ಸುಲ್ತಾನ್‌ ಅಜ್ಲಾನ್‌ ಶಾ ಹಾಕಿ: ಭಾರತಕ್ಕೆ ಮಣಿದ ಜಪಾನ್‌

ಗುರುವಾರ , ಏಪ್ರಿಲ್ 25, 2019
33 °C
ವರುಣ್‌, ಸಿಮ್ರನ್‌ಜೀತ್ ಸಿಂಗ್‌ ಕೈಚಳಕ

ಸುಲ್ತಾನ್‌ ಅಜ್ಲಾನ್‌ ಶಾ ಹಾಕಿ: ಭಾರತಕ್ಕೆ ಮಣಿದ ಜಪಾನ್‌

Published:
Updated:
Prajavani

ಇಫೊ, ಮಲೇಷ್ಯಾ: ವರುಣ್‌ ಕುಮಾರ್‌ ಮತ್ತು ಸಿಮ್ರನ್‌ಜೀತ್‌ ಸಿಂಗ್ ಅವರ ಕೈಚಳಕದ ಬಲದಿಂದ ಭಾರತ ತಂಡ ಸುಲ್ತಾನ್ ಅಜ್ಲಾನ್‌ ಶಾ ಕಪ್‌ ಹಾಕಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಶನಿವಾರ ನಡೆದ ತನ್ನ ಮೊದಲ ಲೀಗ್‌ ಹೋರಾಟದಲ್ಲಿ ಮನಪ್ರೀತ್‌ ಸಿಂಗ್‌ ಸಾರಥ್ಯದ ಭಾರತ 2–0 ಗೋಲುಗಳಿಂದ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಜಪಾನ್‌ ತಂಡವನ್ನು ಪರಾಭವಗೊಳಿಸಿತು.

ಟೂರ್ನಿಯಲ್ಲಿ ಆರನೇ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಭಾರತ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಜಪಾನ್‌ ಕೂಡಾ ಶುರುವಿನಲ್ಲಿ ಚುರುಕಿನ ಸಾಮರ್ಥ್ಯ ತೋರಿತು. ಹೀಗಾಗಿ ಮೊದಲ ಕ್ವಾರ್ಟರ್‌ ಗೋಲು ರಹಿತವಾಗಿತ್ತು.

ಎರಡನೇ ಕ್ವಾರ್ಟರ್‌ನಲ್ಲಿ ಮನಪ್ರೀತ್‌ ಪಡೆ ಮೋಡಿ ಮಾಡಿತು. 24ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್‌ ಲಭಿಸಿತು. ಈ ಅವಕಾಶವನ್ನು ವರುಣ್‌ ಕುಮಾರ್‌ ಸದು‍ಪಯೋಗಪಡಿಸಿಕೊಂಡರು. ಡ್ರ್ಯಾಗ್‌ಫ್ಲಿಕ್‌ ಮೂಲಕ ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಚೆಂಡನ್ನು ಗುರಿ ಮುಟ್ಟಿಸಿದ ವರುಣ್‌, ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.

ನಂತರವೂ ಭಾರತದ ಆಟ ರಂಗೇರಿತು. ಮಿಡ್‌ಫೀಲ್ಡ್‌ ವಿಭಾಗದ ಆಟಗಾರರಾದ ಮನಪ್ರೀತ್‌ ಮತ್ತು ಕೊಥಾಜಿತ್‌ ಸಿಂಗ್‌, ಗೋಲು ಗಳಿಸುವ ಹಲವು ಅವಕಾಶಗಳನ್ನು ಸೃಷ್ಟಿಸಿದ್ದರು. ಆದರೆ ಮುಂಚೂಣಿ ವಿಭಾಗದ ಆಟಗಾರರು ಇವುಗಳನ್ನು ಕೈಚೆಲ್ಲಿದರು.

ಎರಡನೇ ಕ್ವಾರ್ಟರ್‌ನ ಆಟ ಮುಗಿಯಲು ನಾಲ್ಕು ನಿಮಿಷ ಬಾಕಿ ಇದ್ದಾಗ ಭಾರತಕ್ಕೆ ಮುನ್ನಡೆ ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶ ಸಿಕ್ಕಿತ್ತು. ಸುಮಿತ್‌ ಕುಮಾರ್‌ ಜೂನಿಯರ್‌ ತಮ್ಮತ್ತ ತಳ್ಳಿದ ಚೆಂಡನ್ನು ಗುರಿ ಮುಟ್ಟಿಸಲು ಮನದೀಪ್‌ ಸಿಂಗ್‌ ವಿಫಲರಾದರು.

ಮೂರನೇ ಕ್ವಾರ್ಟರ್‌ನಲ್ಲಿ ಜಪಾನ್‌ ತಂಡ ವೇಗದ ಆಟಕ್ಕೆ ಅಣಿಯಾಯಿತು. 33ನೇ ನಿಮಿಷದಲ್ಲಿ ಈ ತಂಡಕ್ಕೆ ಪೆನಾಲ್ಟಿ ಕಾರ್ನರ್‌ ಲಭಿಸಿತು. ಈ ಅವಕಾಶದಲ್ಲಿ ಎದುರಾಳಿ ಆಟಗಾರ ಬಾರಿಸಿದ ಚೆಂಡನ್ನು ಭಾರತದ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಅಮೋಘ ರೀತಿಯಲ್ಲಿ ತಡೆದರು. 42ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಜಪಾನ್‌ನ ಸ್ಟ್ರೈಕರ್‌ ಕೆಂಜಿ ಕಿಟಾಜಾಟೊ ಕೈಚೆಲ್ಲಿದರು. ಹೀಗಾಗಿ ಸಮಬಲದ ಕನಸು ಸಾಕಾರಗೊಳ್ಳಲಿಲ್ಲ.

ನಾಲ್ಕನೇ ಕ್ವಾರ್ಟರ್‌ನ ಆರಂಭದಲ್ಲೇ ಭಾರತಕ್ಕೆ ಪೆನಾಲ್ಟಿ ಕಾರ್ನರ್‌ ಲಭಿಸಿತ್ತು. ಈ ಅವಕಾಶದಲ್ಲಿ ಗೋಲು ಬಾರಿಸಲು ವರುಣ್‌ ವಿಫಲರಾದರು.

ಮನಪ್ರೀತ್‌ ಪಡೆಯ ಪ್ರಯತ್ನಕ್ಕೆ 55ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಸಿಮ್ರನ್‌ಜೀತ್‌ ಅವರು ‘ಡೈವಿಂಗ್‌’ ಮೂಲಕ ಚೆಂಡನ್ನು ಗುರಿ ಸೇರಿಸಿ ಕ್ರೀಡಾಂಗಣದಲ್ಲಿ ಸಂಭ್ರಮ ಮೇಳೈಸುವಂತೆ ಮಾಡಿದರು.

ಪಂದ್ಯ ಮುಗಿಯಲು ಎರಡು ನಿಮಿಷ ಬಾಕಿ ಇದ್ದಾಗ ಜಪಾನ್‌ ತಂಡಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್ ಲಭ್ಯವಾಗಿತ್ತು. ಎದುರಾಳಿ ಆಟಗಾರನ ಪ್ರಯತ್ನಕ್ಕೆ ಡಿಫೆಂಡರ್‌ ಸುರೇಂದರ್‌ ಕುಮಾರ್‌ ಅಡ್ಡಿಯಾದರು.

ಭಾನುವಾರ ನಡೆಯುವ ತನ್ನ ಎರಡನೇ ಲೀಗ್‌ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಕೊರಿಯಾ ಎದುರು ಸೆಣಸಲಿದೆ.

ನಂತರ ಮಲೇಷ್ಯಾ (ಮಾರ್ಚ್‌ 26), ಕೆನಡಾ (ಮಾ.27) ಮತ್ತು ‍ಪೋಲೆಂಡ್‌ (ಮಾ.29) ತಂಡಗಳ ವಿರುದ್ಧ ಆಡಲಿದೆ.   

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !