ಸೋಮವಾರ, ಡಿಸೆಂಬರ್ 9, 2019
17 °C

ಟೇಬಲ್‌ ಟೆನಿಸ್‌ ಟೂರ್ನಿ: ಅನರ್ಘ್ಯ, ಅನಿರ್ಬನ್‌ಗೆ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ಅಮೋಘ ಆಟವಾಡಿದ ಅನರ್ಘ್ಯ ಮಂಜುನಾಥ ಮತ್ತು ಅನಿರ್ಬನ್‌ ರಾಯ್‌ ಚೌಧರಿ ಸಿ.ವಿ.ಎಲ್‌. ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ
ಗೆದ್ದುಕೊಂಡರು.

ಇಲ್ಲಿಯ ಚಾಂಪಿಯನ್ಸ್‌ ಟೇಬಲ್‌ ಟೆನಿಸ್‌ ಕೇಂದ್ರದಲ್ಲಿ ಬುಧವಾರ ಚಾಂಪಿಯನ್‌ಷಿಪ್‌ ನಡೆಯಿತು. ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್‌ ಪಂದ್ಯದಲ್ಲಿ ಅನರ್ಘ್ಯ ಅವರು ಮರಿಯಾ ರೋನಿ ಅವರನ್ನು 14–12, 11–2, 12–10, 12–14, 3–11, 9–11, 11–1ರಿಂದ ಮಣಿಸಿದರು. ಸೆಮಿಫೈನಲ್‌ ಪಂದ್ಯದಲ್ಲಿ ಅನರ್ಘ್ಯ, ಖುಷಿ ವಿ. ಅವರನ್ನು 6–11, 12–10, 7–11, 18–16, 9–11, 11–8, 11–4ರಿಂದ ಮಣಿಸಿದ್ದರು.

ಪುರುಷರ ಸಿಂಗಲ್ಸ್ ವಿಭಾಗದ ಅಂತಿಮ ಪಂದ್ಯದಲ್ಲಿ ಅನಿರ್ಬನ್‌ ರಾಯ್‌ ಚೌಧರಿ ಅವರು ಸಮರ್ಥ್‌ ಕುರಡಿಕೇರಿ ಎದುರು 12–10, 9–11, 13–11, 11–6, 11–6ರಿಂದ ಗೆದ್ದರು. ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಅನಿರ್ಬನ್‌ ಅವರು ಎಂ.ಕಳೈವನನ್‌ ಎದುರು 11–8, 11–9, 9–11, 10–12, 11–5, 11–6ರಿಂದ ಜಯ ಸಾಧಿಸಿದ್ದರು.

ಬಾಲಕಿಯರ ಜೂನಿಯರ್‌ ವಿಭಾಗದ ಪ್ರಶಸ್ತಿಯೂ ಅನರ್ಘ್ಯ ಮಂಜುನಾಥ್‌ ಪಾಲಾಯಿತು. ಫೈನಲ್‌ ಪಂದ್ಯದಲ್ಲಿ ಅವರು ಯಶಸ್ವಿನಿ ಘೋರ್ಪಡೆ ಅವರನ್ನು 8–11, 6–11, 11–7, 15–13, 11–9, 4–11, 11–7ರಿಂದ ಪರಾಭವಗೊಳಿಸಿದರು. ಸೆಮಿಫೈನಲ್‌ ಹಣಾಹಣಿಯಲ್ಲಿ ಅನರ್ಘ್ಯ, ಕರುಣಾ ಗಜೇಂದ್ರನ್‌ ಎದುರು 12–10, 11–8, 11–4, 11–6ರಿಂದ ಜಯ ಸಾಧಿಸಿದ್ದರು.

ಬಾಲಕರ ಜೂನಿಯರ್‌ ವಿಭಾಗದಲ್ಲಿ ಸುಜನ್‌ ಆರ್‌. ಭಾರದ್ವಾಜ್‌ ಪ್ರಶಸ್ತಿ ಒಲಿಸಿಕೊಂಡರು.

ಅಂತಿಮ ಪಂದ್ಯದಲ್ಲಿ ಅವರು ಪಿ.ವಿ. ಶ್ರೀಕಾಂತ್‌ ಕಶ್ಯಪ್‌ ಎದುರು 11–3, 11–8, 11–7, 11–7ರಿಂದ ಗೆದ್ದರು. ನಾಲ್ಕರ ಘಟ್ಟದ ಪಂದ್ಯದಲ್ಲಿ ಸುಜನ್‌ ಅವರು ಎಸ್‌.ಕಿರಣ್‌ ಆಶಿಶ್‌ ಅವರನ್ನು 8–11, 7–11, 11–7, 11–6, 11–5, 11–5ರಿಂದ ಸೋಲಿಸಿದ್ದರು.

ಕೆಡೆಟ್‌ ಬಾಲಕರ ಸಿಂಗಲ್ಸ್‌ ಫೈನಲ್‌ನಲ್ಲಿ ಸಾನ್ವಿ ವಿಶಾಲ್‌ ಮಾಂಡೇಕರ್‌ ಅವರು ನೀತಿ ಅಗರವಾಲ್‌ ಅವರನ್ನು 5–11, 11–9, 11–8, 7–11, 11–8ರಿಂದ ಸೋಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು. ಸೆಮಿಫೈನಲ್‌ನಲ್ಲಿ ಸಾನ್ವಿ , ಹಂಸಿನಿ ಅರುಣ್‌ ಎದುರು 16–14, 6–11, 11–7, 11–4ರಿಂದ ಗೆದ್ದಿದ್ದರು.

ಕೆಡೆಟ್‌ ಬಾಲಕರ ವಿಭಾಗದ ಪ್ರಶಸ್ತಿ ಆಯುಷ್‌ ಕೆ. ಪಾಲಾಯಿತು. ಫೈನಲ್‌ನಲ್ಲಿ ಅವರು ಸಿದ್ಧಾಂತ್‌ ವಾಸನ್‌ ಅವರನ್ನು 11–4, 7–11, 11–7, 11–2ರಿಂದ ಮಣಿಸಿದರು. ಸೆಮಿಫೈನಲ್‌ ಹಣಾಹಣಿಯಲ್ಲಿ ಆಯುಷ್‌, ಬಿ.ಎನ್‌.ಶ್ರೀಜಿತ್‌ ಎದುರು 11–9, 11–3, 12–10ರಿಂದ ಗೆದ್ದಿದ್ದರು. 

ಆಕಾಶ್‌ ಕೆ.ಜೆ. ಅವರು ‘ವರ್ಷದ ಆಟಗಾರ’ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಯಶಸ್ವಿನಿ ಘೋರ್ಪಡೆ ಅವರಿಗೆ ‘ವರ್ಷದ ಆಟಗಾರ್ತಿ’ ಗೌರವ ಒಲಿಯಿತು.

ಪ್ರತಿಕ್ರಿಯಿಸಿ (+)