ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CWG Swimming| ಈಜು: ಫೈನಲ್‌ಗೆ ಶ್ರೀಹರಿ

Last Updated 30 ಜುಲೈ 2022, 13:00 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಂ (ಪಿಟಿಐ): ಭಾರತದ ಶ್ರೀಹರಿ ನಟರಾಜನ್‌ ಅವರು ಪುರುಷರ ವಿಭಾಗದ 100 ಮೀ. ಬ್ಯಾಕ್‌ಸ್ಟ್ರೋಕ್‌ ಈಜು ಸ್ಪರ್ಧೆಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ 54.55 ಸೆ. ಗಳೊಂದಿಗೆ ಗುರಿ ತಲುಪಿದರು. ಎರಡನೇ ಗುಂಪಿನಲ್ಲಿದ್ದ ಅವರು ಎಂಟು ಸ್ಪರ್ಧಿಗಳಲ್ಲಿ ನಾಲ್ಕನೇ ಸ್ಥಾನ ಹಾಗೂ ಒಟ್ಟಾರೆಯಾಗಿ ಏಳನೇ ಸ್ಥಾನ ಪಡೆದರು. ಫೈನಲ್‌ನಲ್ಲಿ ಎಂಟು ಸ್ಪರ್ಧಿಗಳು ಪೈಪೋಟಿ ನಡೆಸುವರು.

ದಕ್ಷಿಣ ಆಫ್ರಿಕಾದ ಪೀಟರ್‌ ಕೊಯೆಟ್ಜ್‌ 53.67 ಸೆ.ಗಳೊಂದಿಗೆ ಸೆಮಿಫೈನಲ್‌ನಲ್ಲಿ ಅತಿವೇಗದ ಸಮಯ ದಾಖಲಿಸಿದರು. ಹೀಟ್ಸ್‌ನಲ್ಲೂ ಅವರು ಅಗ್ರಸ್ಥಾನದಲ್ಲಿದ್ದರು.

ಬೆಂಗಳೂರಿನ 21 ವರ್ಷದ ಶ್ರೀಹರಿ ಇಲ್ಲಿ ಪದಕ ಜಯಿಸಿದರೆ, ಈಜು ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಳ್ಳಲಿದ್ದಾರೆ.

ಪ್ರಶಾಂತ್‌ ಕರ್ಮಾಕರ್‌ ಅವರು 2010ರ ದೆಹಲಿ ಕಾಮನ್‌ವೆಲ್ತ್‌ ಕ್ರೀಡಾಕೂಟದ ಪ್ಯಾರಾ ಈಜು ವಿಭಾಗದಲ್ಲಿ ಕಂಚು ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರು.

ಶ್ರೀಹರಿ ಅವರು ಕಳೆದ ವರ್ಷ ಟೋಕಿಯೊ ಒಲಿಂಪಿಕ್ ಕೂಟದ ಹೀಟ್ಸ್‌ನಲ್ಲಿ ಸ್ಪರ್ಧಿಸಿದ್ದರಲ್ಲದೆ, ಒಲಿಂಪಿಕ್‌ನಲ್ಲಿ ಪಾಲ್ಗೊಂಡ ಭಾರತದ ಮೊದಲ ಸ್ಪರ್ಧಿ ಎಂಬ ಗೌರವಕ್ಕೆ ಪಾತ್ರರಾಗಿದ್ದರು. 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಅವರು 27ನೇ ಸ್ಥಾನ ಪಡೆದಿದ್ದರು.

ಭಾರತದ ಸಜನ್‌ ಪ್ರಕಾಶ್‌ ಮತ್ತು ಕುಶಾಗ್ರ ರಾವತ್‌ ಅವರು ತಮ್ಮ ಸ್ಪರ್ಧೆಗಳಲ್ಲಿ ಸೆಮಿಫೈನಲ್‌ ಪ್ರವೇಶಿಸಲು ವಿಫಲರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT