ಟೋಕಿಯೊ ಟಿಕೆಟ್ ಕನಸು

ಬುಧವಾರ, ಜೂನ್ 19, 2019
32 °C

ಟೋಕಿಯೊ ಟಿಕೆಟ್ ಕನಸು

Published:
Updated:
Prajavani

ಭಾರತ...ಒಲಿಂಪಿಕ್ಸ್ ಹಾಕಿಯಲ್ಲಿ ದೊಡ್ಡ ಹೆಸರು. ನಿರಂತರ ಆರು ಬಾರಿ ಒಳಗೊಂಡಂತೆ ಒಟ್ಟು ಎಂಟು ಸಲ ಚಿನ್ನ ಗೆದ್ದ ತಂಡ. ಕೂಟದಲ್ಲಿ ಅತಿ ಹೆಚ್ಚು ಬಾರಿ ಪಾಲ್ಗೊಂಡ ತಂಡ. ಪದಕ ಗೆದ್ದ ಯುರೋಪೇತರ ಮೊದಲ ತಂಡ. ಚಿನ್ನ ಗೆದ್ದ ಏಷ್ಯಾದ ಎರಡೇ ತಂಡಗಳ ಪೈಕಿ ಒಂದು.

ಈ ಎಲ್ಲ ವೈಶಿಷ್ಟ್ಯಗಳನ್ನು ಹೊಂದಿರುವ ತಂಡ ಇತ್ತೀಚೆಗೆ ‘ರಾಷ್ಟ್ರೀಯ ಕ್ರೀಡೆ’ಯಲ್ಲಿ ಸೊರಗಿದೆ. 1980ರಲ್ಲಿ ಕೊನೆಯದಾಗಿ ಚಿನ್ನ ಗೆದ್ದ ನಂತರ ಭಾರತಕ್ಕೆ ಪದಕ ಮರೀಚಿಕೆಯಾಗಿದೆ. 1984ರಲ್ಲಿ ಐದನೇ ಸ್ಥಾನದಲ್ಲಿದ್ದ ತಂಡ ನಂತರ ಕುಸಿತದ ಹಾದಿಯಲ್ಲೇ ನಡೆಯಿತು. 1912ರಲ್ಲಿ ಕನಿಷ್ಠ, 12ನೇ ಸ್ಥಾನ ಗಳಿಸಿದ ಭಾರತ ಮುಂದಿನ ಬಾರಿ ಚೇತರಿಸಿಕೊಂಡು ಎಂಟನೇ ಸ್ಥಾನಕ್ಕೇರಿತು.

ಈ ಬಾರಿ ಮತ್ತೆ ನಿರೀಕ್ಷೆ ಗರಿಗೆದರಿದೆ. ಆದರೆ ಮುಂದಿನ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಬೇಕಾದರೆ ತಂಡ ಕಠಿಣ ಹಾದಿಯಲ್ಲಿ ಹೆಜ್ಜೆ ಇರಿಸಬೇಕಾಗಿದೆ. ಟೋಕಿಯೊದಲ್ಲಿ 2020ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನ ಅರ್ಹತಾ ಸುತ್ತಿನ ಟೂರ್ನಿಗೆ ಸಜ್ಜಾಗುತ್ತಿರುವ ತಂಡ ಅದಕ್ಕೂ ಮೊದಲಿನ ‘ಅರ್ಹತೆ’ಗಾಗಿ ಆಡುತ್ತಿದೆ. ತವರಿನಲ್ಲೇ ನಡೆಯುತ್ತಿರುವ ಎಫ್ಐಎಚ್ ಸಿರೀಸ್ ಫೈನಲ್ಸ್ ಟೂರ್ನಿಯಲ್ಲಿ ತಂಡ ಬಲಿಷ್ಠ ರಾಷ್ಟ್ರಗಳ ಸವಾಲು ಎದುರಿಸುತ್ತಿದೆ. ಶುಭಾರಂಭವನ್ನೂ ಮಾಡಿದೆ.

ಹೊಸ ಕೋಚ್ ಗ್ರಹಾಂ ರೀಡ್ ಗರಡಿಯಲ್ಲಿ ದೌರ್ಬಲ್ಯಗಳನ್ನು ಮೆಟ್ಟಿ ನಿಂತು ಕಹಿ ನೆನಪುಗಳನ್ನು ಮರೆಯಲು ಪ್ರಯತ್ನಿಸುತ್ತಿರುವ ತಂಡದ ನಿರೀಕ್ಷೆಗಳು ಬೆಟ್ಟದಷ್ಟಿವೆ. ಫೈನಲ್ಸ್‌ನ ಒಂದು ಹಂತವನ್ನು ಮುಗಿಸಿರುವ ತಂಡ  ಭರವಸೆಯ ಅಲೆಯಲ್ಲಿ ತೇಲುತ್ತಿದೆ.

ಈ ಫೈನಲ್ಸ್‌ನಲ್ಲಿ ಭಾರತ ಎಲ್ಲ ರೀತಿಯಲ್ಲೂ ಇತರ ತಂಡಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ. ತವರಿನ ಪ್ರೇಕ್ಷಕರ ಅಪಾರ ಬೆಂಬಲ ಹೊಂದಿರುವ ತಂಡ ವಿಶ್ವ ರ್‍ಯಾಂಕಿಂಗ್‌ನಲ್ಲಿ ಐದನೇ ಸ್ಥಾನ ಹೊಂದಿದೆ.

16ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು 18ನೇ ಸ್ಥಾನದ ಜಪಾನ್ ತಂಡಗಳು ಭಾರತದ ಸಮೀಪದ ಪ್ರತಿಸ್ಪರ್ಧಿಗಳು. ಆದರೆ ತಂತ್ರಗಳನ್ನು ಹೆಣೆಯುವಲ್ಲಿ ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಈ ಎರಡು ತಂಡಗಳು ಒಳಗೊಂಡಂತೆ ಎಲ್ಲ ತಂಡಗಳಿಗಿಂತ ಭಾರತ ಮುಂದೆ ಇದೆ ಎಂಬುದು ಮಹತ್ವದ ಅಂಶ.

ಹಾದಿ ಕಠಿಣವಾದದ್ದು ಯಾಕೆ?
ಏಳು–ಬೀಳುಗಳನ್ನು ಕಂಡರೂ ಹಾಕಿಯಲ್ಲಿ ಭಾರತ ತಂಡದ ಮೇಲೆ ಅಭಿಮಾನಿಗಳು ವಿಶ್ವಾಸ ಕಳೆದುಕೊಂಡಿಲ್ಲ. ಈ ಬಾರಿಯೂ ಭಾರತಕ್ಕೆ ಒಲಿಂಪಿಕ್ಸ್ ಹಾದಿ ಇಷ್ಟು ಕಠಿಣವಾಗುವ ಸಾಧ್ಯತೆ ಇರಲಿಲ್ಲ. ತಂಡ ತಾನೇ ತೋಡಿದ ಗುಂಡಿಗೆ ಬಿದ್ದು ಈಗಿನ ಪರಿಸ್ಥಿತಿಗೆ ತಲುಪಿದೆ. ಜಕಾರ್ತದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನ ಹಾಕಿಯಲ್ಲಿ ಚಾಂಪಿಯನ್ ಆಗಿದ್ದರೆ ತಂಡ ನೇರವಾಗಿ ಟೋಕಿಯೊ ಟಿಕೆಟ್ ಗಳಿಸುತ್ತಿತ್ತು. ಆದರೆ ಸೆಮಿಫೈನಲ್‌ನಲ್ಲಿ ಅನಿರೀಕ್ಷಿತ ಆಘಾತ ಅನುಭವಿಸಿದ ತಂಡ ನಿರಾಸೆಯ ಕೂಪಕ್ಕೆ ಬಿದ್ದಿತ್ತು.

ಈ ಬಾರಿಯ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿಯಲ್ಲೂ ಭಾರ ತಕ್ಕೆ ನಿರಾಸೆ ಕಾಡಿತ್ತು. ಗೆಲ್ಲುವ ನೆಚ್ಚಿನ ತಂಡ ಎನಿಸಿದ್ದ ತಂಡ ಫೈನಲ್‌ ಹಣಾಹಣಿಯಲ್ಲಿ ದಕ್ಷಿಣ ಕೊರಿಯಾ ತಂಡಕ್ಕೆ ಮಣಿದಿತ್ತು.

ರೀಡ್‌ಗೆ ಮತ್ತೊಂದು ಸವಾಲು
ಕಳೆದ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ತಂಡ ನೀರಸವಾಗಿ ಆಡಿದ್ದಕ್ಕೆ ಭಾರತದ ಕೋಚ್ ಹರೇಂದ್ರ ಸಿಂಗ್ ತಲೆದಂಡವಾಗಿತ್ತು. ಆದ್ದರಿಂದ ಗ್ರಹಾಂ ರೀಡ್ ಅವರ ಮೇಲೆ ಭಾರತ ಹಾಕಿಯ ನಿರೀಕ್ಷೆಯ ಭಾರವನ್ನು ಹಾಕಲಾಗಿದೆ. ಟೆರಿ ವಾಲ್ಶ್, ಪಾಲ್ ವ್ಯಾನ್ ಆ್ಯಸ್, ಮೈಕೆಲ್ ನೋಬ್ಸ್ ಮುಂತಾದವರಿಂದ ಸಾಧ್ಯವಾಗದ ಕಾರ್ಯ ರೀಡ್ ಮಾಡಿ ತೋರಿಸುವರೇ ಎಂಬ ಕುತೂಹಲ ಹಾಕಿ ಲೋಕದಲ್ಲಿ ಮೂಡಿದೆ.

ಮೊಣಕಾಲು ನೋವಿನಿಂದಾಗಿ ದೂರ ಉಳಿದು ವರ್ಷದ ನಂತರ ತಂಡಕ್ಕೆ ಮರಳಿರುವ ಸ್ಟ್ರೈಕರ್ ರಮಣ್ ದೀಪ್ ಸಿಂಗ್, ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್, ಭರವಸೆಯ ಆಟಗಾರರಾದ ಹರ್ಮನ್ ಪ್ರೀತ್ ಸಿಂಗ್, ವರುಣ್ ಕುಮಾರ್, ಅಮಿತ್ ರೋಹಿದಾಸ್ ಅವರು ಕೂಡ ಈಗ ಮರಳಿ ಅರಳುವ ಸಿದ್ಧತೆಯಲ್ಲಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !