ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ -‘ಸೂಪರ್‌ ಟೆನ್‌’ ಪ್ರವೀಣ ನವೀನ್‌

Last Updated 8 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಪ್ರೊ ಕಬಡ್ಡಿ ಲೀಗ್‌ನ ಈ ಋತುವಿನಲ್ಲಿ ದಬಂಗ್‌ ಡೆಲ್ಲಿ ಅದ್ಭುತ ಲಯದ ಅಲೆಯಲ್ಲಿದೆ. ಪಾಯಿಂಟ್‌ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆ ತಂಡದ ಯಶಸ್ಸಿನಲ್ಲಿ ರೇಡರ್‌ ನವೀನ್‌ ಕುಮಾರ್‌ ಎಂಬ ಯುವ ಆಟಗಾರನ ಪಾತ್ರ ಬಹುದೊಡ್ಡದು. ಈ ಋತುವಿನಲ್ಲಿ 12 ಪಂದ್ಯಗಳಿಂದ ಒಟ್ಟು 11 ‘ಸೂಪರ್‌ ಟೆನ್‌’ ಸಾಧಿಸಿರುವ ನವೀನ್‌, ಬೆಂಗಳೂರು ಬುಲ್ಸ್ ತಂಡದ ಪವನ್‌ಕುಮಾರ್‌ ಶೆರಾವತ್‌ ಮತ್ತು ಪಟ್ನಾ ಪೈರೇಟ್ಸ್‌ನ ಪ್ರದೀಪ್‌ ನರ್ವಾಲ್‌ ಅವರನ್ನು ಹಿಂದಿಕ್ಕಿದ್ದಾರೆ.

ನವೀನ್‌ ಅವರು ಆಡುತ್ತಿರುವ ಪ್ರೊ ಕಬಡ್ಡಿ ಎರಡನೇ ಋತು ಇದು. ಹೋದ ಋತುವಿನಲ್ಲಿ ಲೀಗ್‌ ಸೇರಿಕೊಂಡಾಗ ಅವರಿಗೆ ಕೇವಲ 18 ವರ್ಷ. ಪ್ರೊ ಕಬಡ್ಡಿ ಲೀಗ್‌ನಲ್ಲಿ ಕಾಣಿಸಿಕೊಂಡ 2000ರ ಇಸವಿಯಿಂದೇಚೆ ಜನಿಸಿದ ಮೊದಲ ಆಟಗಾರ ಎಂಬ ಹಿರಿಮೆ ಅವರದು. ಹೋದ ಸಲ ಡೆಲ್ಲಿ ತಂಡ ಪ್ಲೇ ಆಫ್‌ವರೆಗೆ ಸಾಗುವಲ್ಲಿ ಅವರ ಕೊಡುಗೆ ಗಮನಾರ್ಹ.

ಮಿಂಚಿನ ವೇಗ ಹಾಗೂ ಅಮೋಘ ಟಚ್‌ ಪಾಯಿಂಟ್‌ ಸಾಮರ್ಥ್ಯ ನವೀನ್‌ ಆಟದ ವೈಶಿಷ್ಟ್ಯ. ಪ್ರೊ ಕಬಡ್ಡಿಯಲ್ಲಿ ತಾನಾಡಿದ ನಾಲ್ಕನೇ ಪಂದ್ಯದಲ್ಲೇ ಸೂಪರ್‌ ಟೆನ್‌ ಸಾಧಿಸಿದ ಎರಡನೇ ಕಿರಿಯ ಆಟಗಾರ ಅವರು.

‘ಸೂಪರ್‌ ಟೆನ್‌ ಸಾಧನೆ ಖುಷಿ ತರುವ ವಿಷಯ. ಪ್ರದೀಪ್ ನರ್ವಾಲ್‌ ಅವರಂತಹ ಆಟಗಾರರನ್ನು ಹಿಂದಿಕ್ಕಿದ್ದು ಸಂತಸ ಹೆಚ್ಚಿಸಿದೆ. ಕಠಿಣ ಪರಿಶ್ರಮದಿಂದ ಇದು ಸಾಧ್ಯವಾಗಿದೆ ಎಂದು ನವೀನ್‌ ಹೇಳುತ್ತಾರೆ.

ನಮ್ಮ ತಂಡದ ಆಟಗಾರರ ನಡುವೆ ಪರಸ್ಪರ ಸಹಕಾರ ಭಾವ ಹೆಚ್ಚಿದೆ. ನಾಯಕ ಜೋಗಿಂದರ್‌ ನರ್ವಾಲ್‌, ವಿಶಾಲ್‌ ಮಾನೆಯಂತಹ ಹಿರಿಯ ಆಟಗಾರರು ಬೆಂಬಲವಾಗಿದ್ದಾರೆ. ನನ್ನಿಂದ ತಂಡಕ್ಕೆ ಉಪಯೋಗವಾಗಿದ್ದರೆ ಅದು ಎಲ್ಲ ಆಟಗಾರರ ಶ್ರಮದ ಫಲ ಎಂದು ಅವರು ಹೇಳುತ್ತಾರೆ.

ಕಬಡ್ಡಿಯಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಆಸೆಯಿದೆ. ಆಟದಲ್ಲಿ ಇನ್ನಷ್ಟು ಪಳಗಬೇಕಿದೆ. ದೇಶಕ್ಕೆ ಚಿನ್ನದ ಪದಕ ತಂದುಕೊಡುವುದು ನನ್ನ ಕನಸು. ದೈಹಿಕ, ಮಾನಸಿಕ ಫಿಟ್‌ನೆಸ್‌ ಕಾಯ್ದುಕೊಳ್ಳುವುದು ಮುಂದಿರುವ ಸವಾಲು ಎನ್ನುತ್ತಾರೆ ಹರಿಯಾಣದ ಈ ಹುಡುಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT