ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯಾಸಕ್ಕೆ ಅವಕಾಶ ಸಿಗದಿದ್ದರೆ ನಿವೃತ್ತಿ ಪ್ರಕಟಿಸುವೆ: ಈಜುಪಟು ವೀರಧವಳ್‌ ಖಾಡೆ

ಭಾರತದ ಈಜುಪಟು ವೀರಧವಳ್‌ ಖಾಡೆ ಹತಾಶೆಯ ನುಡಿ
Last Updated 14 ಜೂನ್ 2020, 15:03 IST
ಅಕ್ಷರ ಗಾತ್ರ

ನವದೆಹಲಿ: ‘ಈಜುಕೊಳಗಳಲ್ಲಿ ಅಭ್ಯಾಸ ನಡೆಸಲು ಅನುಮತಿ ಸಿಗದೇ ಹೋದರೆ ವೃತ್ತಿ ಬದುಕಿಗೆ ವಿದಾಯ ಹೇಳುವುದು ಅನಿವಾರ್ಯ’ ಎಂದು ಭಾರತದ ಪ್ರಮುಖ ಈಜುಪಟು ವೀರಧವಳ್‌ ಖಾಡೆ ಹತಾಶೆಯಿಂದ ನುಡಿದಿದ್ದಾರೆ.

28 ವರ್ಷ ವಯಸ್ಸಿನ ವೀರಧವಳ್‌ ಅವರು ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 2010ರಲ್ಲಿ ಗುವಾಂಗ್‌ಜೌನಲ್ಲಿ ನಡೆದಿದ್ದ ಕೂಟದ 50 ಮೀಟರ್ಸ್‌ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಅವರು ಈ ಸಾಧನೆ ಮಾಡಿದ್ದರು.

‘ಥಾಯ್ಲೆಂಡ್‌, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನಲ್ಲಿ ಈಜುಪಟುಗಳ ಅಭ್ಯಾಸಕ್ಕೆ ಅನುಮತಿ ನೀಡಲಾಗಿದೆ. ಆದರೆ ಭಾರತದಲ್ಲಿ ಇದಕ್ಕೆ ತದ್ವಿರುದ್ಧ ಪರಿಸ್ಥಿತಿ ಇದೆ. ಶೀಘ್ರವೇ ಈಜು ಚಟುವಟಿಕೆಗಳನ್ನು ಪುನರಾರಂಭಿಸದೇ ಹೋದರೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಪರ್ಧಿಗಳಿಗೆ ಹಿನ್ನಡೆ ಎದುರಾಗಲಿದೆ’ ಎಂದು ಖಾಡೆ ಅಭಿಪ್ರಾಯಪಟ್ಟಿದ್ದಾರೆ.

‘ಇತರ ಕ್ರೀಡೆಗಳ ಹಾಗೇ ಈಜು ಕ್ರೀಡೆಗೂ ಭಾರತದಲ್ಲಿ ಮನ್ನಣೆ ನೀಡಬೇಕು. ಸದ್ಯಕ್ಕಂತೂ ಈಜು ಚಟುವಟಿಕೆಗಳು ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ಸಂಬಂಧ ನಮಗೆ ಯಾರೂ ಸ್ಪಷ್ಟ ಮಾಹಿತಿಯನ್ನೂ ನೀಡುತ್ತಿಲ್ಲ’ ಎಂದು ಅವರು ಭಾನುವಾರ ‘ಟ್ವೀಟ್‌’ ಮಾಡಿದ್ದಾರೆ.

‘ಈಜುಕೊಳಗಳಿಂದ ದೂರ ಉಳಿದು ಮೂರು ತಿಂಗಳು ಕಳೆದಿವೆ. ಉಳಿದ ಕ್ರೀಡಾಪಟುಗಳಿಗೆ ಅಂತರ ಕಾಪಾಡಿಕೊಂಡು ಅಭ್ಯಾಸ ನಡೆಸಲು ಅನುಮತಿ ನೀಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳ ಅನ್ವಯ ತಾಲೀಮು ನಡೆಸಲು ನಮಗೂ ಅವಕಾಶ ನೀಡಬೇಕು’ ಎಂದಿದ್ದಾರೆ.

ಖಾಡೆ, ಸಾಜನ್‌ ಪ್ರಕಾಶ್ ಮತ್ತು ಶ್ರೀಹರಿ ನಟರಾಜ್‌ ಸೇರಿದಂತೆ ಭಾರತದ ಆರು ಮಂದಿ ಈಜುಪಟುಗಳು ಈಗಾಗಲೇ ಟೋಕಿಯೊ ಕೂಟಕ್ಕೆ ‘ಬಿ’ ಅರ್ಹತೆ ಗಳಿಸಿದ್ದಾರೆ. ಇವರೆಲ್ಲಾ ಈಗ ‘ಎ’ ಅರ್ಹತೆಯ ಮೇಲೆ ಕಣ್ಣಿಟ್ಟಿದ್ದಾರೆ.

‘ಪ್ರಮುಖ ಈಜುಪಟುಗಳ ಅಭ್ಯಾಸಕ್ಕೆ ಅನುಮತಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಹಾಗೂ ಕ್ರೀಡಾ ಸಚಿವಾಲಯಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ. ಹೀಗಿದ್ದರೂ ಪ್ರಯೋಜನವಾಗಿಲ್ಲ’ ಎಂದು ಭಾರತ ಈಜು ಸಂಸ್ಥೆಯ (ಎಸ್‌ಎಫ್‌ಐ) ಮಹಾ ಕಾರ್ಯದರ್ಶಿ ಮೋನಾಲ್‌ ಚೋಕ್ಸಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT