ಶನಿವಾರ, ಆಗಸ್ಟ್ 17, 2019
24 °C

ಈಜು: ಆ್ಯಡಂ, ಸೂನ್‌ ದಾಖಲೆ

Published:
Updated:
Prajavani

ಗ್ವಾಂಗ್ಜು, ದಕ್ಷಿಣ ಕೊರಿಯಾ (ಎಎಫ್‌ಪಿ): ಚೀನಾದ ಸೂನ್ ಯಾಂಗ್ ಮತ್ತು ಬ್ರಿಟನ್‌ನ ಆ್ಯಡಂ ಪೀಟಿ ಇಲ್ಲಿ ನಡೆಯುತ್ತಿರುವ ವಿಶ್ವ ಈಜು ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ದಾಖಲೆ ಬರೆದರು. ಆ್ಯಡಂ ಅವರು ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ವಿಶ್ವ ದಾಖಲೆಯನ್ನು ಮುರಿದರೆ, ಸೂನ್‌ ಯಾಂಗ್ 400 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ನಾಲ್ಕನೇ ಚಿನ್ನ ಗೆದ್ದು ದಾಖಲೆ ನಿರ್ಮಿಸಿದರು.

ಒಲಿಂಪಿಕ್ಸ್‌ನಲ್ಲಿ ಮೂರು ಚಿನ್ನ ಗೆದ್ದಿರುವ ಸೂನ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಹಾರ್ಟನ್ ಅವರನ್ನು ಹಿಂದಿಕ್ಕಿದರು. ಚೀನಾದ ಈಜುಪಟು 3 ನಿಮಿಷ, 43.17 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರೆ ಹಾರ್ಟನ್ 3 ನಿಮಿಷ 43.23 ಸೆಕೆಂಡುಗಳಲ್ಲಿ ಸ್ಪರ್ಧೆ ಮುಗಿಸಿದರು. ಇಟಲಿಯ ಗ್ಯಾಬ್ರಿಯೆಲಿ ಡೆಟ್ಟಿ ಕಂಚಿನ ಪದಕ ಗೆದ್ದುಕೊಂಡರು. ಈ ಮೂಲಕ ಸೂನ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 10 ಚಿನ್ನ ಗೆದ್ದ ಸಾಧನೆ ಮಾಡಿದರು. ತೀವ್ರ ನಿರಾಸೆಗೊಂಡ ಹಾರ್ಟನ್ ಪದಕ ಪ್ರಧಾನ ಸಮಾರಂಭದಲ್ಲಿ ಸೂನ್ ಜೊತೆ ವಿಜಯ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೂನ್ ‘ಎಲ್ಲರೂ ನನ್ನಂತೆ ಇರಲು ಸಾಧ್ಯವಿಲ್ಲ. ಅವರ ವರ್ತನೆಗೆ ನಾನೇನೂ ಬೇಸರ ಮಾಡಿಕೊಳ್ಳುವುದಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

ಪ್ರೀಟಿ, 100 ಮೀಟರ್ಸ್‌ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಉತ್ತಮಪಡಿಸಿಕೊಂಡರು. 56.88 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ಸತತ ಮೂರನೇ ಬಾರಿ ವಿಶ್ವ ಚಾಂಪಿಯನ್‌ ಆದರು. ಬ್ರಿಟನ್‌ನ ಜೇಮ್ಸ್‌ ವಿಲ್ಬಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಜಪಾನ್‌ನ ಯಸುಹಿರೊ ಕೊಸೆಕಿ ಮೂರನೇ ಸ್ಥಾನ ಗಳಿಸಿದರು.

Post Comments (+)