ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ; ಕೆಸರುಗದ್ದೆಯಾದ ರಸ್ತೆಗಳು

ಬಿರುಗಾಳಿ, ಭಾರಿ ಗುಡುಗು, ಸಿಡಿಲಿಗೆ ಬೆಚ್ಚಿದ ಜನ; ಕತ್ತಲಿನಲ್ಲಿ ಮುಳುಗಿದ ಹಳ್ಳಿಗಳು
Last Updated 5 ಮೇ 2018, 10:06 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ ರಾತ್ರಿ ಭಾರಿ ಮಳೆ ಸುರಿಯಿತು. ಇದರಿಂದ ಗ್ರಾಮಾಂತರ ಭಾಗಗಳಲ್ಲಿ ಕೆರೆಕಟ್ಟೆಗಳು ತುಂಬಿದವು.

ಪ‍ಟ್ಟಣದಲ್ಲಿ ಸುರಿದ ಮಳೆಗೆ ರಸ್ತೆಗಳು ಜಲಾವೃತಗೊಂಡವು. ರಾಮಸಮುದ್ರಕ್ಕೆ ಹೋಗುವ ರಸ್ತೆಯಂತೂ ಅಕ್ಷರಶಃ ಕೆಸರುಗದ್ದೆಯಂತಾಯಿತು. ದ್ವಿಚಕ್ರ ವಾಹನ ಸವಾರರು ಪರದಾಡಬೇಕಾಯಿತು.

ದೊಡ್ಡ ಅಂಗಡಿ ಬೀದಿ ಕೆರೆಯಂತಾಗಿದ್ದು, ಶುಕ್ರವಾರ ವ್ಯಾಪಾರ ವಹಿವಾಟು ಬಹುತೇಕ ಕಡಿಮೆಯಾಗಿತ್ತು. ರಸ್ತೆಯಲ್ಲಿ ಕಾಲಿಡಲು ಆಗದಷ್ಟು ನೀರು ನಿಂತಿದ್ದು, ಕೆಲವೆಡೆ ಮೊಣಕಾಲುದ್ದ ನೀರಿನಲ್ಲಿ ನಡೆಯಬೇಕಾಗಿತ್ತು. ಇದರಿಂದ ಸಾರ್ವಜನಿಕರು ಹೈರಣಾದರು.‌

ರಾತ್ರಿ ಬೀಸಿದ ಭಾರಿ ಬಿರುಗಾಳಿ ಜನರಲ್ಲಿ ಆತಂಕ ತಂದೊಡ್ಡಿತು. ಇದರ ಜತೆಯಲ್ಲಿ ಕೇಳಿ ಬಂದ ಗುಡುಗು ಸಿಡಿಲುಗಳು ಭೀತಿಯನ್ನು ಸೃಷ್ಟಿಸಿದವು. ರಾತ್ರಿ 1.30ರ ಸಮಯದಲ್ಲಿ ಅಪ್ಪಳಿಸಿದ ಭಾರಿ ಸಿಡಿಲಿನ ಶಬ್ದ ಜಿಲ್ಲೆಯಾದ್ಯಂತ ಕೇಳಿ ಬಂದು ಆಶ್ಚರ್ಯ ತರಿಸಿತು.

ಕೊಳ್ಳೇಗಾಲದ ದೊಡ್ಡಿಂದುವಾಡಿ ಹಾಗೂ ಸಿಂಗಾನಲ್ಲೂರು ಗ್ರಾಮಪಂಚಾಯಿತಿ ವ್ಯಾ‍ಪ್ತಿಯಲ್ಲಿ ಅತ್ಯಧಿಕ 108 ಮಿ.ಮೀ, ಪುಣುಜನೂರು ವ್ಯಾಪ್ತಿಯಲ್ಲಿ 104.5 ಮಿ.ಮೀ ನಷ್ಟು ಮಳೆಯಾಗಿದೆ. ಹೊಂಡರಬಾಳುವಿನಲ್ಲಿ 84, ಸಿದ್ದಯ್ಯನಪುರದಲ್ಲಿ 74, ಪಿ.ಜಿ.ಪಾಳ್ಯದಲ್ಲಿ 70 ಮಿ.ಮೀನಷ್ಟು ಮಳೆ ಸುರಿದಿದೆ.

ಎಡೆಬಿಡದೆ ಸುರಿದ ಮಳೆ

ಹನೂರು: ತಾಲ್ಲೂಕು ಕೇಂದ್ರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಕೆರೆಕಟ್ಟೆಗಳು ತುಂಬಿ ಹರಿದಿವೆ. ರಾತ್ರಿ 10 ಗಂಟೆಗೆ ಗುಡುಗು, ಮಿಂಚು ಸಹಿತ ಪ್ರಾರಂಭವಾದ ಮಳೆ ಮಧ್ಯರಾತ್ರಿ 2 ಗಂಟೆಯವರೆಗೆ ಎಡೆಬಿಡದೆ ಸುರಿದಿದೆ.

ತಾಲ್ಲೂಕಿನ ಅಲುಗುಮೂಲೆ ಮಣಗಳ್ಳಿ ಚಿಂಚಳ್ಳಿ ಶಾಗ್ಯ, ಕೌದಳ್ಳಿ, ಲೊಕ್ಕನಹಳ್ಳಿ, ಕಣ್ಣೂರು, ಚೆನ್ನಾಲಿಂಗನಹಳ್ಳಿ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆಗೆ ಪಟ್ಟಣದ ಆರ್.ಎಸ್.ದೊಡ್ಡಿ ಕೆರೆ ಸೇರಿದಂತೆ ಭರಹಳ್ಳ, ಯಡಹಳ್ಳ, ಮಣಗಳ್ಳಿ ಹಳ್ಳ ತುಂಬಿ ಹರಿದು ರೈತರ ಜಮೀನುಗಳಿಗೆ ನುಗ್ಗಿವೆ.

ಎರಡು ದಿನಗಳಿಂದ ನಿರಂತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪದೇ ಪದೇ ವಿದ್ಯುತ್ ವ್ಯತ್ಯಯ ಆಗುತ್ತಿರುವುದರಿಂದ ಗ್ರಾಮಗಳು ಕಗ್ಗತ್ತಲ್ಲಿನಲ್ಲಿರುವಂತಾಗಿದೆ.

ಧರೆಗುರುಳಿದ ಮರಗಳು

ಯಳಂದೂರು: ತಾಲ್ಲೂಕಿನಾದ್ಯಂತ ಗುರುವಾರ ಮಧ್ಯರಾತ್ರಿ ಸುರಿದ ಬಿರುಗಾಳಿ ಮಳೆಗೆ ಅನೇಕ ಮರಗಳು ಧರೆಗುರುಳಿವೆ.

ಪಟ್ಟಣದ ಸಂತೆಮರಹಳ್ಳಿಯ ರಸ್ತೆಯ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ನೀಲಗಿರಿ ಮರ ಬಿದ್ದು ರಾತ್ರಿಯಿಂದ ಬೆಳಗಿನ ಜಾವದ ವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಅರಣ್ಯ ಇಲಾಖೆಯ ಸಿಬ್ಬಂಧಿ ಮರವನ್ನು ತೆರವುಗೊಳಿಸಿದ ನಂತರ ವಾಹನ ಸಂಚಾರ ಪುನರಾರಂಭಗೊಂಡಿತು. ಕೆ. ಹೊಸೂರು ಗ್ರಾಮದಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿ ತಾಲ್ಲೂಕಿನಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ, ಗೌಡಹಳ್ಳಿ, ಯರಗಂಬಳ್ಳಿ, ಗುಂಬಳ್ಳಿ ಗ್ರಾಮದಲ್ಲೂ ಭಾರಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT