲೇ ಅವರು ಚಿಕಿತ್ಸೆಗಾಗಿ ಇಂಫಾಲದ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. 41 ವರ್ಷ ವಯಸ್ಸಿನ ಡಿಂಕೊ ಅವರು ಪಿತ್ತಜನಕಾಂಗದ ಕ್ಯಾನ್ಸರ್ ಹಾಗೂ ಕಾಮಾಲೆ ರೋಗಗಳಿಂದಲೂ ಬಳಲುತ್ತಿದ್ದಾರೆ. 

‘ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಆ ದಿನಗಳು ತುಂಬಾ ಕಠಿಣವಾಗಿದ್ದವು. ವೈದ್ಯರು ಹಾಗೂ ಶುಶ್ರೂಕಿಯರು ತುಂಬಾ ಚೆನ್ನಾಗಿ ಆರೈಕೆ ಮಾಡಿದರು. ಅವರಿಗೆ ಎಷ್ಟು ಕೃತಜ್ಞತೆಗಳನ್ನು ಹೇಳಿದರೂ ಸಾಲದು’ ಎಂದು ಡಿಂಕೊ ಅವರು ನುಡಿದಿದ್ದಾರೆ.

‘ಆಸ್ಪತ್ರೆಯಲ್ಲಿದ್ದಾಗ ಒಟ್ಟು ಐದು ಬಾರಿ ಕೋವಿಡ್‌–19 ಪರೀಕ್ಷೆಗೆ ಒಳಗಾಗಿದ್ದೆ. ಎಲ್ಲಾ ವರದಿಗಳೂ ‘ಪಾಸಿಟಿವ್‌’ ಆಗಿದ್ದವು. ನನಗಿಂತ ತಡವಾಗಿ ಆಸ್ಪತ್ರೆಗೆ ದಾಖಲಾದವರೆಲ್ಲಾ ಬೇಗ ಗುಣಮುಖರಾಗಿ ಮನೆಗೆ ಹೋಗುತ್ತಿದ್ದರು. ಆಗೆಲ್ಲಾ ತುಂಬಾ ನೋವಾಗುತ್ತಿತ್ತು. ವೈದ್ಯರು ಮತ್ತು ಶೂಶ್ರೂಕಿಯರು ನನ್ನಲ್ಲಿ ಆತ್ಮಸ್ಥೈರ್ಯ ತುಂಬಿದರು. ಅವರ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ’ ಎಂದಿದ್ದಾರೆ.

‘ಕ್ಯಾನ್ಸರ್‌ ಮತ್ತು ಕಾಮಾಲೆಯಿಂದ ತತ್ತರಿಸಿದ್ದ ನನಗೆ ಕೋವಿಡ್‌ ಇರುವುದೂ ಖಾತರಿಯಾದಾಗ ದಿಕ್ಕೇ ತೋಚದಂತಾಗಿತ್ತು. ಹಾಗಂತ ಎದೆಗುಂದಲಿಲ್ಲ. ಇದು ಹೋರಾಟದ ಸಮಯ, ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳಬಾರದು ಎಂದು ದೃಢವಾಗಿ ನಿಶ್ಚಯಿಸಿದ್ದೆ. ಹೀಗಾಗಿಯೇ ಕೊರೊನಾ ವಿರುದ್ಧದ ಸುದೀರ್ಘ ಸಮರದಲ್ಲಿ ಜಯಿಸಲು ಸಾಧ್ಯವಾಯಿತು’ ಎಂದು ಹೇಳಿದ್ದಾರೆ.

‘ಕೊರೊನಾ ವಿರುದ್ಧದ ಹೋರಾಟದಲ್ಲಿ ನನ್ನ ಜೊತೆಗಿದ್ದು ಪ್ರತಿ ಹಂತದಲ್ಲೂ ಆತ್ಮವಿಶ್ವಾಸ ತುಂಬಿದ ಭಾರತ ಬಾಕ್ಸಿಂಗ್‌ ಫೆಡರೇಷನ್‌ನ ಅಧ್ಯಕ್ಷ ಅಜಯ್‌ ಸಿಂಗ್‌, ವ್ಯವಸ್ಥಾಪಕ ನಿರ್ದೇಶಕ ಆರ್‌.ಕೆ.ಸಚೇತಿ ಹಾಗೂ ಮಹಾ ಕಾರ್ಯದರ್ಶಿ ಜಯ್‌ ಕೊವಲಿ ಅವರಿಗೆ ಆಭಾರಿಯಾಗಿದ್ದೇನೆ’ ಎಂದು ಡಿಂಕೊ ತಿಳಿಸಿದ್ದಾರೆ. 

‘ಆಸ್ಪತ್ರೆಯಿಂದ ಬಂದ ಮೇಲೆ ಮನೆಯ ಕೊನೆಯ ಮಹಡಿಯಲ್ಲಿ ಸ್ವಯಂ ಪ್ರತ್ಯೇಕವಾಸದಲ್ಲಿದ್ದೇನೆ. ನಾನು ಗುಣಮುಖನಾಗಿ ಬಂದಿರುವುದರಿಂದ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ. ಎಲ್ಲರೂ ನನಗೆ ಶುಭ ಹಾರೈಸಿದ್ದಾರೆ’ ಎಂದೂ ಅವರು ಹೇಳಿದ್ದಾರೆ.  

ಡಿಂಕೊ ಅವರು 1998ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು. ಬಾಂಥಮ್‌ವೇಟ್‌ ವಿಭಾಗದಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು. ಅದೇ ವರ್ಷ ಅವರಿಗೆ ಅರ್ಜುನ ಪ್ರಶಸ್ತಿ ಒಲಿದಿತ್ತು. 2013ರಲ್ಲಿ ಅವರು ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು