ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಿಗೆದರಿದ ಈಜು: ಮನೆಮಾಡಿದ ಸಂತಸ

Last Updated 19 ಅಕ್ಟೋಬರ್ 2021, 18:53 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಹಾವಳಿಯಿಂದಾಗಿ ಸುಮಾರು ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ರಾಷ್ಟ್ರೀಯ ಈಜು ಸ್ಪರ್ಧೆಗಳು ಮಂಗಳವಾರ ಉದ್ಯಾನನಗರಿಯಲ್ಲಿ ಆರಂಭವಾಗುವ ಮೂಲಕ ಚುರುಕು ಪಡೆದವು.

ಕೋವಿಡ್ ಪ್ರಸರಣ ತಡೆಗೆದೇಶದೆಲ್ಲೆಡೆ ಈಜುಕೊಳಗಳನ್ನು ಮುಚ್ಚಲಾಗಿತ್ತು. ನೀರಿನ ಮೂಲಕವೂ ಸೋಂಕು ಹೆಚ್ಚಾಗಿ ಹರಡುವುದರಿಂದ ಸ್ಪರ್ಧೆಗಳಿಂದ ಈಜುಪಟುಗಳು ವಂಚಿತರಾಗಿದ್ದರು. ಅವರ ತರಬೇತಿಯೂ ನಿಂತುಹೋಗಿತ್ತು. ಕೋವಿಡ್‌ ಪಿಡುಗಿನ ಕಾರಣದಿಂದಲೇ 2020ರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಅನ್ನು ರದ್ದುಗೊಳಿಸಲಾಗಿತ್ತು.

ಕರ್ನಾಟಕವೂ ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ ಈಗ ಸ್ಪರ್ಧಾತ್ಮಕ ಈಜಿಗೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಈ ಕ್ರೀಡೆಗೆ ಸಂಬಂಧಿಸಿದ ಎಲ್ಲರಲ್ಲಿ ಸಂತಸ ಮನೆ ಮಾಡಿದ್ದು, ಅದಕ್ಕೆ ಬೆಂಗಳೂರು ಸಾಕ್ಷಿಯಾಗಿದೆ.

ಇತ್ತೀಚೆಗೆ ಕರ್ನಾಟಕ ರಾಜ್ಯ ಚಾಂಪಿಯನ್‌ಷಿಪ್‌ಗಳಿಗೂ ಬೆಂಗಳೂರು ಆತಿಥ್ಯ ವಹಿಸಿತ್ತು.

‘ಎರಡು ವರ್ಷಗಳ ಬಳಿಕ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಆಯೋಜನೆಯಾಗಿರುವುದು ಅತ್ಯಂತ ಖುಷಿಯ ಸಂಗತಿ. ಇಲ್ಲಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ನಮ್ಮ ಹುಡುಗರಿಗೆ ಉತ್ತಮ ತರಬೇತಿಯನ್ನು ಕೊಟ್ಟು ಕರೆದುಕೊಂಡು ಬಂದಿದ್ದೇವೆ. ಕೋವಿಡ್‌ ಕಾರಣದಿಂದ ತರಬೇತಿ, ಸ್ಪರ್ಧೆಗಳು ನಿಂತುಹೋಗಿದ್ದು ಬೇಸರ ತರಿಸಿತ್ತು‘ ಎಂದು ಬೆಂಗಳೂರಿನ ಡಾಲ್ಫಿನ್ ಈಜು ಕೇಂದ್ರದ ತರಬೇತುದಾರ ಮಧು ಕುಮಾರ್ ಹೇಳುತ್ತಾರೆ.

‘ಮಹಾರಾಷ್ಟ್ರದಲ್ಲಿ ಇತ್ತೀಚೆಗಷ್ಟೇ ಈಜು ಕೊಳಗಳನ್ನು ತೆರೆಯಲಾಗಿದೆ. ಬಹಳ ದಿನಗಳಿಂದ ನಮ್ಮ ಈಜುಪಟುಗಳಿಗೆ ತರಬೇತಿ ಇರಲಿಲ್ಲ. ಕರ್ನಾಟಕ ಈಜು ಸಂಸ್ಥೆಯವರು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಅನ್ನು ತುಂಬ ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ. ಸವಲತ್ತುಗಳನ್ನೂ ನೀಡುತ್ತಿದ್ದಾರೆ‘ ಎಂದು ಮಹಾರಾಷ್ಟ್ರದ ಈಜು ಕೋಚ್‌ ಅಮೋಲ್ ಸಂತಸ ಹಂಚಿಕೊಂಡರು.

‘ಕೋವಿಡ್‌ ಲಾಕ್‌ಡೌನ್‌ನಲ್ಲಿ ಮನೆಯಲ್ಲೇ ಇದ್ದು ತುಂಬಾ ಬೇಸರವಾಗಿತ್ತು. ಸ್ಪರ್ಧೆಗಳು ಪ್ರಾರಂಭವಾಗಿದ್ದು ಸಂತಸ ತಂದಿದೆ. ಮೊದಲ ದಿನ ನನಗೆ ಪೂರ್ಣಪ್ರಮಾಣದ ಸಾಮರ್ಥ್ಯ ತೋರಲಾಗಲಿಲ್ಲ. ಆದರೂ ಖುಷಿಯಿದೆ‘ ಎಂದು ಕರ್ನಾಟಕದ ಈಜುಪಟು ಧಿನಿಧಿ ದೇಶಿಂಗು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT